50 ಕೋಟಿ ರೂ.ಗಳಿಗಿಂತ ಮೇಲ್ಪಟ್ಟ ಕಾಮಗಾರಿಗಳ ಅನುಮೋದನೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ: ಸಿಎಂ ಬೊಮ್ಮಾಯಿ

ಶಿವಮೊಗ್ಗ: ರಾಜ್ಯದ ಎಲ್ಲ ಇಲಾಖೆಯ 50 ಕೋಟಿ ರೂ.ಗಳ ಮೇಲ್ಪಟ್ಡ ಕಾಮಗಾರಿಗಳಿಗೆ ಅನುಮೋದನೆ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿಗಳ ಅಂದಾಜು ವೆಚ್ಚ ಮಾಡುವಾಗಿನಿಂದಲೇ ಎಲ್ಲವೂ ಪ್ರಾರಂಭವಾಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಾಗೂ ತಮಗೆ ಬೇಕಾದಂತವರಿಗೆ ಟೆಂಡರ್ ಕಂಡೀಷನ್ ಮಾಡುವುದನ್ನು ನಿಯಂತ್ರಿಸುವ ಸಲುವಾಗಿ ಒಂದು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಮಿತಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಹಣಕಾಸು ಇಲಾಖೆಯ ಪರಿಣಿತರು ಹಾಗೂ ಆಯಾ ಇಲಾಖೆಯ ತಾಂತ್ರಿಕ ತಜ್ಞರು ಇರಲಿದ್ದಾರೆ. ಈ ಸಮಿತಿಯನ್ನು ಕೆಟಿಟಿಪಿ ಕಾಯ್ಧೆಯಂತೆಯೇ ರಚನೆ ಮಾಡಲಾಗುವುದು ಹಾಗೂ ಸಮಿತಿಯು ಎಲ್ಲವನ್ನೂ ಗಮನಿಸಿ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತದೆ. ಇದು ಅಂತಿಮ ಹಂತಕ್ಕೆ ಬಂದಿದ್ದು, ಇನ್ನೊಂದು ವಾರದಲ್ಲಿ ಈ ಬಗ್ಗೆ ಆದೇಶ ಜಾರಿಯಾಗಬಹುದು ಎಂದು ಬೊಮ್ಮಾಯಿ ಹೇಳಿದರು.

ಸಮಿತಿಯು 15 ದಿನಗಳ ಒಳಗೆ ಕಾಮಗಾರಿಗೆ ಅನುಮೋದನೆ ನೀಡುತ್ತದೆ ಎಂದ ಅವರು, ಒಂದುವೇಳೆ ಒಂದು ಸಮಿತಿಗೆ ಒತ್ತಡ ಹೆಚ್ಚಾದರೆ ಮತ್ತೊಂದು ಸಮಿತಿ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದು ರಾಜ್ಯಮಟ್ಟದ ಸಮಿತಿಯಾಗಿದ್ದು, ಅಗತ್ಯ ಎನಿಸಿದರೆ, ಜಿಲ್ಲಾಮಟ್ಟಕ್ಕೂ ರಚನೆ ಮಾಡಲಾಗುತ್ತದೆ. ಇನ್ನು ಡಿಪಿಆರ್ ಇಲಾಖೆಯವರಿಗೆ ಖಡಕ್ ಸೂಚನೆ ನೀಡಿದ್ದು, ಯಾರೂ ಸಹ ಮೌಖಿಕ ಕಾಮಗಾರಿ ನಡೆಸದಂತೆ ಅವರಿಗೆ ಸೂಚಿಸಿದ್ದೇನೆ. ಒಂದುವೇಳೆ ಸೂಚನೆಯ ಹೊರತಾಗಿಯೂ ಅಂಥದ್ದು ನಡೆದರೆ ಅದಕ್ಕೆ ಆಯಾ ಅಧಿಕಾರಿಗಳೇ ಹೊಣೆಯನ್ನಾಗಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement