ಎಲ್. ಎಸ್. ಶಾಸ್ತ್ರಿಯವರ ಐದು ಕೃತಿಗಳ ಬಿಡುಗಡೆ, ವೇದ ರಚಿಸಿರುವುದು ಕೇವಲ ಮಡಿವಂತಿಕೆಗಾಗಿ ಅಲ್ಲ- ನಾರಾಯಣ ಯಾಜಿ

ಬೆಳಗಾವಿ :ವೇದ ರಚಿಸಿರುವುದು ಕೇವಲ ಮಡಿವಂತಿಕೆಗಾಗಿ ಅಲ್ಲ. ಪ್ರಕೃತಿಯನ್ನು ಆರಾಧಿಸುವ ಉದ್ದೇಶದಿಂದ ಅದನ್ನು ರಚಿಸಲಾಗಿದೆ. ಅದರಲ್ಲಿರುವ ಕಾವ್ಯದ ಸೌಂದರ್ಯವನ್ನು ತೋರಿಸುವುದಕ್ಕಾಗಿ, ಛಂದಸ್ಸಿನ ಕಾರಣಕ್ಕಾಗಿ ರಚಿಸಲಾಗಿದೆ ಎಂದು ಖ್ಯಾತ ಅಂಕಣಕಾರ, ನಾರಾಯಣ ಯಾಜಿ ಸಾಲೆಬೈಲು ಹೇಳಿದರು.
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನವರು ಭಾನುವಾರ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಿರಿಯ ಪತ್ರಕರ್ತ, ಲೇಖಕ ಎಲ್. ಎಸ್. ಶಾಸ್ತ್ರಿಯವರ ಐದು ಕೃತಿಗಳ ಬಿಡುಗಡೆ ಮತ್ತು ಅವಲೋಕನ ಕಾರ್ಯಕ್ರಮದಲ್ಲಿ ಸಾಮವೇದ(ಅನುವಾದ), ಅಥರ್ವವೇದ(ಅನುವಾದ) ಹಾಗೂ ಯಕ್ಷನಕ್ಷತ್ರಗಳು ಕೃತಿಗಳನ್ನು ಪರಿಚಯಿಸಿ ಮಾತನಾಡಿದ ನಾರಾಯಣ ಯಾಜಿಯವರು ಈ ರೀತಿ ಅಭಿಪ್ರಾಯಪಟ್ಟರು. ಅದರ ಸ್ವರೂಪದಿಂದಾಗಿ ಅದು ಅಷ್ಟು ಎತ್ತರದಲ್ಲಿ ನಿಂತಿದೆ. ಅಧ್ಯಯನ ಮಾಡುವುದಕ್ಕಾಗಿ ವೇದವನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಕೃತಿಕಾರ ಶಾಸ್ತ್ರಿಯವರು ವೇದಗಳ ಕುರಿತಂತೆ ಪುಸ್ತಕದಲ್ಲಿ ಉದಾಹರಣೆಯಾಗಿ ಬರೆದು ತೋರಿಸಿದ್ದಾರೆ ಎಂದು ಹೇಳಿದರು.
ಯಕ್ಷನಕ್ಷತ್ರ ಕೃತಿಯ ಕುರಿತು ಮಾತನಾಡಿದ ಯಾಜಿಯವರು, ಇಲ್ಲಿ ಬಂದಿರುವ ಎಲ್ಲ ಖ್ಯಾತನಾಮರು ಶಾಸ್ತ್ರಿಯವರಿಗೆ ಬಾಲ್ಯದಿಂದಲೂ ಒಡನಾಡಿಗಳು. ಅವರೆಲ್ಲ ಕಲೆಯನ್ನ ನೋಡಿ ಅಭ್ಯಸಿಸಿ ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇವರ ಪರಿಚಯ ಒಂದೆಡೆ ಸಿಗುವಂತೆ ಮಾಡಿದ್ದಾರೆ ಎಂದು ಹೇಳಿದರು.
‘ದೈನಂದಿನ ದಾಸಬೋಧೆ’ ಕೃತಿಯ ಕುರಿತು ಲೇಖಕ ಪಿ.ಬಿ. ಸ್ವಾಮಿ ಮಾತನಾಡಿ, ಇಲ್ಲಿ ದಾಸರು, ವಚನಕಾರರು ಇದ್ದಂತೆ ಮಹಾರಾಷ್ಟ್ರದಲ್ಲಿ ಸಂತ ಪರಂಪರೆಯಿದೆ. ಸಂತರಲ್ಲಿ ಶ್ರೇಷ್ಠರೆಂದರೆ ರಾಮದಾಸರು. ರಾಜಕಾರಣಕ್ಕೆ ಸಮಾಜಕಾರಣಕ್ಕೆ ಆಧ್ಯಾತ್ಮಿಕರಣದ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದರು.
ಮರೆಯಲಾಗದ ಮಹಾನುಭಾವರು ಕೃತಿಯ ಕುರಿತು ಮಾತನಾಡಿದ ಲೇಖಕ ಡಾ. ಸಿ. ಕೆ. ಜೋರಾಪುರ ಮಾತನಾಡಿ, ಡಾ, ಎಂ. ಸಿ. ಮೋದಿ, ಗಂಗಾಧರರಾವ್ ದೇಶಪಾಂಡೆ, ಡಾ. ಯು. ಆರ್. ಅನಂತಮೂರ್ತಿ, ಆರ್. ಕೆ. ಲಕ್ಷ್ಮಣ, ಕೆ ಕೆ. ಹೆಬ್ಬಾರ ಹೀಗೆ ೧೦೦ ಜನರ ಸಂಕ್ಷಿಪ್ತ ಪರಿಚಯವನ್ನು ಎಲ್. ಎಸ್. ಶಾಸ್ತ್ರಿಯವರು ಒಂದೆಡೆ ಹಿಡಿದಿಟ್ಟಿದ್ದಾರೆ. ಸಂಗ್ರಾಹ್ಯಯೋಗ್ಯ ಪುಸ್ತಕವನ್ನು ಕೊಟ್ಟ ಕೃತಿಕಾರರು ಅಭಿನಂದನಾರ್ಹರು ಎಂದು ಹೇಳಿದರು.
ಕೃತಿಕಾರ ಎಲ್. ಎಸ್. ಶಾಸ್ತ್ರಿಯವರು ಮಾತನಾಡಿ ಐದು ಕೃತಿಗಳು ಹೊರಬರಲು ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡರು.
ಡಾ. ಬಸವರಾಜ ಜಗಜಂಪಿ, ಪ್ರೊ. ಎಂ. ಎಸ್. ಇಂಚಲ, ಸುನಂದಾ ಎಮ್ಮಿ, ವಾಸಂತಿ ಮೆಳೇದ, ನೀಲಗಂಗಾ ಚರಂತಿಮಠ, ಡಾ. ಹೇಮಾವತಿ ಸೊನೊಳ್ಳಿ, ಶ್ರೀರಂಗ ಜೋಶಿ, ಪ್ರೊ. ಜಿ. ಕೆ. ಕುಲಕರ್ಣಿ, ಜಿ. ಎಸ್. ಸೋನಾರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಶೋಕ ಮಳಗಲಿ ನಿರೂಪಿಸಿದರು. ಸುನಂದಾ ಮುಳೆ ಪ್ರಾರ್ಥಿಸಿದರು. ದೀಪಿಕಾ ಚಾಟೆ ಸ್ವಾಗತಿಸಿದರು. ಗುಂಡೇನಟ್ಟಿ ಮಧುಕರ ಪರಿಚಯಿಸಿದರು. ಆನಂದ ಪುರಾಣಿಕ ವಂದಿಸಿದರು.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement