10 ನಿಮಿಷದಲ್ಲಿ 11.71 ಲಕ್ಷ ಹಣತೆ ದೀಪ ಬೆಳಗಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಉಜ್ಜಯಿನಿ..! ವೀಕ್ಷಿಸಿ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ದೇಗುಲ ಪಟ್ಟಣವು ಮಂಗಳವಾರ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ‘ಶಿವಜ್ಯೋತಿ ಅರ್ಪಣಂ ಮಹೋತ್ಸವ’ದ ಅಂಗವಾಗಿ ಮಹಾಕಾಳೇಶ್ವರ ದೇವಸ್ಥಾನ, ಕ್ಷಿಪ್ರಾ ನದಿಯ ದಡ ಮತ್ತು ಉಜ್ಜಯಿನಿಯ ಇತರ ಧಾರ್ಮಿಕ, ಸಾರ್ವಜನಿಕ ಸ್ಥಳಗಳು ಮತ್ತು ವೈಯಕ್ತಿಕ ಮನೆಗಳಲ್ಲಿ ಏಕಕಾಲದಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು (ಹಣತೆಗಳು) ಬೆಳಗಿಸುವುದರ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಐವರು ಸದಸ್ಯರ ನಿಯೋಗವು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ದಾಖಲೆಯ ಪ್ರಮಾಣಪತ್ರವನ್ನು ನೀಡಿತು. ಸ್ಥಳದಲ್ಲಿ ಐದು ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿತ್ತು.
ರಾಜ್ಯ ಸರ್ಕಾರದ ‘ಶಿವಜ್ಯೋತಿ ಅರ್ಪಣಂ’ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಪತ್ನಿ ಸಾಧನಾ ಸಿಂಗ್ ಅವರೊಂದಿಗೆ ಕ್ಷಿಪ್ರಾ ತೀರದಲ್ಲಿರುವ ರಾಮ್ ಘಾಟ್‌ನಲ್ಲಿ 15 ದೀಪಗಳನ್ನು ಬೆಳಗಿಸಿದರು. ಪ್ರತಿ ವರ್ಷ ಮಹಾಶಿವರಾತ್ರಿಯಂದು ಉಜ್ಜಯಿನಿಯಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಹೇಳಿದರು.

ಮಂಗಳವಾರ ಸಂಜೆ 6:42ಕ್ಕೆ ಕಾರ್ಯಕ್ರಮ ಆರಂಭಗೊಂಡಿದ್ದು, ಕೆಲವೇ ನಿಮಿಷಗಳಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ 11,71,078 ದೀಪಗಳು ಬೆಳಗಿದವು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರತಿನಿಧಿಗಳು ಸಂಜೆ 6:53 ಕ್ಕೆ ದೀಪಗಳನ್ನು ಎಣಿಸಲು ಪ್ರಾರಂಭಿಸಿದರು ಮತ್ತು ಸ್ವಲ್ಪ ಸಮಯದ ನಂತರ ಪ್ರತಿನಿಧಿ ನಿಶ್ಚಲ್ ಬರೋಟ್ ಹೊಸ ವಿಶ್ವ ದಾಖಲೆಯನ್ನು ಘೋಷಿಸಿದರು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ನವೆಂಬರ್ 2021 ರಲ್ಲಿ, ಅಯೋಧ್ಯೆಯಲ್ಲಿ ಏಕಕಾಲದಲ್ಲಿ ಹೆಚ್ಚಿನ ದೀಪಗಳನ್ನು ಬೆಳಗಿಸುವ ದಾಖಲೆಯನ್ನು ಸ್ಥಾಪಿಸಲಾಯಿತು. ದಾಖಲೆ ಘೋಷಣೆಯಾಗುತ್ತಿದ್ದಂತೆ ಉಜ್ಜಯಿನಿಯ ಜನರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದರು.
ಮಹಾಕಾಲ ದೇವರ ಆಶೀರ್ವಾದ ಮತ್ತು ಸಾಮಾನ್ಯ ಜನರ ಭಕ್ತಿಯಿಂದ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ವಿಶಿಷ್ಟ ದಾಖಲೆ ನಿರ್ಮಿಸುವ ಅವಕಾಶ ಬಂದಿರುವುದು ನನ್ನ ಅದೃಷ್ಟ ಎಂದು ಮುಖ್ಯಮಂತ್ರಿ ಚೌಹಾಣ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವೆ ಉಷಾ ಠಾಕೂರ್, ಉಜ್ಜಯಿನಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ದೇವದಾ, ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್, ಸಂಸದ ಅನಿಲ್ ಫಿರೋಜಿಯಾ, ಶಾಸಕರಾದ ಪಾರಸ್ ಜೈನ್ ಮತ್ತು ಬಹದ್ದೂರ್ ಸಿಂಗ್ ಚೌಹಾಣ ಮತ್ತು ಇತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿರಿ :-   ಮಸೀದಿಗಳಿಂದ ತೆಗೆದ ಧ್ವನಿವರ್ಧಕಗಳನ್ನು ಶಾಲೆ, ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ: ಯೋಗಿ ಆದಿತ್ಯನಾಥ

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ