ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ: ಎಫ್‌ಐಆರ್‌ ಬೆನ್ನಲ್ಲೇ ಈಶ್ವರಪ್ಪಗೆ ಹೆಚ್ಚಿದ ಸಚಿವ ಸ್ಥಾನದ ತಲೆದಂಡದ ಭೀತಿ

ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರ ಮೇಲೆ ಎಫ್‌ಐಆರ್‌ ದಾಖಲಾಗುತ್ತದ್ದಂತೆ ಅವರಿಗೆ ಈಗ ತಲೆದಂಡದ ತೂಗುಗತ್ತಿ ನೇತಾಡುತ್ತಿದೆ. ಅವರು ತಲೆದಂಡ ಆಗಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಬುಧವಾರ ಬೆಳಗ್ಗೆಯಷ್ಟೇ ಸಂತೋಷ ಅವರ ಸಹೋದರ ಪ್ರಶಾಂತ ಪಾಟೀಲ ಅವರು ದೂರು ದಾಖಲಿಸಿದ್ದು, ಈ ದೂರಿನಲ್ಲಿ ಸಚಿವ ಕೆ. ಎಸ್. ಈಶ್ವರಪ್ಪನವರೇ ಮೊದಲ ಆರೋಪಿ. ಅವರ ಆಪ್ತ ಸಹಾಯಕರ ಹೆಸರನ್ನೂ ದೂರಿನಲ್ಲಿ ನಮೂದಿಸಲಾಗಿದೆ. ಐಪಿಸಿ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದ್ದು, ಎಫ್‌ಐಆರ್‌ನಲ್ಲೂ ಮೊದಲ ಆರೋಪಿ ಎಂದು ನಮೂದಿಸಲಾಗಿದೆ.
ಈ ಬೆಳವಣಿಗೆಯ ನಂತರ ಬೆಂಗಳೂರಿಗೆ ಬರುವಂತೆ ಮುಖ್ಯಮಂತ್ರಿ ಬೊಮ್ಮಾಯಿ  ಅವರೇ ಬುಲಾವ್‌ ನೀಡಿದ್ದು, ಈ ಹಿನ್ಲೆಲೆಯಲ್ಲಿ ಮೈಸೂರು ಪ್ರವಾಸದಲ್ಲಿದ್ದ ಸಚಿವ ಕೆ. ಎಸ್. ಈಶ್ವರಪ್ಪ ಬೆಂಗಳೂರಿಗೆ ದೌಡಾಯಿಸುತ್ತಿದ್ದಾರೆ. ಮಂಗಳೂರು ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿಗೆ ವಾಪಸ್ಸಾಗಿದ್ದು, ಈಶ್ವರಪ್ಪ ಅವರ ಜೊತೆ ಮುಖಾಮುಖಿ ಮಾತನಾಡಿದ ನಂತರ ಈಶ್ವರಪ್ಪ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ, ಹೈಕಮಾಂಡಿಗೆ ಈ ಎಲ್ಲ ಬೆಳವಣಿಗೆಗಳ ಮಾಹಿತಿ ಇದೆ. ಹಾಗೂ ತಾನು ಸಹ ದೂರವಾಣಿ ಹಾಗೂ ಮುಖತಃ ಈಶ್ವರಪ್ಪ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದು, ಈಶ್ವರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಬಹುದು ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಕೂಡಾ ಮಧ್ಯಪ್ರವೇಶ ಮಾಡಿದ್ದು, ಬುಧವಾರ ಕೂಡಾ ಎಲ್ಲಾ ಬೆಳವಣಿಗೆ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ. ಈಶ್ವರಪ್ಪ ಅವರ ವಿರುದ್ಧ ಕಾಂಗ್ರೆಸ್ ರಾಜ್ಯಪಾಲರಿಗೂ ದೂರು ನೀಡಿದ್ದು, ಈಗಾಗಲೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ, ಚುನಾವಣಾ ವರ್ಷದಲ್ಲಿ ರಿಸ್ಕ್‌ ತೆಗೆದುಕೊಳ್ಳಲು ಬಯಸದ ಬಿಜೆಪಿ ಹೈಕಮಾಂಡ್ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಸೂಚಿಸಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಈಶ್ವರಪ್ಪಗೆ ವಾಟ್ಸಪ್‌ ಸಂದೇಶದ್ದೇ ಕಂಟಕ..?
ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತರು ಬಿಲ್ ಪಾಸ್ ಮಾಡಲು ಕಮೀಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಈ ಮೊದಲು ಪ್ರಧಾನಿಗೆ ಪತ್ರ ಬರೆದಿದ್ದ ಸಂತೋಷ ಪಾಟೀಲ, ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೆಲ ಆಪ್ತರಿಗೆ ಹಾಗೂ ಮಾಧ್ಯಮದವರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ,
‘ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರಾದ ಕೆ. ಎಸ್‌. ಈಶ್ವರಪ್ಪನವರೇ ನೇರ ಕಾರಣ. ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ, ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ. ಎಸ್‌. ಯಡಿಯೂರಪ್ಪನವರು, ಎಲ್ಲರೂ ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಜೊತೆ ಬಂದ ನನ್ನ ಗೆಳೆಯರಾದ ಸಂತೋಷ ಮತ್ತು ಪ್ರಶಾಂತ್‌ಗೆ ನಾವು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡು ಬಂದಿರುತ್ತೇನೆ ಅಷ್ಟೇ. ಅವರಿಗೆ ನನ್ನ ಸಾವಿನ ಬಗ್ಗೆ ಯಾವುದೇ ಸಂಬಂಧ ಇರುವುದಿಲ್ಲ.’ ಎಂದು ಸಂತೋಷ್‌ ಅವರು ಸಂದೇಶ ರವಾನಿಸಿದ್ದರು. ಇದು ಈಗ ಈಶ್ವರಪ್ಪ ಅವರ ತಲೆದಂಡಕ್ಕೆ ಕಾರಣವಾಗಬಹುದು. ಯಾಕೆಂದರೆ ಮುಂದಿನ ಚುನಾವಣಾ ತಯಾರಿ ದೃಷ್ಟಿಯಿಂದ ಮೂರು ತಂಡಗಳಲ್ಲಿ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಹೊರಟ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಈ ಮೊದಲು ಈಶ್ವರಪ್ಪ ರಾಷ್ಟ್ರದ್ವಜದ ವಿಚಾರದಲ್ಲಿ ವಿವಾದಿತ ಹೇಳಿಕೆ ನೀಡಿದ್ದು ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ಈಶ್ವರಪ್ಪ ಅವರ ತಲೆದಂಡವಾಗಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ತೀವ್ರ ಮಹತ್ವ ಪಡೆದಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement