ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ಮಾ.28, 29ರಂದು ಭಾರತ್ ಬಂದ್: 20 ಕೋಟಿ ಕಾರ್ಮಿಕರು ಪಾಲ್ಗೊಳ್ಳುವ ನಿರೀಕ್ಷೆ- ಕೇಂದ್ರ ಕಾರ್ಮಿಕ ಸಂಘಗಳು

ನವದೆಹಲಿ: ಕೇಂದ್ರದ “ಕಾರ್ಮಿಕ ವಿರೋಧಿ’ ನೀತಿಗಳನ್ನು ಪ್ರತಿಭಟಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28ರಂದು ಬೆಳಿಗ್ಗೆ 7ರಿಂದ ಮಾರ್ಚ್ 30ರ ಬೆಳಿಗ್ಗೆ 7ರ ವರೆಗೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಸಾರಿಗೆ ಕಾರ್ಮಿಕರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ. ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ವಿಮೆ ಸೇರಿದಂತೆ ಇತರ ವಲಯಗಳ ಒಕ್ಕೂಟಗಳು ಮುಷ್ಕರಕ್ಕೆ ನೋಟಿಸ್ ನೀಡಿವೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಹೇಳಿದೆ.

56 ಕೋಟಿ ಭಾರತೀಯ ಉದ್ಯೋಗಿಗಳ ಪೈಕಿ ಕನಿಷ್ಠ 20 ಕೋಟಿ ಕಾರ್ಮಿಕರು ಮಾರ್ಚ್ 28 ಮತ್ತು 29 ರಂದು ಎರಡು ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುತ್ತಾರೆ ಎಂದು ಕೇಂದ್ರೀಯ ಕಾರ್ಮಿಕ ಸಂಘಗಳು ನಿರೀಕ್ಷಿಸುತ್ತಿವೆ.
12 ಅಂಶಗಳ ಬೇಡಿಕೆ ಪಟ್ಟಿಯಲ್ಲಿ ಕಾರ್ಮಿಕ ಸಂಹಿತೆಗಳು ಮತ್ತು ಅಗತ್ಯ ರಕ್ಷಣಾ ಸೇವೆಗಳ ಕಾಯಿದೆಯನ್ನು ರದ್ದುಗೊಳಿಸುವುದು, ಸಂಯುಕ್ತ ಕಿಸಾನ್ ಮೋರ್ಚಾದ ಆರು ಅಂಶಗಳ ಚಾರ್ಟರ್ ಅನ್ನು ಒಪ್ಪಿಕೊಳ್ಳುವುದು, ಖಾಸಗೀಕರಣವನ್ನು ನಿಲ್ಲಿಸುವುದು ಮತ್ತು NMP ಅನ್ನು ರದ್ದುಗೊಳಿಸುವುದನ್ನು ಒಳಗೊಂಡಿದೆ.
ಇತ್ತೀಚೆಗಷ್ಟೇ ನಡೆದ ರಾಜ್ಯ ಚುನಾವಣಾ ಫಲಿತಾಂಶಗಳಿಂದ ಉತ್ತೇಜಿತವಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ದುಡಿಯುವ ಜನರ ಮೇಲಿನ ದಬ್ಬಾಳಿಕೆಯನ್ನು ತೀವ್ರಗೊಳಿಸಿದೆ. ಇಪಿಎಫ್ ಸಂಗ್ರಹಣೆಯ ಮೇಲಿನ ಬಡ್ಡಿದರವನ್ನು ಶೇಕಡಾ 8.5ರಿಂದ ಶೇಕಡಾ 8.1ಕ್ಕೆ ಇಳಿಸಿದೆ ಎಂಬ ಅಂಶದ ಬಗ್ಗೆ ವೇದಿಕೆ ಗಮನಸೆಳೆದಿದೆ. ಪೆಟ್ರೋಲ್, ಎಲ್‌ಪಿಜಿ, ಸೀಮೆಎಣ್ಣೆ, ಸಿಎನ್‌ಜಿ ಇತ್ಯಾದಿಗಳಲ್ಲಿ ಹಠಾತ್ ಏರಿಕೆಯಾಗಿದೆ, ಹಣದುಬ್ಬರದ ಹೆಚ್ಚಳವಾಗಿದೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

ಹೀಗಾಗಿ ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್‌ಗಳು ಮತ್ತು ವಿಮೆಯಂತಹ ಕ್ಷೇತ್ರಗಳಲ್ಲಿ ಒಕ್ಕೂಟಗಳು ಮುಷ್ಕರ ನೋಟಿಸ್‌ಗಳನ್ನು ಕಳುಹಿಸಿವೆ. ಇದರೊಂದಿಗೆ ಮಾರ್ಚ್ 28 ಮತ್ತು ಮಾರ್ಚ್ 29ರಂದು ನಡೆಯುವ “ಗ್ರಾಮೀಣ ಬಂದ್’ಗೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಲು ರಾಜ್ಯ ಮಟ್ಟದ ಒಕ್ಕೂಟಗಳು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡಿವೆ. ನಾಲ್ಕು ಕಾರ್ಮಿಕ ಸಂಹಿತೆಗಳು ಇದಕ್ಕೆ ಉದಾಹರಣೆಯಾಗಿದೆ. ಈ ಜಂಟಿ ವೇದಿಕೆಯ ಸದಸ್ಯರಾಗಿರುವ ಕೇಂದ್ರ ಕಾರ್ಮಿಕ ಸಂಘಗಳೆಂದರೆ ಹಿಂದ್ ಮಜ್ದೂರ್ ಸಭಾ (HMS), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC), ಸ್ವಯಂ ಉದ್ಯೋಗಿ ಮಹಿಳಾ ಸಂಘ (SEWA), ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC), ಟ್ರೇಡ್ ಯೂನಿಯನ್ ಕೋಆರ್ಡಿನೇಶನ್ ಸೆಂಟರ್ (TUCC), ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU), ಲೇಬರ್ ಪ್ರೋಗ್ರೆಸ್ಸಿವ್ ಫೆಡರೇಶನ್ (LPF) ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC) ಸೇರಿವೆ.
ಮುಷ್ಕರದಲ್ಲಿ ಭಾಗವಹಿಸದಿರಲು ಭಾರತೀಯ ಮಜ್ದೂರ್ ಸಂಘ ನಿರ್ಧರಿಸಿದೆ. ಇನ್ನು ಕೊಚ್ಚಿಯ ಬಿಪಿಸಿಎಲ್‌ (BPCL)ನಲ್ಲಿರುವ 5 ಯೂನಿಯನ್‌ಗಳನ್ನು ಮುಷ್ಕರದಲ್ಲಿ ಭಾಗವಹಿಸದಂತೆ ಕೇರಳ ಹೈಕೋರ್ಟ್ ನಿರ್ಬಂಧಿಸಿದೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ಮಾತ್ರವಲ್ಲದೆ ಟ್ರೇಡ್ ಯೂನಿಯನ್‌ಗಳ ಜಂಟಿ ವೇದಿಕೆಯು ಮಾರ್ಚ್ 28 ಮತ್ತು 29ರಂದು ಕರೆದಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗವಹಿಸದಂತೆ ಕೊಚ್ಚಿಯ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಲ್ಲಿರುವ ಐದು ಕಾರ್ಮಿಕ ಸಂಘಟನೆಗಳನ್ನು ಕೇರಳ ಹೈಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ.
ಕಂಪನಿಯ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ಪ್ರಶ್ನಿಸಿ BPCL ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಅಮಿತ್ ರಾವಲ್, ಮಾರ್ಚ್ 28ರಂದು ಬೆಳಿಗ್ಗೆ 7ರಿಂದ ಮಾರ್ಚ್ 30ರ ಬೆಳಿಗ್ಗೆ 7ರವರೆಗೆ ಯೂನಿಯನ್‌ಗಳು ತಮ್ಮ ಕರೆಗೆ ಅನುಗುಣವಾಗಿ ಮುಷ್ಕರ ನಡೆಸದಂತೆ ಮಧ್ಯಂತರ ಆದೇಶವನ್ನು ಹೊರಡಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement