ಉಕ್ರೇನ್‌ನಲ್ಲಿ ಸಾವಿಗೀಡಾದ ನವೀನ್ ಮನೆಗೆ ಸಿಎಂ ಭೇಟಿ, ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಹಾವೇರಿ: ಯುದ್ಧಪೀಡಿತ ಉಕ್ರೇನ್​ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್​ ದಾಳಿಯಲ್ಲಿ ಮೃತಪಟ್ಟ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ನವೀನಗೆ ಸಲ್ಲಿಸಿದ ಬೊಮ್ಮಾಯಿ, ಮೃತನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಹಾಗೂ ಸಹೋದರನಿಗೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.
ನವೀನನ ಮೃತದೇಹವನ್ನು ತರಿಸಿಕೊಡಿ ಎಂದು ಪಾಲಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನವೀನನ ಮೃತದೇಹ ತರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನವೀನ ಪಾರ್ಥೀವ ಶರೀರವನ್ನ ತಾಯ್ನಾಡಿಗೆ ತರಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಇವತ್ತು ಯುದ್ದ ವಿರಾಮ ಆಗಿದೆ. ಹೀಗಾಗಿ ಆದಷ್ಟು ಬೇಗ ಪಾರ್ಥೀವ ಶರೀರವನ್ನ ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಪರಿಶೀಲನೆ ಬಗ್ಗೆ ಚಿಂತನೆ ನಡೆಸಲಾಗುವುದು.ಕೇಂದ್ರ ಮಟ್ಟದಲ್ಲೂ ದೊಡ್ಡ ಚರ್ಚೆ ಆಗಿದೆ. ಎಂಬಿಬಿಎಸ್ ಸೆಲೆಕ್ಷನ್ ಪ್ರಕ್ರಿಯೆ, ಸೀಟು ಹಂಚಿಕೆ ಕೇಂದ್ರ‌ ಮಟ್ಟದಲ್ಲಿ ಚರ್ಚೆ ಆಗಲಿದೆ. ಎಲ್ಲ ವಿಷಯಗಳ ಬಗ್ಗೆ ಚರ್ಚೆ ಆಗಿದೆ. ನವೀನ ಪಾರ್ಥೀವ ಶರೀರ ಹಾಗೂ ಅಲ್ಲಿ ಸಿಲುಕಿಕೊಂಡಿರೋರನ್ನ ಕರೆತರುವುದು ನಮ್ಮ ಮುಂದಿರುವ ಎರಡು ದೊಡ್ಡ ಸವಾಲು ಎಂದು ಹೇಳಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement