ಅಮೆರಿಕದಿಂದ ಹಡಗಿನಲ್ಲಿ ಭಾರತಕ್ಕೆ ಬರುವಾಗ ತಮ್ಮೊಂದಿಗೆ ೭೫ ಸಾವಿರ ಪುಸ್ತಕಗಳನ್ನು ತಂದಿದ್ದರು ಮಹಾನ್‌ ಪುಸ್ತಕ ಪ್ರೇಮಿ, ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌

posted in: ರಾಜ್ಯ | 0

(೧೪-೦೪-೨೦೨೨) ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ೧೩೧ನೇ ಜನ್ಮ ದಿನಾಚರಣೆಯಾಗಿದ್ದು, ಆ ನಿಮಿತ್ತ ನಿವೃತ್ತ ಗ್ರಂಥಪಾಲಕರಾದ ಬಿ.ಎಸ್‌.ಮಾಳವಾಡ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಕುರಿತು ಲೇಖನ ಬರೆದಿದ್ದಾರೆ.)

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ತಲಾ-ತಲಾಂತರದಿಂದ ಜಾತಿಯತೆ, ಅಸ್ಪೃಶ್ಯತೆಯ ಅವಮಾನ ಮತ್ತು ಹಸಿವಿನಿಂದ ಕಂಗಾಲಾಗಿದ್ದ ಶೋಷಿತ ವರ್ಗದ ಜನರ ಒಡಲಾಳದಲ್ಲಿ ಹುದುಗಿದ್ದ ಶಕ್ತಿ ಮತ್ತು ಸ್ವಾಭಿಮಾನವನ್ನು ಹೊರತರಲು ಹಗಲು-ರಾತ್ರಿ ದುಡಿದು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದವರೇ ಸಂವಿಧಾನ ಶಿಲ್ಪಿ ಡಾ.ಭೀಮರಾವ್‌ ಅಂಬೇಡ್ಕರ ಅವರು.
ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೇವಾಡಿ ಗ್ರಾಮದ ಮಹಾರ್ ಸಮಾಜಕ್ಕೆ ಸೇರಿದ ಡಾ.ಅಂಬೇಡ್ಕರ್‌ ಅವರು ಏಪ್ರಿಲ್‌ ೧೪, ೧೮೯೧ ರಂದು ಈಗಿನ ಮಧ್ಯಪ್ರದೇಶದ ರಾಜ್ಯದ ಮಾಹೋ (ಮಹಾವ್) ಎಂಬಲ್ಲಿ ಜನಿಸಿದರು. ಸದ್ಯ ಇದಕ್ಕೆ ಅಂಬೇಡ್ಕರ್‌ ನಗರ ಎಂದು ಹೆಸರಿಡಲಾಗಿದೆ. ಇವರ ತಂದೆ ರಾಮಜಿ ಮಾಲೋಜಿ ಸತ್ಪಾಲ್ ಹಾಗೂ ತಾಯಿ ಭೀಮಾಬಾಯಿ ಸತ್ಪಾಲ್. ಇವರ ಪೂರ್ವಜರಂತೆ ಇವರ ತಂದೆಯೂ ಕೂಡ ಬ್ರಿಟಿಷ್‌ ಸೇನೆಯಲ್ಲಿ ಸುಬೇದಾರರಾಗಿದ್ದರು. ರಾಮಜಿ ಸತ್ಪಾಲ್ ಮತ್ತು ಭೀಮಾಬಾಯಿಯರವರ ಉದರದಿಂದ ಜನಿಸಿದ ೧೪ ಮಕ್ಕಳಲ್ಲಿ ಭೀಮರಾವ್ ಅಂಬೇಡ್ಕರ್‌ ಅವರೇ ಕೊನೆಯ ಪುತ್ರ.
ಪ್ರಾಥಮಿಕ ಶಿಕ್ಷಣ ಪೂರೈಸಿ ಪ್ರೌಢ ಶಿಕ್ಷಣಕ್ಕೆ ಮುಂಬೈಗೆ ತೆರಳಿದರೂ ಕೂಡ ಅಲ್ಲಿಯೂ ಕೂಡ ಅಸ್ಪೃಶ್ಯತೆಯ ಅನುಭವ ಅವರಿಗೆ ಅಸಹನೀಯವಾಗಿತ್ತು. ಇಂತಹ ಕಹಿ ಅನುಭವಗಳ ನಡುವೆಯೂ ೧೯೦೭ ರಲ್ಲಿ ಅವರು ೧೦ನೇ ತರಗತಿಯಲ್ಲಿ ಉತ್ತೀರ್ಣರಾದರು.

ಈ ಹದಿನಾಲ್ಕು ಜನ ಮಕ್ಕಳಲ್ಲಿ ಬದುಕುಳಿದವರು ಮಂಜುಳಾ, ತುಳಸಿ, ಬಲರಾಮ್, ಆನಂದರಾವ್‌, ಭೀಮರಾವ್ ಈ ೫ ಜನ ಮಾತ್ರ. ಬಾಲಕ ಭೀಮರಾವ್ ೬ ವರ್ಷವದರಾಗಿದ್ದಾಗ ಅನಾರೋಗ್ಯದಿಂದ ತಾಯಿ ಭೀಮಾಬಾಯಿ ತೀರಿಕೊಂಡಾಗ, ಇವರ ಲಾಲನೆ-ಪಾಲನೆಯನ್ನು ಇವರ ಸೋದರತ್ತೆಯಾದ ಮೀರಾ ಅವರು ಮಾಡಿದರು.
ಅಸ್ಪೃಶ್ಯತೆಯ ಭಯಂಕರ ಅವಮಾನದ ನಡುವೆಯೇ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾತಾರದಲ್ಲಿ ಪೂರೈಸಿ, ಮುಂದೆ ಮಾಧ್ಯಮಿಕ, ಪ್ರೌಢ ಶಿಕ್ಷಣಕ್ಕಾಗಿ ಮುಂಬಯಿಯ ಎಲ್ಡಿನ್‌ಸನ್ ಸ್ಕೂಲಿಗೆ ಸೇರಿದರು. ಅಲ್ಲಿಯೂ ಸಹ ಅಸ್ಪೃಶ್ಯತೆಯ ಭೂತ ಬೆಂಬಿಡದೆ ಕಾಡಿತ್ತು. ಆದಾಗ್ಯೂ ಇವೆಲ್ಲವನ್ನೂ ಮೆಟ್ಟಿನಿಂತ ೧೯೦೭ ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದೂ ಸಂಪೂರ್ಣ ಮಹಾರ್ ಜಾತಿಯಲ್ಲಿಯೇ ಪ್ರಮುಖ ಸಾಧನೆಯಾಗಿತ್ತು. ತದನಂತರ ಕೇಲೂಸ್ಕರ್‌ ಗುರೂಜಿಯವರ ಸಹಕಾರ ಮತ್ತು ಬರೋಡಾ ಸಂಸ್ಥಾನದ ಮಹಾರಾಜ ಸಯ್ಯಾಜೀರಾವ್ ಗಾಯಕವಾಡರ ಮಾಸಿಕ ೨೫ ರೂ.ಗಳ ಶಿಷ್ಯ ವೇತನದ ನೆರವಿನಿಂದ ೧೯೧೨ರಲ್ಲಿ ಮುಂಬೈನ ಎಲ್ಫಿನ್‌ಸನ್ ಕಾಲೇಜಿನಿಂದ ಮುಂಬೈ ವಿಶ್ವವಿದ್ಯಾಲಯದ ಆಧೀನ ಬಿ.ಎ. ಪದವಿಯನ್ನು ಪೂರೈಸಿ, ತಮ್ಮ ತಂದೆಯ ಇಚ್ಛೆಗೆ ವಿರುದ್ಧವಾಗಿ ಬರೋಡಾ ಮಹಾರಾಜದ ಸಂಸ್ಥಾನದಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದರಿಂದ ಉನ್ನತ ಶಿಕ್ಷಣ ಪ್ರೇಮಿಯಾಗಿದ್ದ ಇವರ ತಂದೆಗೆ ಸಂತೋಷವಾಗಲಿಲ್ಲ. ತಂದೆಯವರು ೧೯೧೩ರಲ್ಲಿ ನಿಧನರಾದರು. ಅಂತ್ಯ ಸಂಸ್ಕಾರಕ್ಕೆ ಬಂದ ಭೀಮರಾವ್‌ ಅವರು ತಂದೆಯ ಚಿತೆಯ ಎದುರಿಗೆ ಉನ್ನತ ಶಿಕ್ಷಣ ಪೂರೈಸುತ್ತೇನೆಂದು ಪ್ರತಿಜ್ಞೆ ಮಾಡಿ ನೌಕರಿಗೆ ತಿಲಾಂಜಲಿ ನೀಡಿದರು. ನಂತರ ಅವರು ಅಮೆರಿಕದ ಕೋಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ, ೧೯೧೬ ರಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಪದವಿ ಪಡೆದರು. ಅವರ ಓದುವ ಹಂಬಲ ತಣಿಯಲಿಲ್ಲ. ಅವರು ಮತ್ತಷ್ಟು ಓದಲು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಸೇರಿ ಪದವಿಯನ್ನು ಪಡೆದರು.
ಬ್ರಿಟಿಷ್‌ರ ಆಡಳಿತ ಕಾಲದಲ್ಲಿ ಬಿ.ಆರ್. ಅಂಬೇಡ್ಕರ್ ಅವರು ವೈಸರಾಯ್ ಕಾರ‍್ಯಕಾರಿ ಮಂಡಳಿಯಲ್ಲಿ ಕಾರ್ಮಿಕ ಸಚಿವರಾಗಿದ್ದರು. ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಮುಂದೆ ಭಾರತ ಸ್ವತಂತ್ರಗೊಂಡಾಗ ಭಾರತದ ಪ್ರಥಮ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದರು.

ಅಸ್ಪೃಶ್ಯತೆಯ ವಿರುದ್ಧದ ಹೋರಾಟ :
೧೯೨೭ ರಿಂದ ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ವಿರುದ್ಧ ಚಳುವಳಿ ಶುರು ಮಾಡಿದರು. ಸಾರ್ವಜನಿಕ ಕುಡಿಯುವ ನೀರಿನ ಸಂಪನ್ಮೂಲಗಳನ್ನು ಸವರ್ಣೀಯರು ದಲಿತರಿಗೂ ಕೂಡ ಉಪಯೋಗಿಸಲು ಬಿಡಿ ಎಂದು ಸಾರ್ವಜನಿಕ ಚಳುವಳಿ ಮತ್ತು ಮೆರವಣಿಗೆಗಳನ್ನು ಶುರು ಮಾಡಿದರು. ಹಿಂದೂ ದೇವಸ್ಥಾನಗಳಲ್ಲಿ ದಲಿತರಿಗೂ ಪ್ರವೇಶ ನೀಡಬೇಕೆಂದು ಅಗ್ರಹಿಸಿದರು. ಇದಕ್ಕಾಗಿಯೇ ಮಹಾಡ್ ಎಂಬಲ್ಲಿ ಸತ್ಯಾಗ್ರಹವನ್ನು ಆರಂಭಿಸಿದರು. ಇದು ಇತಿಹಾಸದ ಪುಟಗಳಲ್ಲಿ ಮಹಾಡ್ ಸತ್ಯಾಗ್ರಹ ಎಂದು ದಾಖಲಾಗಿದೆ. ಲಕ್ಷಾಂತರ ಜನ ದಲಿತರು ಅಂದು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಭಾರತೀಯ ಸಂವಿಧಾನ ಪಿತಾಮಹ :
೧೯೪೭ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾದಾಗ ಅಂದಿನ ಕಾಂಗ್ರೆಸ್ ನೇತೃತ್ವದ ತಾತ್ಕಾಲಿಕ ಸರಕಾರವು ಅಂಬೇಡ್ಕರ್ ಅವರನ್ನು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಲು ಆಹ್ವಾನಿಸಿತು. ಇದಕ್ಕೆ ಅಂಬೇಡ್ಕರ್ ಕೂಡ ಒಪ್ಪಿಗೆ ನೀಡಿದರು. ನಂತರ ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ, ಸಮಿತಿಯ ಇತರ ಸದಸ್ಯರ ನೆರವಿನಿಂದ ವಿವಿಧ ದೇಶಗಳ ಸಂವಿಧಾನಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಭಾರತಕ್ಕಾಗಿ ನೂತನ ಸಂವಿಧಾನ ರಚಿಸಿದರು. ಹೀಗಾಗಿ ಇವರನ್ನು ನಮ್ಮ ಸಂವಿಧಾನದ ಪಿತಾಮಹ ಮತ್ತು ವಾಸ್ತುಶಿಲ್ಪಿ ಎಂತಲೂ ಕರೆಯಲಾಗುತ್ತದೆ.

ಇಂದಿನ ಪ್ರಮುಖ ಸುದ್ದಿ :-   4 ಲಕ್ಷ ರೂ.ಮೌಲ್ಯದ ಬಂಗಾರದ ಸರ, ಮೊಬೈಲ್‌ ಕಳೆದುಕೊಂಡ ಅಂಗನವಾಡಿ ಶಿಕ್ಷಕಿ: ತಕ್ಷಣವೇ ಕಾರ್ಯಪ್ರವೃತ್ತರಾಗಿ ಪತ್ತೆ ಮಾಡಿ ಮರಳಿಸಿದ ಪೊಲೀಸರು

ವೈವಾಹಿಕ ಜೀವನ :
ಅಂಬೇಡ್ಕರ್ ಅವರು ೧೯೦೬ರಲ್ಲಿ ರಮಾಬಾಯಿ ಅವರನ್ನು ಮದುವೆಯಾದರು. ಪತಿಯ ಸಾಧನೆಗೆ ಬೆನ್ನೆಲುಬಾಗಿದ್ದ ರಮಾಬಾಯಿ ೧೯೩೫ರಲ್ಲಿ ಅನಾರೋಗ್ಯದಿಂದಾಗಿ ನಿಧನರಾದರು. ದುಃಖದಿಂದ ಈ ಸಂಸಾರವನ್ನು ತ್ಯಜಿಸಿಲು ನಿರ್ಧರಿಸಿ ಭಗವಾವಸ್ತ್ರ (ಕಷಾಯ ವಸ್ತ್ರ) ಧರಿಸತೊಡಗಿದಾಗ ಜನ ಇವರನ್ನು ಪ್ರೀತಿಯಿಂದ ಬಾಬಾ ಸಾಹೇಬ ಎಂದು ಕರೆಯತೊಡಗಿದರು. ಆದರೇ ಕೆಲ ಹಿರಿಯರ ಸಲಹೆಗೆ ಮಾನ್ಯತೆ ನೀಡಿ ಸಂಸಾರ ತ್ಯಜಿಸಿ ಬೈರಾಗಿಯಾಗಲು ನಿರ್ಧರಿಸಿದ್ದ ಅಂಬೇಡ್ಕರ ತಮ್ಮ ಈ ನಿರ್ಧಾರದಿಂದ ಹಿಂದೆ ಸರಿದು ಅಸ್ಪೃಶ್ಯರ ಧ್ವನಿಯಾಗಿ ಕೊಲ್ಲಾಪುರ ಸಾಹೂ ಮಹಾರಾಜರ ನೆರವಿನಿಂದ ಮೂಕನಾಯಕ ಪತ್ರಿಕೆಯನ್ನು ಆರಂಭಿಸಿದರು. ಅಸ್ಪೃಶ್ಯರ, ದಲಿತರ ಏಳ್ಗಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದರು.
೧೯೪೭ರ ನಂತರ ಅಂಬೇಡ್ಕರ್ ಅವರ ಆರೋಗ್ಯದಲ್ಲಿ ಏರು-ಪೇರು ಉಂಟಾದ ಕಾರಣ ತಮ್ಮ ಆರೈಕೆಗಾಗಿ ಜೀವನ ಸಂಗಾತಿಯ ಅವಶ್ಯಕತೆಯನ್ನು ಮನಗಂಡು ಪುನಃ ೧೯೪೮ರಲ್ಲಿ ಸವಿತಾ ಅವರೊಂದಿಗೆ ಎರಡನೇ ಮದುವೆಯಾದರು. ಇವರನ್ನು ಮಾಯಿ ಎಂದು ಕರೆಯಲಾಗುತ್ತಿತ್ತು. ಇವರು ೨೦೦೩ರ ರಲ್ಲಿ ನಿಧನರಾದರು.

ಅರ್ಥ ಶಾಸ್ತ್ರಜ್ಞ :
ಅಸ್ಪೃಶ್ಯರಿಗೆ ದೇಶ ಪರ್ಯಟನೆಯೇ ಅಸಾಧ್ಯವಾಗಿದ್ದ ಕಾಲದಲ್ಲಿ ವಿದೇಶಕ್ಕೆ ತೆರಳಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಭಾರತದ ಮೊದಲ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಭಾರತದಲ್ಲಿ ಕೃಷಿ ಬೆಳವಣಿಗೆ ಮತ್ತು ಕೈಗಾರಿಕರಣವು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಅದಕ್ಕೆ ಉತ್ತೇಜನ ನೀಡುವುದು ಅಗತ್ಯ ಎಂಬುದು ಅಂಬೇಡ್ಕರರ ಅವರ ವಿಚಾರವಾಗಿತ್ತು.
ಶಿಕ್ಷಣ, ಸ್ವಚ್ಛತೆ, ಸಮುದಾಯ ಆರೋಗ್ಯ, ವಸತಿ, ಸೌಲಭ್ಯ, ಇವೆಲ್ಲವೂ ಪ್ರತಿಯೊಬ್ಬರಿಗೆ ಮೂಲಭೂತ ಸೌಕರ‍್ಯಗಳು ಲಭಿಸಿ, ಸರ್ವರಿಗೂ ಸಮಪಾಲು ಸಮಬಾಳು ದೊರೆಯ ಬೇಕೆಂಬುದನ್ನು ಪ್ರತಿಪಾದಿಸಿದರು. ೧೯೫೬ ರಲ್ಲಿ ಇವರು ನಿಧನ ಹೊಂದುವ ಮುನ್ನ ತಮ್ಮ ೫ ಲಕ್ಷ ಜನ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಜರುಗಿದ ಬೃಹತ್ ಸಮ್ಮೇಳನದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು.
ಜಾತಿ-ತಾರತಮ್ಯವು ಬಹುತೇಕ ರಾಷ್ಟ್ರವನ್ನು ಛಿದ್ರಗೊಳಿಸುತ್ತಿರುವುದನ್ನು ಗಮನಿಸಿದ್ದ ಅಂಬೇಡ್ಕರ್ ಅವರು ದಲಿತರು ಮತ್ತು ಇತರ ಧಾರ್ಮಿಕ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ಪರಿಕಲ್ಪನೆಗೆ ಒಲವು ತೋರಿಸಿ ಅದಕ್ಕೊಂದು ಮೂರ್ತರೂಪ ನೀಡಿದರು.

ಅಂಬೇಡ್ಕರ ಮತ್ತು ಗಾಂಧೀಜಿ :
ಅಂಬೇಡ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಅಸ್ಪೃಶ್ಯರ ಹಕ್ಕುಗಳ ಬದ್ದತೆಯ ಕೊರತೆ ಬಗ್ಗೆ ಟೀಕೆ ಮಾಡಿದರು. ಮತ್ತು ೧೯೩೨ ರ ಪೂನಾ ಒಪ್ಪಂದದ ಫಲಿತಾಂಶದಿಂದ ಅಂಬೇಡ್ಕರ್ ಅವರು ಕಟುವಿಮರ್ಶಕರಾದರೂ ಕೂಡ ಗಾಂಧೀಜಿಯವರ ಬಗ್ಗೆ ಅಪಾರ ಗೌರವ ಹೊಂದಿದ್ದರು.   ಅಂಬೇಡ್ಕರ್ ಅವರಿಗೆ, ಕಾನೂನು, ರಾಜಕೀಯ ಅಧಿಕಾರ ಮತ್ತು ಶಿಕ್ಷಣದಲ್ಲಿ ನಂಬಿಕೆ ಇತ್ತು.

ಮರಣ :
ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ೬ ಡಿಸೆಂಬರ್ ೧೯೫೬ ರಂದು ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು.
ಭಾರತ ಸರಕಾರವು ಇವರಿಗೆ ಮರಣೋತ್ತರವಾಗಿ ಭಾರತದ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ತನ್ನನ್ನು ತಾನು ಗೌರವಿಸಿಕೊಂಡಿದೆ. ಡಾ. ಅಂಬೇಡ್ಕರ್ ಅವರ ಹೆಸರು ತುಳಿತಕ್ಕೊಳಗಾದ ಮತ್ತು ದೀರ್ಘ ಶೋಷಿತರ ಜಾಗೃತಿಯ ಸಂಕೇತವಾಗಿ ಉಳಿದಿದೆ.

ಅಂಬೇಡ್ಕರ್ ಅವರ ಪುಸ್ತಕ ಪ್ರೇಮ :
ಶಿಕ್ಷಣ ಮತ್ತು ವಿದ್ಯಾಭ್ಯಾಸದ ಕುರಿತಾಗಿ ಅಪಾರ ಪ್ರೇಮವನ್ನು ಹೊಂದಿ ಕಲಿಯಬೇಕೆಂಬ ಅಪಾರ ಇಚ್ಛೆಯನ್ನು ಹೊಂದಿದ್ದ ಬಾಲಕ ಭೀಮರಾವ್ ಅವರು ಶಾಲೆಯಲ್ಲಿ ತನ್ನ ವಯೋಮಾನದ ಮಕ್ಕಳ ಜೊತೆಗೆ ಕುಳಿತು ಕೊಳ್ಳದೇ ತರಗತಿಯ ಹೊರಗಡೆ ಕುಳಿತು ಕೊಳ್ಳುವ ಪರಿಸ್ಥಿತಿ ಬಂದರೂ ಅವಮಾನ ಸಹಿಸಿಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದರು. ಶಾಲೆಯಲ್ಲಿ ಶಿಕ್ಷಕರು ಹಾಗೂ ಸಹಪಾಠಿಗಳಾದಿಯಾಗಿ ಇವರನ್ನು ಅಸಹ್ಯವಾಗಿ ನೋಡುತ್ತಿದ್ದರು. ಆದರೆ ಫೆಂಡಸೇ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ, ಸೂಕ್ಷ್ಮ ಬುದ್ಧಿ ಶಕ್ತಿ ಮತ್ತು ಕಲಿಯುವ ಹಂಬಲ ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಭೀಮರಾವ್ ರಾಮಜಿ ಅಂಬೇವಾಡಕರ್ ಇದ್ದ ಹೆಸರು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ಬದಲಾವಣೆಯಾಯಿತು.
ಡಾ. ಅಂಬೇಡ್ಕರ ಎಂದರೇ ಕೇವಲ ಸಂವಿಧಾನ ರಚನೆಗೆ, ಅಲಕ್ಷಿತರ, ಅಸ್ಪೃಶ್ಯರ, ದಲಿತರ ಏಳ್ಗಿಗೆಗೆ ಮಾತ್ರ ಶ್ರಮಿಸಿದವರಲ್ಲ. ಈ ನೆಲದ ಮನುಷ್ಯರೊಳಗಿನ ಅಮಾನವೀಯತೆಯನ್ನು ಮೂಲೋತ್ಪಟನೆ ಮಾಡಿ ಸಮಾನತೆಯನ್ನು ತರಬೇಕೆಂಬ ಹಂಬಲ ಹೊಂದಿದ ಮಹಾಮಾನವತಾವಾದಿಯಾಗಿದ್ದರು. ಅಮೆರಿಕೆಯ ಕೊಲಂಬಿಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಪದವಿಯನ್ನು ಪೂರೈಸಿ ಭಾರತಕ್ಕೆ ಹಡಗಿನಲ್ಲಿ ಮರಳುವಾಗ ಇವರೊಂದಿಗೆ ೭೫,೦೦೦ ಪುಸ್ತಕಗಳೂ ಕೂಡ ಭಾರತಕ್ಕೆ ಬಂದಿದ್ದವು. ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತಿದ್ದ ಡಾ. ಅಂಬೇಡ್ಕರ್ ಅವರು ಅಚ್ಚು ಮೆಚ್ಚಿನ ಸಂಗಾತಿಗಳು ಪುಸ್ತಕಗಳೇ ಆಗಿದ್ದವು. ಇವರ ಮನೆಯೇ ಒಂದು ಬೃಹತ್ ಗ್ರಂಥಾಲಯವಾಗಿತ್ತು. ಮನೆಯ ೭೫% ಭಾಗದಲ್ಲಿ ಪುಸ್ತಕಗಳೇ ಇದ್ದವು.
ಶಾಸಕಾಂಗ, ಕಾರ‍್ಯಾಂಗ ಮತ್ತು ನ್ಯಾಯಾಂಗ ಕುರಿತು ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿದ ಅವರು ನಮ್ಮ ದೇಶಕ್ಕೆ ಸಂವಿಧಾನ ನೀಡಿದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಪ್ರವಾಸ ಸಂದರ್ಭದಲ್ಲಿಯೂ ಹೊಸ ಹೊಸ ಗ್ರಂಥಗಳನ್ನು ಓದುತ್ತಿದ್ದರಲ್ಲದೆ, ತಾವು ಹೋದ ಕಡೆಗಳಲ್ಲಿ ಗ್ರಂಥಾಲಯಗಳಿಗೆ, ಪುಸ್ತಕಾಲಯಗಳಿಗೆ ಭೇಟಿ ನೀಡಿ ಪುಸ್ತಕ ಸಂಸ್ಕೃತಿಗೆ ಹೊಸ ಸ್ವರೂಪ ನೀಡಿದ್ದಾರೆ. ವಿವಿಧ ವಿಷಯಗಳ ಮೂಲ ಗ್ರಂಥಗಳನ್ನು ಅವರು ನಿರಂತರ ಅಧ್ಯಯನ ಮಾಡುತ್ತಿದ್ದರು.

ಇಂದಿನ ಪ್ರಮುಖ ಸುದ್ದಿ :-   ಕಾಂಗ್ರೆಸ್ 4ನೇ ಗ್ಯಾರಂಟಿ 'ಯುವ ನಿಧಿ' ಯೋಜನೆ ; ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನಿರುದ್ಯೋಗ ಭತ್ಯೆ ಘೋಷಿಸಿದ ರಾಹುಲ್‌ ಗಾಂಧಿ

ಮುಂದೆ ಬರೋಡಾ ಮಹಾರಾಜರ ನೇರವಿನಿಂದ ಮುಂದಿನ ಶಿಕ್ಷಣವನ್ನು ಪೂರೈಸಿ ಬರೋಡಾ ಮಹಾರಾಜರ ಸೇನೆಯಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ. ಅಲ್ಲಿ ಕೇವಲ ೧೫ ದಿನ ಮಾತ್ರ ಸೇವೆ ಸಲ್ಲಿಸುತ್ತಾರೆ. ಫೆಬ್ರವರಿ ೨, ೧೯೧೩ಕ್ಕೆ ಇವರ ತಂದೆಯ ನಿಧನವಾದ ತರುವಾಯ ತಂದೆಯ ಆಸೆಯನ್ನು ಈಡೇರಿಸಲು ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕೆಯ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿನ ಮುಕ್ತ ವಾತಾವರಣದಲ್ಲಿ ಎಂ.ಎ. ಪದವಿಯನ್ನು ಹಾಗೂ ೧೯೧೬ ರಲ್ಲಿ ಪಿ.ಎಚ್. ಡಿ. ಪದವಿ ಪಡೆದು. ಡಾ. ಬಿ.ಆರ್. ಅಂಬೇಡ್ಕರ್ ಆಗಿ ಡಿ.ಎಸ್.ಸಿ. ಪದವಿ ಪಡೆಯಲು ಲಂಡನ್ನಿಗೆ ತೆರಳಿ ಪ್ರವೇಶ ಪಡೆಯುತ್ತಾರೆ. ಆದರೆ ಬರೋಡಾ ಮಹಾರಾಜರಿಗೆ ನೀಡಿದ ಒಪ್ಪಂದ ಅನುಸಾರ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಬರೋಡಾ ಸಂಸ್ಥಾನದ ಸೇವೆಗಾಗಿ ಭಾರತಕ್ಕೆ ಮರಳುತ್ತಾರೆ. ಸೇವೆಗೆ ಸೇರಿದಾಗ್ಯೂ ಇಲ್ಲಿಯೂ ಕೂಡ ಜಾತಿಯತೆಯ ಭೂತ ಬೆಂಬಿಡದೇ ಕಾಡಿದಾಗ ಬರೋಡಾ ಮಹಾರಾಜರ ಸೇವೆಯಿಂದ ಹೊರಬಂದು ಮುಂಬೈಯಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ.
ಡಾ. ಅಂಬೇಡ್ಕರ್ ಭಾರತದಲ್ಲಿ ದಲಿತರ ವಿರುದ್ದ ನಡೆಯುತ್ತಿದ್ದ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾಮಾನವತಾವಾದಿಯಾಗಿ ಖ್ಯಾತ ನ್ಯಾಯಶಾಸ್ತ್ರಜ್ಞರಾಗಿ, ಸಮಾಜಶಾಸ್ತ್ರಜ್ಞರಾಗಿ, ಆರ್ಥಿಕ ತಜ್ಞರಾಗಿ, ವಕೀಲರಾಗಿ, ಚುನಾಯಿತ ಪ್ರತಿನಿಧಿಯಾಗಿ, ಸಮಾಜ ಸುಧಾರಕರಾಗಿ ಕಾರ್ಯ ಮಾಡಿದ್ದಾರೆ.
ಭಾರತೀಯ ಎಲ್ಲ ಭಾಷೆಗಳಲ್ಲಿ ಅಂಬೇಡ್ಕರ ಅವರ ಜೀವನ ಮತ್ತು ಸಾಧನೆಗಳು ಕುರಿತು ಅಪಾರವಾದ ಸಾಹಿತ್ಯ ಪ್ರಕಟವಾಗಿದೆ. ಅವರ ಶಿಸ್ತು, ಅಧ್ಯಯನ ಶೀಲತೆ, ಬರವಣಿಗೆ, ವಸ್ತು ಸಂಹಿತೆ, ಅಚ್ಚುಕಟ್ಟುತನ, ದಾಖಲೆ ಮತ್ತು ಅಂಕಿ ಅಂಶಗಳೊಂದಿಗೆ ವಿಷಯ ಮಂಡನೆ, ಶ್ರದ್ಧೆ, ಕಾರ್ಯತತ್ಪರತೆ ನಮಗೆಲ್ಲ ಅನುಕರಣಿಯವಾಗಿದೆ.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement