ಸಾರ್ವಜನಿಕ ಗೌರವ ಸ್ವೀಕರಿಸಿದ ಮಾರನೇ ದಿನ ಇಹಲೋಕ ತ್ಯಜಿಸಿದ ಭೂಷಣ್‌ ಡಾಕ್ಟರ್ ಖ್ಯಾತಿಯ ಡಾ. ಜಠಾರ

posted in: ರಾಜ್ಯ | 0

ಗೋಕರ್ಣ: ಹಿರಿಯ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಎಸ್.ವಿ ಜಠಾರ (93) ಭಾನುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದಾಗಿ ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗ ಇದೆ. ವೈದ್ಯಕೀಯ ರಾಜಕೀಯ, ಸಹಕಾರ, ಕೃಷಿ, ವೇದದಲ್ಲಿ ಸುದೀರ್ಘ ಅಧ್ಯಯನ ಹಾಗೂ ಸೇವೆ ಸಲ್ಲಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು ಊರಿನಲ್ಲಿ ಭೂಷಣ ಡಾಕ್ಟರ್ ಎಂದೇ ಚಿರಪರಿಚಿತರಾಗಿ 5 ದಶಕಗಳಿಗೂ ಹೆಚ್ಚು ಕಾಲ ನಿಸ್ವಾರ್ಥದಿಂದ ವೈದ್ಯಕೀಯ ಸೇವೆ ನೀಡಿದ್ದರು. ಇತ್ತೀಚಿನವರೆಗೂ ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಏಳು ದಶಕಗಳ ಸಕ್ರಿಯ ಕಾರ್ಯಕರ್ತರಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಅಂದಿನ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿ ಇಂದಿನ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಊರಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ನಿರ್ದೇಶಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಸಂಘದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ್ದ ಹಿರಿಯ ಜೀವ ಡಾ. ಎಸ್.ವಿ.ಜಠಾರ್ ಅವರು ಸಾರ್ವಜನಿಕ ಅಭಿನಂದನೆ ಸ್ವೀಕರಿಸಿದ ಮರುದಿನವೇ ಸ್ವರ್ಗಸ್ಥರಾಗುವ ಮೂಲಕ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ.

ಓದಿರಿ :-   ಇನ್ಫೋಸಿಸ್ ಮುಖ್ಯಸ್ಥರಾಗಿ ಮುಂದಿನ 5 ವರ್ಷಗಳ ವರೆಗೆ ಸಲೀಲ್ ಪರೇಖ್ ಮರುನೇಮಕ

ಇವರ ಗರಡಿಯಲ್ಲಿ ಪಳಗಿದವರು ಇಂದು ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿದ್ದಾರೆ. ಯಾವುದೇ ಅಧಿಕಾರ ಬಯಸದೇ ತೆರೆಯ ಮರೆಯಲ್ಲಿ ಸೇವೆ ಸಲ್ಲಿಸುತ್ತ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದವರು.
ಇವರ ಸೇವೆಯನ್ನು ಗೌರವಿಸಿ ಪಕ್ಷ ಮತ್ತು ಸಾರ್ವಜನಿಕವಾಗಿ ಗೌರವಿಸುವ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿ ಡಾ. ಎಸ್.ವಿ. ಜಠಾರ ಅಭಿಮಾನಿ ಬಳಗದಿಂದ ಶನಿವಾರ ಅವರಿಗೆ ಗೌರವ ಸಲ್ಲಿಸಲಾಗಿತ್ತು. ಅಂದು ಇವರ ಕುರಿತಾಗಿ ಸಾಕ್ಷ್ಯ ಚಿತ್ರವನ್ನು ಸಹ ಬಿಡುಗಡೆ ಮಾಡಲಾಗಿತ್ತು. ಸಂಘದ ಪ್ರಮುಖರಾದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮಂಗೇಶ ಭೇಂಡೆ, ಹನುಮಂತ ಶಾನಭಾಗ,

ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ, ಸನ್ಮಾನ ಸಮಿತಿಯ ರವಿ ಗುನಗಾ, ಗೋಪಾಲಕೃಷ್ಣ ಭಟ್ ಮೊದಲಾದವರು ಪಾಲ್ಗೊಂಡಿದ್ದರು.
ಕೆಲ ದಿನಗಳಿಂದ ತುಸು ಅನಾರೋಗ್ಯದಲ್ಲಿದ್ದ ಜಠಾರ್ ಅವರು ಸನ್ಮಾನ ಸ್ವೀಕರಿಸಿದ ಮರುದಿನ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಇವರ ನಿಧನಕ್ಕೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರಶೆಟ್ಟಿ, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ಜಿಲ್ಲೆಯ ಪಕ್ಷದ ಪ್ರಮುಖರು, ಸ್ಥಳೀಯ ಕಾರ್ಯಕರ್ತರು, ಗೋಕರ್ಣದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜಗೊಪಾಲ ಅಡಿ, ನಿರ್ದೆಶಕರ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.

ಓದಿರಿ :-   ಪರಿಷತ್ ಚುನಾವಣೆ‌ : ಮೂರೂ ಪಕ್ಷಗಳಿಂದ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ, ಅಚ್ಚರಿ ಅಭ್ಯರ್ಥಿಯೋ? ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಗೆ ಮಾನ್ಯತೆಯೋ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ