ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನ ಬಿಟ್ಟು ಬೇರೆಲ್ಲೂ ಮೆರವಣಿಗೆ, ಪ್ರತಿಭಟನೆ ನಡೆಸಕೂಡದು: ಹೈಕೋರ್ಟ್‌

ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ, ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ನಗರದ ಬೇರೆಲ್ಲೂ ಯಾವುದೇ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸದಂತೆ ರಾಜ್ಯ ಸರ್ಕಾರ ಖಾತ್ರಿ ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಕಟ್ಟುನಿಟ್ಟಿನ ಆದೇಶ ಮಾಡಿದೆ.

ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಇತರ ಕಡೆ ಪ್ರತಿಭಟನೆ ಮತ್ತು ಪಾದಯಾತ್ರೆ ಮಾಡುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.
2021ರಲ್ಲಿ ನಗರದಲ್ಲಿ ಟ್ರಾಫಿಕ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ ಗೆ ಬರೆದ ಪತ್ರವನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರ ಕಡೆ ಪ್ರತಿಭಟನೆ ಅಥವಾ ಅಂತಹ ಯಾವುದೇ ಚಟುವಟಿಕೆಗಳನ್ನು ನಡೆಸಿದರೆ, ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
“ಸಾರ್ವಜನಿಕ ಸಭೆ, ಪ್ರತಿಭಟನೆ ಇತ್ಯಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇ-ಗೆಜೆಟ್ ನಿಯಮಗಳನ್ನು ಸಲ್ಲಿಸಿದೆ. ಇದರ ಅಡಿ ರಾಜ್ಯ ಪೊಲೀಸ್‌ ಕಾಯಿದೆಯ ಸೆಕ್ಷನ್‌ 103 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188ರ ಅಡಿ ವ್ಯಾಪ್ತಿ ಹೊಂದಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಬಹುದು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ವಿಚಾರಣೆಯನ್ನು ಏಪ್ರಿಲ್‌ 5ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement