ನ್ಯೂಯಾರ್ಕ್: ಸರಾಸರಿ ನಾಲ್ಕು ವರ್ಷಗಳಿಗೆ ಒಮ್ಮೆಯಂತೆ ಹೊಸ ಕೊರೊನಾ ವೈರಸ್ ರೂಪಾಂತರಗಳು ಸೃಷ್ಟಿಯಾಗುತ್ತಿದ್ದು, ಸಾಂಕ್ರಾಮಿಕ ಮುಗಿದು ಹೋಗಿದೆ ಎಂದು ಅಂದುಕೊಳ್ಳಬೇಡಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ.
ಗವಿ ಕೋವ್ಯಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್ಮೆಂಟ್ ಸಮಿಟ್ 2022ರಲ್ಲಿ ‘ಒಂದು ಜಗತ್ತು ರಕ್ಷಿಸಲ್ಪಟ್ಟಿದೆ- ಕೋವಿಡ್ ಅನ್ನು ತಡೆಯೋಣ’ ಎಂಬ ವಿಚಾರದಡಿ ವಿಡಿಯೋ ಸಂದೇಶ ರವಾನಿಸಿರುವ ಗುಟೆರಸ್, ‘ಕೋವಿಡ್ 19 ಸಾಂಕ್ರಾಮಿಕ ಅಂತ್ಯಗೊಂಡಿದೆ ಎಂಬ ಸನ್ನಿವೇಶವು ಇನ್ನೂ ದೂರವಿದೆ’ ಎಂಬ ಗಂಭೀರ ವಿಚಾರವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರತಿ ದಿನವೂ ನಾವು 15 ಲಕ್ಷಹೊಸ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಏಷ್ಯಾದಲ್ಲಿ ಬೃಹತ್ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಹೊಸ ಅಲೆಯು ಯುರೋಪ್ನಾದ್ಯಂತ ವ್ಯಾಪಿಸುತ್ತಿದೆ. ಕೆಲವು ದೇಶಗಳಲ್ಲಿ ಸಾಂಕ್ರಾಮಿಕ ಆರಂಭವಾದ ಸಂದರ್ಭಕ್ಕಿಂತ ಈಗ ಅತ್ಯಧಿಕ ಮರಣ ಪ್ರಮಾಣ ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ನ ಒಮಿಕ್ರಾನ್ ತಳಿಯು, ಲಸಿಕಾಕರಣ ವ್ಯಾಪ್ತಿಯ ಕೊರತೆ ಇರುವಲ್ಲಿ ವೇಗವಾಗಿ ರೂಪಾಂತರ ಹೊಂದಬಹುದು ಮತ್ತು ಹರಡಬಹುದು ‘ಬೆದರಿಸುವ ಜ್ಞಾಪನೆ’ಯಾಗಿದೆ. ಅಧಿಕ ಆದಾಯದ ದೇಶಗಳು ಎರಡನೇ ಬೂಸ್ಟರ್ ಡೋಸ್ಗೆ ಸಿದ್ಧತೆ ನಡೆಸುತ್ತಿರುವಾಗ, ಮನುಕುಲದ ಮೂರನೇ ಒಂದು ಭಾಗಕ್ಕೆ ಒಂದು ಲಸಿಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದ್ದಾರೆ.
ಇದು ನಮ್ಮ ತೀವ್ರ ಅಸಮಾನತೆಯ ಜಗತ್ತಿನ ಕ್ರೌರ್ಯದ ಪ್ರತೀಕವಾಗಿದೆ. ಹೊಸ ರೂಪಾಂತರಗಳ ಸೃಷ್ಟಿಗೆ ಇದು ಪ್ರಮುಖ ನೆಲೆಯೂ ಆಗುತ್ತಿದೆ. ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಮಧ್ಯಭಾಗದಲ್ಲಿ ಪ್ರತಿ ದೇಶವೂ ಶೇ 70ರಷ್ಟು ಲಸಿಕಾಕರಣ ಸಾಧನೆ ಮಾಡಬೇಕು ಎಂಬ ನಮ್ಮ ಗುರಿಯಿಂದ ಬಹಳ ಹಿಂದೆ ಉಳಿದಿದ್ದೇವೆ. ಸರಾಸರಿ ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ ಹೊಸ ರೂಪಾಂತರಗಳು ಕಾಣಿಸಿಕೊಳ್ಳುತ್ತಿರುವುದು ನಾವು ವೇಗ ಹೆಚ್ಚಿಸಬೇಕು ಎಂದು ತೋರಿಸುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ