ಏಪ್ರಿಲ್‌ 15ರಂದು ಸ್ವರ್ಣವಲ್ಲೀ ಮಠದ ರಾಜಗೋಪುರ ಸಮರ್ಪಣೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇನ್ನೊಂದು ದಾಖಲೆ ಕಾರ್ಯಕ್ಕೆ‌ ಸಾಕ್ಷಿಯಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ‌ ಮೂಲಕ ಬಹು‌ ನಿರೀಕ್ಷಿತ ಗೋಪುರದ ಸಮರ್ಪಣೆ ಕಾರ್ಯಕ್ರಮ ಏಪ್ರಿಲ್‌ 15ರಂದು ನಡೆಯಲಿದೆ.

ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ದ್ರಾವಿಡ ಶೈಲಿಯಲ್ಲಿ ಉತ್ತರ ದಿಕ್ಕಿನ ಏಳು ಅಂತಸ್ತಿನ ರಾಜಗೋಪುರ, ಮಹಾದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ತಮಿಳುನಾಡಿನ ಶಿಲ್ಪಿ ಕರುಪ್ಪಯ್ಯ ಆಚಾರಿ ಅವರಿಂದ ತಮಿಳುನಾಡಿನ ಸೇಲಂ ಜಿಲ್ಲೆಯ ರಾಶೀಪುರಂ ಊರಿನ ಕಪ್ಪುಕಲ್ಲು ತಂದು 18 ಅಡಿ ಎತ್ತರದವರೆಗೆ ಶಿಲ್ಪಕಲಾ ಶಾಸ್ತ್ರ ಪ್ರಕಾರ ನಿರ್ಮಾಣ ಮಾಡಿ ಅದರ ಮೇಲೆ 44 ಅಡಿ ಇಟ್ಟಿಗೆ ಮತ್ತು ಸಿಮೆಂಟಿನಿಂದ ಗೋಪುರ ನಿರ್ಮಾಣ ಮಾಡಲಾಗಿದೆ. ಗಣಪತಿ ಮೂರ್ತಿ, ಶಿವ ಸಂಬಂಧ ಮೂರ್ತಿಗಳು, ವಿಷ್ಣು ಸಂಬಂಧ ಮೂರ್ತಿಗಳು ದೇವಿ ಮೂರ್ತಿಗಳನ್ನು ಕೂಡ ಕೆತ್ತನೆ ಮಾಡಲಾಗಿದೆ. ಈ ಸುಂದರವಾದ ರಾಜಗೋಪುರ ದರ್ಶನೀಯವಾಗಿದೆ.

ಇದರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮ ಏ.15ರ ಬೆಳಿಗ್ಗೆ11ಕ್ಕೆ ನಡೆಯಲಿದೆ. ನವಕಲಶ ಪ್ರತಿಷ್ಠಾನ್ವಿತ ರಾಜಗೋಪುರ ಸಮರ್ಪಣೆ ಸಮಾರಂಭದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ  ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಈ ವೇಳೆ ಹಿರಿಯ ಸಾಮಾಜಿಕ‌ ಮುಂದಾಳು ವಿ.ಟಿ.ಹೆಗಡೆ‌ ಜಾನ್ಮನೆ ಉಪಸ್ಥಿತರಿರಲಿದ್ದಾರೆ. ಮಠದ ಶಿಷ್ಯರು, ಭಕ್ತರು ಈ ವೇಳೆ ಪಾಲ್ಗೊಳ್ಳಲು ಮಠದ ಆಡಳಿತ ಮಂಡಳಿ‌ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಮನವಿ‌ ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement