ಭಾರತದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ತಜ್ಞರ ಸಮಿತಿ ಶಿಫಾರಸು

ನವದೆಹಲಿ: ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ವರದಿಗಳ ಮಧ್ಯೆ ಮಕ್ಕಳಿಗೆ ಹೆಚ್ಚು ಅಪಾಯ ಆಗುವ ಸಾಧ್ಯತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(DCGI)ದ ವಿಷಯ ತಜ್ಞರ ಸಮಿತಿಯು 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡುವಂತೆ ಶಿಫಾರಸ್ಸು ಮಾಡಿದೆ.
ದೇಶದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಬಯೋಲಾಜಿಕಲ್-ಇ ಸಂಸ್ಥೆಯ ಕೊರ್ಬೋವ್ಯಾಕ್ಸ್ ಲಸಿಕೆಯನ್ನು ನೀಡುವಂತೆ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ. ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ಗೆ ಕಳುಹಿಸಲಾಗಿದೆ. ಡಿಸಿಜಿಐ ಅಂತಿಮ ಒಪ್ಪಿಗೆಗೆ ಕಾಯಲಾಗುತ್ತಿದೆ.

ಭಾರತದ ಮೂರನೇ ಸ್ವದೇಶಿ ಲಸಿಕೆಯಾದ ಕೊರ್ಬೆವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ. ಭಾರತವು ಮಾರ್ಚ್ 16 ರಂದು 12-14 ವರ್ಷ ವಯಸ್ಸಿನ ಮಕ್ಕಳಿಗೆ ಚುಚ್ಚುಮದ್ದು ನೀಡಲು ಪ್ರಾರಂಭಿಸಿತು. ಇಲ್ಲಿಯವರೆಗೆ, 2.53 ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್‌-19 ಲಸಿಕೆಯನ್ನು ಮೊದಲ ಡೋಸ್‌ ನೀಡಲಾಗಿದೆ.
ಡಿಸೆಂಬರ್ 24, 2021 ರಂದು 12 ರಿಂದ 18 ವರ್ಷ ವಯಸ್ಸಿನವರಿಗೆ ಕೊವಾಕ್ಸಿನ್‌ (Covaxin) ತುರ್ತು ಬಳಕೆಗೆ ಅನುಮತಿ ನೀಡಲಾಯಿತು. ಜನವರಿ 3 ರಂದು, 15-18 ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ನೀಡಲು ಆರಂಭಿಸಲಾಯಿತು.

ಓದಿರಿ :-   ಭಯೋತ್ಪಾದನೆಗೆ ಹಣಕಾಸು ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೋಷಿ ಎಂದು ಎನ್‌ಐಎ ನ್ಯಾಯಾಲಯ ತೀರ್ಪು

ಬಯೋಲಾಜಿಕಲ್-ಇ ಲಿಮಿಟೆಡ್ ಸಂಸ್ಥೆಯ ಕೊರ್ಬೆವ್ಯಾಕ್ಸ್ ಲಸಿಕೆಯು ಕೊರೊನಾವೈರಸ್ ಸೋಂಕಿನ ವಿರುದ್ಧ ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರಿಸೆಪ್ಟರ್ ಬೈಂಡಿಂಗ್ ಡೊಮೈನ್ (RBD) ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದೆ. ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಡಿಸಿಜಿಐ (DCGI) ಮೊದಲು 2021ರ ಡಿಸೆಂಬರ್ 28ರಂದು ವಯಸ್ಕರಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಅನುಮೋದಿಸಿತ್ತು.
ಕೊರ್ಬೆವಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ಜಾಗದಲ್ಲಿ ನೀಡಲಾಗುತ್ತದೆ. 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ಲಸಿಕೆಯನ್ನು ಸಂಗ್ರಹಿಸಿ ಇಡಲಾಗುತ್ತದೆ. 0.5 ಮಿಲಿ (ಸಿಂಗಲ್ ಡೋಸ್) ಮತ್ತು 5 ಮಿಲಿ (10 ಡೋಸ್) ಸೀಸೆ ಪ್ಯಾಕ್‌ನಂತೆ ನೀಡಲಾಗುತ್ತದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ