ಬೆಂಗಳೂರಿಂದ ಮೈಸೂರಿಗೆ ಹೋಗಲು ಇನ್ಮುಂದೆ 75 ನಿಮಿಷ ಸಾಕು: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ

ಬೆಂಗಳೂರು: ಬೆಂಗಳೂರು-ನಿಡಘಟ್ಟ-ಮೈಸೂರು ಎಕ್ಸ್‌ಪ್ರೆಸ್‌ ವೇ ಪೂರ್ಣಗೊಂಡರೆ, ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಈಗಿರುವ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆಯಾಗಲಿದೆ…!
ಒಟ್ಟು 117 ಕಿಮೀ ಉದ್ದ ಹಾಗೂ 10 ಪಥಗಳ ಈ ಹೆದ್ದಾರಿ ಅಕ್ಟೋಬರ್‌ ಹೊತ್ತಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು 8,350 ಕೋಟಿ ರೂ.ಗಳ ವೆಚ್ಚದ ದೇಶದ ಎರಡು ಪ್ರಮುಖ ನಗರಗಳಾಗಿರುವ ಬೆಂಗಳೂರು ಮತ್ತು ಮೈಸೂರು ನಡುವಿನ ಸಂಪರ್ಕವನ್ನು ಕಲ್ಪಿಸುವ ಈ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಇದು ಪೂರ್ಣಗೊಂಡ ನಂತರ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಅತ್ಯಾಧುನಿಕ ಈ ಹೈವೇ ಯೋಜನೆಯು 8-ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್, ಒಂಬತ್ತು ಪ್ರಮುಖ ಸೇತುವೆಗಳು, 42 ಚಿಕ್ಕ ಸೇತುವೆಗಳು, 64 ಅಂಡರ್‌ಪಾಸ್‌ಗಳು, 11 ಮೇಲ್ಸೇತುವೆಗಳು, 4 ರೋಡ್ ಓವರ್ ಬ್ರಿಡ್ಜ್‌ಗಳು ಮತ್ತು ಐದು ಬೈಪಾಸ್‌ಗಳಂತಹ ಬಹು ರಚನೆಗಳನ್ನು ಹೊಂದಿದೆ, ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮೈಸೂರು-ಬೆಂಗಳೂರು ಹೈವೇ ರೀತಿಯ ಅನೇಕ ಯೋಜನೆಗಳನ್ನು ಜವಾಬ್ದಾರಿಯಿಂದ ಪೂರ್ಣಗೊಳಿಸಲಾಗುತ್ತಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಬದ್ಧತೆಯನ್ನು ನಮ್ಮ ಸರಕಾರ ಪ್ರದರ್ಶಿಸುತ್ತಲೇ ಬಂದಿದೆ ಎಂದು ಗಡ್ಕರಿ ಹೇಳಿಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement