ಇಂಗ್ಲೆಂಡ್ ತಂಡವನ್ನು 71 ರನ್‌ಗಳಿಂದ ಸೋಲಿಸಿ 7ನೇ ಮಹಿಳಾ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ಭಾನುವಾರ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 71 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ ದಾಖಲೆಯ 7ನೇ ಮಹಿಳಾ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತು.
ಅಲಿಸ್ಸಾ ಹೀಲಿ ಅವರು ಬಿರುಸಿನ 170 ರನ್ ಗಳಿಸಿ ಆಸ್ಟ್ರೇಲಿಯಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸಿ ದಾಖಲೆಯ ಏಳನೇ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗಳಿಸಲು ಮಹತ್ವದ ಪಾತ್ರ ವಹಿಸಿದರು.
ಬ್ಯಾಟಿಂಗ್‌ಗೆ ಆಹ್ವಾನಿಸಿದ ನಂತರ ಆಸ್ಟ್ರೇಲಿಯಾ ಭರ್ಜರಿಯಾಗಿಯೇ ಆಟ ಆರಂಭಸಿತು. ಹೀಲಿ ಅವರ ವಿಶೇಷ ಪ್ರದರ್ಶನದ ಜೊತೆಗೆ, ರಾಚೆಲ್ ಹೇನ್ಸ್ (68) ಮತ್ತು ಬೆತ್ ಮೂನಿ (62) ಸಹ ಉತ್ತಮ ಅರ್ಧಶತಕಗಳನ್ನು ಬಾರಿಸುವ ಮೂಲಕ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗೆ 356 ರನ್‌ಗಳಿಗೆ ಗಳಿಸಿದರು.

ಹೀಲಿ 138 ಎಸೆತಗಳಲ್ಲಿ 26 ಬೌಂಡರಿಗಳಿಂದ ಕೂಡಿದ 170 ರನ್‌ಗಳಿಸಿದರು ಅವರು ಶತಕ ಪೂರೈಸಿದ ತಕ್ಷಣ, ಪ್ರೇಕ್ಷಕರು ಆಸೀಸ್ ಬ್ಯಾಟರ್‌ಗೆ ಹರ್ಷೋದ್ಗಾರ ಮಾಡಿದರು, ಮತ್ತು ಎಲ್ಲಾ ಅಭಿಮಾನಿಗಳ ನಡುವೆ, ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಅವರ ಪತಿ ಆಸ್ಟ್ರೇಲಿಯಾ ಪುರುಷರ ತಂಡದ ಏಸ್‌ ಬೌಲರ್‌ ಮಿಚೆಲ್ ಸ್ಟಾರ್ಕ್ ಕೂಡ ಹೀಲಿ ಶತಕಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇಂಗ್ಲೆಂಡ್ ಪರ ಅನ್ಯಾ ಶ್ರಬ್ಸೋಲ್ 46 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದರು.

ಬೃಹತ್ ಗುರಿಯನ್ನು ಬೆನ್ನಟ್ಟಿದ, ನ್ಯಾಟ್ ಸ್ಕೈವರ್ ಏಕಾಂಗಿ ಹೋರಾಟ ನಡೆಸಿದರು. ಅವರು 121 ಎಸೆತಗಳಲ್ಲಿ 148 ರನ್ ಗಳಿಸಿ ಅಜೇಯರಾಗಿ ಉಳಿದರು .ಆದರೆ ಆಸ್ಟ್ರೇಲಿಯಾದ ಬೌಲಿಂಗ್‌ ದಾಳಿಗೆ ಇಂಗ್ಲಂಡ್‌ 43.4 ಓವರ್‌ಗಳಲ್ಲಿ 285 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ 71 ರನ್‌ಗಳಿಂದ ಭರ್ಜರಿ ಜಯಗಳಿಸಿ ವಿಶ್ವ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement