ರಾಮನಗರದಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಇಂದಿನಿಂದ ಪುನರಾರಂಭ

posted in: ರಾಜ್ಯ | 0

ರಾಮನಗರ: ಐದು ದಿನಗಳ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಇಂದು, ಭಾನುವಾರದಿಂದ, ರಾಮನಗರದಲ್ಲಿ ಆರಂಭಗೊಂಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲಾ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಮುಖಂಡರಾದ ಎಚ್.ಕೆ. ಪಾಟೀಲ, ಎಂ.ಬಿ ಪಾಟೀಲ, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಡಿ.ಕೆ. ಸುರೇಶ್ ಮೊದಲಾದವರಿದ್ದರು. ನಾಯಕರ ಜೊತೆಗೆ ನೂರಾರು ಕಾರ್ಯಕರ್ತರು ರಾಮನಗರದಿಂದ ಬೆಂಗಳೂರಿನತ್ತ ಹೆಜ್ಜೆ ಹಾಕಿದರು.

ಕಳೆದ ತಿಂಗಳು ಕನಕಪುರದ ಕೂಡಲ ಸಂಗಮದಿಂದ ಆರಂಭವಾಗಿದ್ದ ಮೇಕೆದಾಟು ಪಾದಯಾತ್ರೆ ೪ ದಿನಗಳ ನಂತರ ಕೊರೊನಾ ೩ನೇ ಅಲೆ ಕಾರಣದಿಂದ ರಾಮನಗರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇಂದು ರಾಮನಗರದಿಂದಲೇ ಪಾದಯಾತ್ರೆ ಪುನರಾರಂಭಗೊಂಡಿದ್ದು, ಮಾ. ೩ ರಂದು ಬೆಂಗಳೂರಿನಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಪಾದಯಾತ್ರೆ ಆರಂಭಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಮನಗರದ ದರ್ಗಾಕ್ಕೂ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಕೆಂಗಲ್ ಸ್ಮಾರಕ ಸ್ಥಳಕ್ಕೂ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

ಓದಿರಿ :-   ಯುವಕನ ಕೈಗೆ ಮಗುಕೊಟ್ಟು ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರೀತಿಗೆ ಅಡ್ಡಿಯಾದ ಮಗುವನ್ನು ದೂರ ಮಾಡಲು ಪ್ರೇಮಿ-ಪ್ರೇಮಿಕಾ ಮಾಡಿದ ಬೃಹನ್ನಾಟಕ ಬೆಳಕಿಗೆ..!

ಮೊದಲ ದಿನವಾದ ಇಂದು ೧೬ ಕಿ.ಮೀ ರಾಮನಗರದಿಂದ ಬಿಡದಿವರೆಗೂ ಪಾದಯಾತ್ರಿಗಳು ನಡೆಯಲಿದ್ದು, ಬಿಡದಿಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಮಧ್ಯಾಹ್ನ ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಪಾದಯಾತ್ರೆಯಿಂದ ಬೆಂಗಳೂರು-ಮೈಸೂರಿಗೆ ತೆರಳುವ ವಾಹನಗಳಿಗೆ ಮಾತ್ರ ಹೆದ್ದಾರಿಯಲ್ಲಿ ಅವಕಾಶ ನೀಡಲಾಗಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುವವರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಭದ್ರತೆ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಒಬ್ಬರು ಎಸ್‌ಪಿ, ಇಬ್ಬರು ಎಎಸ್‌ಪಿ, ೪ ಡಿವೈಎಸ್ಪಿ, ೧೨ ಮಂದಿ ಇನ್ಸ್‌ಪೆಕ್ಟರ್‌ಗಳು, ೩೦ ಪಿಎಸ್‌ಐ, ೩೭ ಎಎಸ್‌ಐ, ೬೦೦ ಪೋಲಿಸ್ ಕಾನ್ಸ್‌ಟೇಬಲ್, ೫೦ ಮಹಿಳಾ ಕಾನ್ಸ್‌ಟೇಬಲ್, ೧೦೦ ಮಂದಿ ಹೋಂಗಾರ್ಡ್‌ಗಳು, ೨೦ ಕೆಎಸ್‌ಆರ್‌ಪಿ ತುಕಡಿ, ೧೨ ಡಿಎಆರ್ ತುಕಡಿ ಸೇರಿದಂತೆ ೧,೨೦೦ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ