‘ಫೋನ್ ಮೂಲಕ ಪಿಂಚಣಿ’ ಮನೆಬಾಗಿಲೆಗೆ ಯೋಜನೆಗೆ ಹತ್ತು ದಿನದಲ್ಲಿ ಚಾಲನೆ: ಕಂದಾಯ ಸಚಿವ ಅಶೋಕ

ಕಾರವಾರ: ಫೋನ್ ಮೂಲಕ ಪಿಂಚಣಿಯನ್ನು ಫಲಾನುಭವಿಗಳಿಗೆ ತಲುಪಿಸುವ ಯೋಜನೆ ರೂಪಿಸಲಾಗುತ್ತಿದ್ದು, 10 ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ಕಂದಾಯ ಸಚಿವರ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಫೋನ್ ಕರೆ ಮಾಡಿದವರ ಮನೆಗೆ ಕಂದಾಯ ಸಿಬ್ಬಂದಿ ತೆರಳಿ, ಅಲ್ಲಿಯೇ ಮಹಜರು ಮಾಡಿ ಪ್ರಮಾಣೀಕರಿಸಿ ಪ್ರಮಾಣಪತ್ರ ನೀಡಲಿದ್ದಾರೆ. ಬಳಿಕ ಅವರಿಗೆ ಪಿಂಚಣಿ ವಿತರಣೆ ಮಾಡಲಾಗುತ್ತದೆ. ಜನರಿದ್ದಲ್ಲೇ ಸರ್ಕಾರ, ಜನರದ್ದೇ ಸರ್ಕಾರ ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಲಾಗುತ್ತಿದೆ’ ಎಂದರು.

ನಾಲ್ಕು ಅಂಕಿಗಳ ಗಳ ಟೋಲ್ ಫ್ರೀ ನಂಬರ್ ನೀಡಲಾಗುತ್ತದೆ. ಆ ನಂಬರ್ ಗೆ ಕರೆ ಮಾಡಿ ಪಿಂಚಣಿ ಫಲಾನುಭವಿಗಳಾಗುವವರ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ಸಂಖ್ಯೆ ನೀಡಬೇಕು. ನಂತರ ಗ್ರಾಮ ಸಹಾಯಕರು ಅವರ ಮನೆಗೆ ತೆರಳಿ ಫಲಾನುಭವಿಯ ಫೋಟೋ, ಇತರೆ ದಾಖಲೆ ಪಡೆದು ಅದನ್ನು ಕಂಪ್ಯೂಟರ್‌ನಲ್ಲಿ ಅಪ್ ಲೋಡ್ ಮಾಡುತ್ತಾರೆ. ನಂತರ ಪ್ರಮಾಣ ಪತ್ರ ಫಲಾನುಭವಿಯ ಕೈಸೇರಲಿದೆ. ಇಂಥ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ. 10 ದಿನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕೆಲವು ಜಿಲ್ಲಾಧಿಕಾರಿಗಳು ಸರಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ ಎನ್ನುವ ದೂಗಳಿವೆ. ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಆ ರೀತಿ ಮಾಡದಂತೆ ಪತ್ರ ಬರೆದು ಸೂಚಿಸಲಾಗುವುದು ಎಂದರು. ಸ್ಥಳೀಯರ ಸಮಸ್ಯೆ ಅರಿತುಕೊಳ್ಳುವ ಅವಶ್ಯಕತೆ ಇದ್ದು ಸರಕಾರಿ ಶಾಲೆ, ಸರಕಾರಿ ವಸತಿ ನಿಲಯದಲ್ಲೇ ವಾಸ್ತವ್ಯ ಮಾಡಲು ಸೂಚಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement