ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ಕೊಟ್ಟ ತಾಲಿಬಾನ್

ಕಾಬೂಲ್: ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಪಾಕಿಸ್ತಾನಕ್ಕೆ ಈಗ ಸ್ವತಃ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಅಫ್ಘಾನಿಸ್ತಾನದ ಮೇಲೆ ಹಲವಾರು ಬಾರಿ ವೈಮಾನಿಕ ದಾಳಿ ನಡೆಸಿರುವ ಪಾಕ್​ಗೆ ತಾಲಿಬಾನ್ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ಇದೇ ರೀತಿ ದಾಳಿ ಮುಂದುವರೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೆ ಆಫ್ಘನ್​ನ ಖೋಸ್ಟ್ ಮತ್ತು ಕುನಾರ್ ಪ್ರಾಂತ್ಯಗಳ ಮೇಲೆ ಪಾಕ್ ವೈಮಾನಿಕ ದಾಳಿಯನ್ನು ನಡೆಸಿ ಸುಮಾರು 60 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಫ್ಘಾನಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಹಾಗೂ ತಾಲಿಬಾನ್ ಸರ್ಕಾರದ ವಕ್ತಾರರಾದ ಜಬೀವುಲ್ಲಾ ಮುಜಾಹಿದ್ ಪಾಕಿಸ್ತಾನವು ಆಫ್ಘಾನಿಸ್ತಾನದ ಜನರ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಹೇಳಿದ್ದಾರೆ. ಪಾಕಿಸ್ತಾನವು ನಮ್ಮ ತಾಳ್ಮೆ ಪರೀಕ್ಷಿಸಲು ಮುಂದಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇಂತಹ ಕೃತ್ಯಗಳು ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡುತ್ತದೆ. ನಾವು ರಾಜತಾಂತ್ರಿಕ ಮಾರ್ಗಗಳು ಮತ್ತು ಮಾತುಕತೆಗಳ ಮೂಲಕ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಅಲ್ಲದೇ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಮುಜಾಹಿದ್ ಹೇಳಿದ್ದಾರೆಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಅಮೆರಿಕವನ್ನು ಸೋಲಿಸುವ ಮೂಲಕ ಆಫ್ಘನ್ನರು ತಮ್ಮ ದೇಶವನ್ನು ತಾವೇ ರಕ್ಷಿಸಿಕೊಳ್ಳಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದ್ದರಿಂದ ಪಾಕ್ ನಮ್ಮ ಜನರ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಮುಜಾಹಿದ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಆಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯವು ಕಾಬೂಲ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್ ಅವರನ್ನು ಸಚಿವಾಲಯಕ್ಕೆ ಕರೆಸಿ, ಈ ವಿಚಾರವಾಗಿ ಚರ್ಚೆ ನಡೆಸಿದ್ದು, ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಯುವಂತೆ ಮನವಿ ಮಾಡಿದೆ ಎಂದು ಖಾಮಾ ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ