ಮಧ್ಯರಾತ್ರಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆ..!

posted in: ರಾಜ್ಯ | 0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಯಾವುದೇ ಮಾಹಿತಿ ನೀಡದೆ ಮಧ್ಯರಾತ್ರಿಯಲ್ಲಿ ೧೦,೪೮೦.೯೩ ಕೋಟಿ ರೂ. ಗಾತ್ರದ ವಾರ್ಷಿಕ ಬಜೆಟ್ ಮಂಡಿಸಲಾಗಿದೆ. ಇದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
ಆರ್ಥಿಕ ವರ್ಷದ ಅಂತ್ಯಕ್ಕೆ ಕೆಲವೇ ತಾಸುಗಳ ಮೊದಲು ೨೦೨೨-೨೩ನೇ ಸಾಲಿನ ಆಯವ್ಯಯವನ್ನು ತರಾತುರಿಯಲ್ಲಿ ಮಂಡಿಸಿ, ಆಡಳಿತಾಧಿಕಾರಿಗಳ ಅನುಮೋದನೆ ಪಡೆದು ಬಳಿಕ ಬಜೆಟ್ ಪ್ರತಿಯನ್ನು ಬಿಬಿಎಂಪಿ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ನಿನ್ನೆ ಗುರುವಾರ ರಾತ್ರಿ ವಿಧಾನಸೌಧದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಆಯವ್ಯಯ ಮಂಡಿಸಿದ್ದು, ಬಜೆಟ್ ಗಾತ್ರ ೧೦,೪೮೦ ಕೋಟಿ ರೂ.ಗಳಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರ ೫೨೯ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
ಏ. ೧ರಂದು ಹೊಸ ಆರ್ಥಿಕ ವರ್ಷ ಆರಂಭವಾಗುತ್ತದೆ. ಪಾಲಿಕೆಯ ಸ್ವಚ್ಛತಾ ಕಾರ್ವಿಕರಿಂದ ಮುಖ್ಯ ಆಯುಕ್ತರ ವರೆಗೆ ಅಂದಾಜು ೩೦ ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ವೇತನ, ಕಚೇರಿಗಳ ನಿರ್ವಹಣೆ, ತುರ್ತು ಸಂದರ್ಭದ ವೆಚ್ಚಗಳು ಹಾಗೂ ದೈನಂದಿನ ಕಾರ್ಯಗಳಿಗೆ ಹಣ ಖರ್ಚು ಮಾಡಲು ಪಾಲಿಕೆಗೆ ಅಧಿಕಾರ ಇರುವುದಿಲ್ಲ. ಆಗ, ಸಮಸ್ಯೆ ಆಗುತ್ತಿತ್ತು ಎನ್ನಲಾಗಿದೆ.

ಓದಿರಿ :-   ತನ್ನ ಐಷಾರಾಮಿ ಕಾರನ್ನು ತಾನೇ ಕಾವೇರಿ ನದಿಯಲ್ಲಿ ಮುಳುಗಿಸಿದ ವ್ಯಕ್ತಿ...!

ಈತನಕ ಪಾಲಿಕೆ ಬಜೆಟ್ ಜನಪ್ರತಿನಿಧಿಗಳ ಆಡಳಿತವಿದ್ದಾಗ ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಹಣಕಾಸು ಇಲಾಖೆ ಸ್ಥಾಯಿ ಸಮಿತಿ ಅಧ್ಯಕ್ಷರು ಆಯವ್ಯಯ ಮಂಡಿಸುತ್ತಿದ್ದರು.
ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಕಳೆದ ಬಾರಿ ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಬಜೆಟ್ ಮಂಡಿಸಲಾಗಿತ್ತು. ಆದರೆ ಈ ಬಾರಿ ಆರ್ಥಿಕ ವರ್ಷ ಅಂತ್ಯವಾಗುವ ಕೊನೆಯ ದಿನರಾತ್ರಿ ವೇಳೆ ಬಜೆಟ್ ಮಂಡಿಸಲಾಗಿದೆ.

ಬಜೆಟ್‌ ಮುಖ್ಯಾಂಶಗಳು
ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆಗೆ ೧,೪೬೯ ಕೋಟಿ ರೂ.ಗಳು, ಕಲ್ಯಾಣ ಕಾರ್ಯಕ್ರಮಕ್ಕೆ ೪೨೮ ಕೋಟಿ ರೂ.ಗಳು, ವಿಶೇಷಚೇತನರ ಅಭಿವೃದ್ಧಿಗೆ ೩೭೦ ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ೩೪೬ ಕೋಟಿ ರೂ.ಗಳು, ಆರೋಗ್ಯ ವಲಯಕ್ಕೆ ೭೫ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ೬೧.೩೬ ಕೋಟಿ ರೂ.ಗಳು ನಿಗದಿ, ವಲಯ ಕಾಮಗಾರಿಗಳು-ಕ್ರಿಯಾ ಯೋಜನೆ ಕಾಮಗಾರಿಗಳು ಶೇ. ೬೦ ರಷ್ಟು ವಾರ್ಷಿಕ ನಿರ್ವಹಣೆ ಮತ್ತು ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿಗೆ ೯೬೭.೪೭ ಕೋಟಿ ರೂ.ಗಳು ನಿಗದಿ, ಪಾಲಿಕೆಯಲ್ಲಿ ಎಲ್ಲಾ ವಲಯಗಳಲ್ಲಿ ಮೂಲಭೂತ ಸೌಕರ್ಯ ವಿಭಾಗದಿಂದ ಅರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆಗೆ ೮೬.೮೩ ಕೋಟಿ ರೂ., ಪಾಲಿಕೆ ಶಾಲಾ, ಕಾಲೇಜುಗಳ ಕಟ್ಟಡಗಳ ನಿರ್ವಹಣೆಗೆ ಮತ್ತು ದುರಸ್ತಿಗೆ ೧೦.೫೯ ಕೋಟಿ ರೂ., ಸುಟ್ಟು ಹೋದ ಬೀದಿ ದೀಪಗಳನ್ನು ಬದಲಾಯಿಸುವುದು ಹಾಗೂ ಇತರೆ ವೆಚ್ಚ ೮೨.೧೧ ಕೋಟಿ ರೂ., ಪಾಲಿಕೆಯ ಶಾಲೆ, ಹೆರಿಗೆ ಆಸ್ಪತ್ರೆ, ಕಟ್ಟಡ ಸಮುದಾಯ ಭವನ ಮತ್ತು ಮಾರುಕಟ್ಟೆಗಳಲ್ಲಿ ವಿದ್ಯುತ್ ಸ್ಥಾಪನೆಗೆ ೬.೭೪ ಕೋಟಿ ರೂ.,ಮಳೆ ನೀರು ಕಾಲುವೆಗಳ ವಾರ್ಷಿಕ ನಿರ್ವಹಣಾ ವೆಚ್ಚ ೪೦ ಕೋಟಿ ರೂ.ಗಳು
ಮಳೆ ನೀರು ಬೃಹತ್‌ ಕಾಲುವೆಗಳ ತುರ್ತು ಮೀಸಲು ಕಾಮಗಾರಿ ೧೦.೮೬ ಕೋಟಿ ರೂ., ನೀರು ಸರಬರಾಜು ವಾರ್ಷಿಕ ನಿರ್ವಹಣೆ ಮತ್ತು ದುರಸ್ಥಿಗೆ ೫೭.೦೪ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ.

ಓದಿರಿ :-   ವಿಧಾನ ಪರಿಷತ್​ಗೆ ಸವದಿ, ನಾರಾಯಣಸ್ವಾಮಿ ಸೇರಿ 7 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ