ಮಹತ್ವದ ಬೆಳವಣಿಗೆಯೊಂದರಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಉತ್ತರಾಖಂಡ ಸರ್ಕಾರ ನಿರ್ಧಾರ..!

ಡೆಹ್ರಾಡೂನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ಅದು ಜಾರಿಗೆ ತಂದರೆ ಉತ್ತರಾಖಂಡ ದೇಶದಲ್ಲೇ ಮೊದಲ ರಾಜ್ಯವಾಗಲಿದೆ.
‘ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಸಮಿತಿ ರಚಿಸಲು ಉತ್ತರಾಖಂಡ ಸಚಿವ ಸಂಪುಟ ನಿರ್ಧರಿಸಿದೆ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ, ಮುಖ್ಯಮಂತ್ರಿ ಧಾಮಿ ನೇತೃತ್ವದ ಉತ್ತರಾಖಂಡ ಕ್ಯಾಬಿನೆಟ್ ಈ ಘೋಷಣೆ ಮಾಡಿದೆ.

ಡೆಹ್ರಾಡೂನ್‌ನಲ್ಲಿ ನಡೆದ ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಾವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ರಾಜ್ಯ ಸಚಿವ ಸಂಪುಟವು ಇದನ್ನು ಸರ್ವಾನುಮತದಿಂದ ಅಂಗೀಕರಿಸಿತು. ಈ ಬಗ್ಗೆ ತಜ್ಞರ ಸಮಿತಿಯನ್ನು ಶೀಘ್ರದಲ್ಲಿ ರಚಿಸಲಾಗುವುದು ಮತ್ತು ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಹಾಗೆ ಮಾಡಿದ ಮೊದಲ ರಾಜ್ಯ ಇದಾಗಲಿದೆ ಎಂದು ಧಾಮಿ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ಏಕರೂಪ ನಾಗರಿಕ ಸಂಹಿತೆ ಕುರಿತು ನಿರ್ಧಾರ ಕೈಗೊಳ್ಳುವ ಮೂಲಕ ಧಾಮಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಮುಖ ಭರವಸೆಯನ್ನು ಈಡೇರಿಸಲು ಹೊರಟಿದ್ದಾರೆ. ಫೆಬ್ರವರಿ 14 ರ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಬಿಜೆಪಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ, ಏಕರೂಪ ನಾಗರಿಕ ಸಂಹಿತೆಯ ಕರಡು ರಚಿಸಲು ಕಾನೂನು ತಜ್ಞರು, ಹಿರಿಯ ನಾಗರಿಕರು ಮತ್ತು ಬುದ್ಧಿಜೀವಿಗಳನ್ನು ಒಳಗೊಂಡ ಉನ್ನತ ಅಧಿಕಾರ ಸಮಿತಿಯನ್ನು ರಚಿಸಲಿದೆ ಎಂದು ಅವರು ಘೋಷಿಸಿದ್ದರು.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

ಇದಕ್ಕೂ ಮುನ್ನ ಬುಧವಾರ , ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಧಾಮಿ ಅವರು ಹರಿದ್ವಾರದ ‘ಹರ್ ಕಿ ಪೌರಿ’ಯಲ್ಲಿ ಪ್ರಸಿದ್ಧ ಗಂಗಾ ಆರತಿಯಲ್ಲಿ ಪಾಲ್ಗೊಂಡರು. ಧಾಮಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹರಿದ್ವಾರ ತಲುಪಿ ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿದರು ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪವಿತ್ರ ನದಿಯ ದಡದಲ್ಲಿ ಗಂಗಾ ಆರತಿ ಮಾಡಿದರು.
ಧಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು, ಹೊಸ ಸರ್ಕಾರವು ಜನರ ಆಶೋತ್ತರಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಹೊಸ ಮಾದರಿಯನ್ನು ಸ್ಥಾಪಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement