ಆತ್ಮಾಹುತಿಗೂ ಮುನ್ನ ವೀಡಿಯೊ: ವರ್ಗಾವಣೆ ಮಾಡಲು ಹೊಲಸು ಬೇಡಿಕೆ ಇಟ್ಟ ದುರುಳ ಜೆಇ: ಮನನೊಂದು ಲೈನ್‌ಮ್ಯಾನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ..!

ಲಖೀಂಪುರ ಖೇರಿ (ಉತ್ತರ ಪ್ರದೇಶ): ದುರುಳ ಜೂನಿಯರ್‌ ಇಂಜಿನಿಯರ್​​ (ಜೆಇ) ಕಿರುಕುಳದಿಂದಾಗಿ ತೀವ್ರವಾಗಿ ಮನನೊಂದ ಲೈನ್​ಮ್ಯಾನ್​ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
‘ವರ್ಗಾವಣೆಗಾಗಿ ಒಂದು ಲಕ್ಷ ರೂ. ಲಂಚ ಮತ್ತು ಒಂದು ರಾತ್ರಿಗೆ ನಿನ್ನ ಪತ್ನಿಯನ್ನು ನನ್ನೊಂದಿಗೆ ಕಳುಹಿಸಬೇಕು ಎಂದು ಜೂನಿಯರ್‌ ಇಂಜಿನಿಯರ್​​ (ಜೆಇ) ನಾಗೇಂದ್ರಕುಮಾರ ವಿಕೃತ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಮನನೊಂದು ಲೈನ್​ಮ್ಯಾನ್ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಜೆಇ ಮನೆ ಮುಂದೆಯೇ ಲೈನ್​ಮ್ಯಾನ್ ಗೋಕುಲಪ್ರಸಾದ ಎಂಬವರು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ವರದಿಯಾಗಿದೆ. 45 ವರ್ಷದ ಗೋಕುಲಪ್ರಸಾದ​ ಕಳೆದ 22 ವರ್ಷಗಳಿಂದ ಇಂಧನ ಇಲಾಖೆಯಲ್ಲಿ ಲೈನ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಪಾಲಿಯಾ ವಿದ್ಯುತ್​ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನಂತರ ಅಲಿಗಂಜ್​ಗೆ ವರ್ಗಾಯಿಸಲಾಗಿತ್ತು. ಆದರೆ, ಪಾಲಿಯಾದಲ್ಲಿ ಇಡೀ ಕುಟುಂಬ ನೆಲೆಸಿದ್ದರಿಂದ ಮರಳಿ ಪಾಲಿಯಾಗೆ ವರ್ಗಾವಣೆ ಮಾಡುವಂತೆ ಗೋಕುಲಪ್ರಸಾದ ಮನವಿ ಮಾಡಿದ್ದರಂತೆ. ಆದರೆ, ಜೆಇ ನಾಗೇಂದ್ರಕುಮಾರ ಈ ವಿಕೃತ ಬೇಡಿಕೆ ಇಟ್ಟಿದ್ದನಂತೆ.
ಜೆಇ ಕಿರುಕುಳದಿಂದಾಗಿಯೇ ಗೋಕುಲ​ ಮಾನಸಿಕವಾಗಿ ನೊಂದಿದ್ದರು. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿತ್ತು. ಆದರೂ, ಪೊಲೀಸರು ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮೃತನ ಪತ್ನಿ ಮನನೊಂದು ಹೇಳಿದ್ದಾರೆ. ಗೋಕುಲಪ್ರಸಾದಗೆ ನಾಲ್ವರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಸಾವಿಗೂ ಮುನ್ನ ವಿಡಿಯೋ ಹೇಳಿಕೆ
ಜೆಇಯ ಅಮಾನವೀಯ ಬೇಡಿಕೆಯಿಂದ ಬೇಸತ್ತಿದ್ದ ಲೈನ್​ಮ್ಯಾನ್​ ಗೋಕುಲ್​ 59 ಸೆಕೆಂಡ್​ಗಳ ವಿಡಿಯೋ ಮಾಡಿದ್ದು, ಜೆಇ ವಿರುದ್ಧ ಹೇಳಿಕೆ ದಾಖಲಿಸಿದ್ದಾರೆ. ನಂತರ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಅವರನ್ನು ಲಕ್ನೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈನ್​ಮ್ಯಾನ್​ ಆತ್ಮಹತ್ಯೆ ನಂತರ ಇಂಧನ ಇಲಾಖೆಯಲ್ಲಿ ನೌಕರರ ಆಕ್ರೋಶ ಭುಗಿಲೆದ್ದಿದೆ. ಅಲ್ಲದೇ, ಸ್ವತಃ ಗೋಕುಲ್​ ಮೇಲಾಧಿಕಾರಿ ವಿರುದ್ಧ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ನಂತರ ಇಲಾಖೆ ಎಚ್ಚೆತ್ತುಕೊಂಡಿದೆ. ಅಧೀಕ್ಷಕ ಇಂಜಿನಿಯರ್ (ವಿದ್ಯುತ್ ವಿತರಣಾ ವೃತ್ತ, ಗೋಲಾ) ರಾಮ್ ಶಬದ್‌ ಅವರು ಸಂಪೂರ್ಣನಗರದಲ್ಲಿ ಜೆಇ ನಾಗೇಂದ್ರ ಕುಮಾರ್ ಮತ್ತು ದಹಾಪುರದ ವಿದ್ಯುತ್ ಸಬ್‌ಸ್ಟೇಷನ್‌ನ ತಂತ್ರಜ್ಞ (ಲೈನ್) ಜಗತ್‌ಪಾಲ್ ಅವರನ್ನು ವೀಡಿಯೊ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ ಹಾಗೂ ಈ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಇಲಾಖಾ ಜೆಇ ವಿರುದ್ಧ ಲೈನ್ ಮನ್ ಗಂಭೀರ ಆರೋಪ ಮಾಡಿರುವ ವಿಡಿಯೋ ಪತ್ತೆಯಾಗಿದೆ. ಆರೋಪಿ ಜೆಇ ಅಮಾನತು ಶಿಫಾರಸಿನ ಮೇರೆಗೆ ಇಲಾಖಾ ತನಿಖೆಗೆ ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವೀಡಿಯೊದಲ್ಲಿ ಮೃತ ಲೈನ್‌ಮನ್‌ ಗಂಭೀರ ಆರೋಪ ಮಾಡಿದ್ದಾರೆ. ಆರೋಪಿ ಜೆಇ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೂ ಕುಟುಂಬದವರಿಂದ ಯಾವುದೇ ದೂರು ಬಂದಿಲ್ಲ. ತನಿಖೆಯಲ್ಲಿ ಮೃತನ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಸಂಜೀವ್ ಸುಮನ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement