ಮಾಸ್ಕೊ: ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿರುವ ರಷ್ಯಾ ಈಗ ನಿಧಾನವಾಗಿ ಸಂಕಷ್ಟಕ್ಕೆ ಸಿಲುಕುತ್ತಿದೆ.. ದೇಶದಲ್ಲಿ ಆಹಾರ ಪದಾರ್ಥಗಳ ಅಭಾವ ಕಾಣಿಸಿಕೊಳ್ಳುವ ಲಕ್ಷಣ ಕಾಣುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಸರ್ಕಾರವು ಖರೀದಿಗೆ ಮಿತಿ ಹೇರಲು ಮುಂದಾಗಿದೆ. ಆಹಾರ, ಮಾಂಸ, ಬೇಕರಿ ಪದಾರ್ಥಗಳು, ಡೈರಿ ಉತ್ಪನ್ನಗಳು ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಯನ್ನೂ ಸರ್ಕಾರವೇ ನಿಯಂತ್ರಿಸುವುದಾಗಿಯೂ ಹೇಳಿದೆ.
ದೇಶದ ಹಲವು ಕಡೆಗಳಲ್ಲಿ ಜನರು ಅಗತ್ಯಕ್ಕಿಂತ ಬಹಳ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ. ಇದರ ಹಿಂದೆ ಮಾರಾಟ ಅಥವಾ ವೈಯಕ್ತಿಕ ಬಳಕೆಯ ಉದ್ದೇಶವೇ ಇದ್ದಿರಬಹುದು, ಆದರೆ ಸದ್ಯದ ಸ್ಥಿತಿಯಲ್ಲಿ ಎಲ್ಲರಿಗೂ ಕಡಿಮೆ ದರದಲ್ಲಿ ಆಹಾರ ಪದಾರ್ಥಗಳು ಸಿಗಲಿ ಎನ್ನುವ ಉದ್ದೇಶದಿಂದ ಖರೀದಿ ಮಿತಿ ಮತ್ತು ದರ ನಿಯಂತ್ರಣಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ರಷ್ಯಾದ ಕೈಗಾರಿಕೆ ಮತ್ತು ವ್ಯಾಪಾರ ಸಚಿವಾಲಯ ತಿಳಿಸಿದೆ. ಇನ್ನು ಮುಂದೆ ಆಹಾರ ಮಳಿಗೆಗಳಲ್ಲಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಆಹಾರ ಪದಾರ್ಥಗಳು ಮಾತ್ರ ಲಭ್ಯವಾಗಲಿವೆ.
ಎರಡು ವಾರ ಹಿಂದೆ ಉಕ್ರೇನ್ ಮೇಲೆ ದಾಳಿ ಶುರುವಾದ ಬೆನ್ನಲ್ಲಿಯೇ ರಷ್ಯಾದ ಕಡೆಗಳಲ್ಲಿ ಜನರು ಆಹಾರ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದರು. ಕೆಲವರು ಮುಂದೆ ಕೊರತೆಯಾಗಬಹುದು ಎಂಬ ಭಯದಲ್ಲಿ ಅನಗತ್ಯಕ್ಕಿಂತ ಹೆಚ್ಚು ಅಂದರೆ ಟನ್‌ಗಟ್ಟಳೆ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿದ್ದಾರೆ. ಜನರನ್ನು ನಿಯಂತ್ರಿಸುವ ಉದ್ದೇಶದಿಂದ ಖರೀದಿಗೆ ನಿರ್ಬಂಧ ವಿಧಿಸುವಂತೆ ಚಿಲ್ಲರೆ ವರ್ತಕರು ಸಹ ಸರ್ಕಾರದ ಮೊರೆ ಹೋಗಿದ್ದರು. ಅದಕ್ಕೂ ಸ್ಪಂದಿಸಿರುವ ಸರ್ಕಾರ ಮಳಿಗೆಯೊಂದರಲ್ಲಿ ಒಬ್ಬ ವ್ಯಕ್ತಿ ಒಮ್ಮೆ ಖರೀದಿಸಿದ ನಂತರ ಕೆಲವು ದಿನಗಳ ಕಾಲ ಆತ ಮತ್ತೆ ಖರೀದಿ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಮಧ್ಯೆ ಉಕ್ರೇನ್ ಹಾಗೂ ರಷ್ಯಾ ನಡುವೆ, ಇಂದು, ಸೋಮವಾರ ಮೂರನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಈ ಬೆನ್ನಲ್ಲೇ, ಉಕ್ರೇನ್ ದಾಳಿ ನಿಲ್ಲಿಸುವವರೆಗೆ ನಮ್ಮ ಆಕ್ರಮಣ ಮುಂದುವರಿಯುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಹೇಳಿದ್ದಾರೆ.
ಟರ್ಕಿ ಅಧ್ಯಕ್ಷ ಎರ್ಡೋಗನ್ ತಯ್ಯಿಪ್ ಜತೆ ದೂರವಾಣಿ ಮೂಲಕ ಚರ್ಚಿಸುವಾಗ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ನಮ್ಮ ಯೋಧರ ಮೇಲೆ ಉಕ್ರೇನ್ ಮಾಡುತ್ತಿರುವ ದಾಳಿ ನಿಲ್ಲಿಸುವವರೆಗೂ ಆಕ್ರಮಣ ಮುಂದುವರಿಯುತ್ತದೆ. ಶಾಂತಿ ಸ್ಥಾಪನೆಯಾಗಬೇಕು. ಮೊದಲು ಉಕ್ರೇನ್ ಪಡೆಗಳು ದಾಳಿ ನಿಲ್ಲಿಸಬೇಕು. ಅಷ್ಟಕ್ಕೂ ನಮ್ಮ ಬೇಡಿಕೆಗಳು ಸಂಪೂರ್ಣವಾಗಿ ಈಡೇರಿದ ಬಳಿಕವೇ ಕದನ ವಿರಾಮ ಎಂದು ಸ್ಪಷ್ಟಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ