ಇಂಡೋ-ಪೆಸಿಫಿಕ್ ಸುರಕ್ಷತೆಗೆ ಒತ್ತು: ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ-ಜಾನ್ಸನ್

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಲು ಬ್ರಿಟನ್ ಮುಂದಾಗಿದ್ದು, ಶುದ್ಧ ಮತ್ತು ನವೀಕರಿಸಬಹುದಾದ ಇಂಧನದ ಭವಿಷ್ಯದ ಯೋಜನೆಗಳಲ್ಲಿ ಭಾರತದ ಹೊಸ ಸಹಕಾರವನ್ನು ಬಯಸಿದೆ. ಪ್ರಮುಖವಾಗಿ ಭಾರತ-ಇಂಗ್ಲೆಂಡ್ ನಡುವಿನ ರಕ್ಷಣಾ ಸಹಕಾರ ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿರುವ ಉಭಯ ನಾಯಕರು, ಇಂಡೋ-ಪೆಸಿಫಿಕ್ ಭಾಗದ ಸುರಕ್ಷತೆಗಾಗಿ ಮತ್ತಷ್ಟು ಹತ್ತಿರವಾಗುವಂತೆ ಪೂರಕ ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇಂಡೋ-ಪೆಸಿಫಿಕ್ ಭಾಗದಲ್ಲಿ ಚೀನಾದ ಪ್ರಭಾವ ಕಡಿಮೆ ಮಾಡಲು ಭಾರತ-ಇಂಗ್ಲೆಂಡ್ ನಡುವೆ ರಕ್ಷಣಾ ಒಪ್ಪಂದಗಳು ಏರ್ಪಡುವ ಅಗತ್ಯವನ್ನು ಉಭಯ ದೇಶಗಳ ನಾಯಕರು ಒತ್ತಿ ಹೇಳಿದ್ದಾರೆ. ಜಾಗತಿಕ ಸಮೀಕರಣದಲ್ಲಿ ಭಾರತ-ಇಂಗ್ಲೆಂಡ್ ನಿರ್ವಹಿಸಬಹುದಾದ ಪಾತ್ರದ ಕುರಿತು ಸಹ ಬೋರಿಸ್ ಜಾನ್ಸನ್ ಮತ್ತು ನರೇಂದ್ರ ಮೋದಿ ನಡುವೆ ಮಾತುಕತೆ ನಡೆದಿದೆ.

ಅಲ್ಲದೆ, ಅಫ್ಘಾನಿಸ್ತಾನದಲ್ಲಿ ಬದಲಾಗಿರುವ ರಾಜಕೀಯ ಸಮೀಕರಣ, ರಷ್ಯಾ-ಉಕ್ರೇನ್‌ ಯುದ್ಧದಿಂದ ಎದುರಾಗಿರುವ ಸವಾಲುಗಳ ಕುರಿತು ಉಭಯ ನಾಯಕರೂ ಸುದೀರ್ಘವಾಗಿ ಚರ್ಚಿಸಿದ್ದು, ಜಾಗತಿಕ ಶಾಂತಿ ಸ್ಥಾಪನೆಯಲ್ಲಿ ತಾವು ನಿರ್ವಹಿಸಬಹುದಾದ ಪಾತ್ರಗಳ ಕುರಿತು ಅವರು ಮಾತನಾಡಿದ್ದಾರೆ.
ಭಾರತದೊಂದಿಗಿನ ರಾಜತಾಂತ್ರಿಕ, ಸಾಂಸ್ಕೃತಿಕ, ರಕ್ಷಣಾ ಸಂಬಂಧ ವೃದ್ಧಿ ಎರಡೂ ದೇಶಗಳ ನಡುವಿನ ದಶಕಗಳ ಬದ್ಧತೆ ಎಂದು ಹೇಳಿರುವ ಬೋರಿಸ್ ಜಾನ್ಸನ್, ಇಂಗ್ಲೆಂಡ್-ಭಾರತ ಗರಿಷ್ಠ ಸಂಬಂಧ ಜಾಗತಿಕವಾಗಿ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ಮೂಡು ಬಂದಿರುವ ರಕ್ಷಣಾ ಒಪ್ಪಂದಗಳು ಉಭಯ ದೇಶಗಳಿಗೂ ಲಾಭದಾಯಕವಾಗಿದ್ದು, ಪರಸ್ಪರ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಪೂರಕವಾಗಿವೆ ಎಂದು ಉಭಯ ನಾಯಕರೂ ಹೇಳಿದ್ದಾರೆ.
ಒಟ್ಟಿನಲ್ಲಿ ತಮ್ಮ ಭಾರತ ಪ್ರವಾಸವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಬೋರಿಸ್ ಜಾನ್ಸನ್, ಭಾರತ-ಇಂಗ್ಲೆಂಡ್ ನಡುವಿನ ರಾಜತಾಂತ್ರಿಕ, ಸಾಂಸ್ಕೃತಿ, ಸಾಮರಿಕ ಸಂಬಂಧ ತನ್ನ ಇತಿಹಾಸದಲ್ಲೇ ಗರಿಷ್ಠ ಮಟ್ಟವನ್ನು ಮುಟ್ಟಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಭಾರತ-ಬ್ರಿಟನ್ ಬಾಂಧವ್ಯ ಹಿಂದೆಂದೂ ಇಷ್ಟು ಉತ್ತಮವಾಗಿರಲಿಲ್ಲ…
ಇದಕ್ಕೂ ಮೊದಲು ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸ್ವಾಗತಿಸಿದರು. ಗುರುವಾರ ಗುಜರಾತ್‌ಗೆ ಆಗಮಿಸಿದ್ದ ಜಾನ್ಸನ್ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸ ಆರಂಭಿಸಿದ್ದರು. ಬಳಿಕ ಗೌತಮ್ ಅದಾನಿ ಅವರ ಜತೆಗಿನ ಮಾತುಕತೆ, ಜೆಸಿಬಿ ಘಟಕಕ್ಕೆ ಭೇಟಿ, ಟೆಕ್ ಸಮ್ಮೇಳನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ತಮ್ಮ ಭಾರತ ಭೇಟಿ ‘ಬಹಳ ಮಂಗಳಕರ ಗಳಿಗೆ’ ಎಂದು ಹೇಳಿರುವ ಜೋನ್ಸನ್‌ ಭಾರತ ಮತ್ತು ಬ್ರಿಟನ್ ಸಂಬಂಧ ಈಗ ಇರುವಷ್ಟು ಗಾಢವಾಗಿ ಹಿಂದೆ ಎಂದಿಗೂ ಇರಲಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಅದ್ಭುತ ಸ್ವಾಗತಕ್ಕಾಗಿ ಧನ್ಯವಾದಗಳು. ನಮ್ಮ (ಭಾರತ- ಯುನೈಟೆಡ್ ಕಿಂಗ್‌ಡಮ್) ಸಂಬಂಧ ಈಗ ಇರುವುದಕ್ಕಿಂತ ಪ್ರಬಲವಾಗಿ ಅಥವಾ ಉತ್ತಮವಾಗಿ ಈ ಹಿಂದೆ ಇತ್ತು ಎಂದು ನನಗೆ ಅನಿಸುವುದಿಲ್ಲ” ಎಂದು ಜಾನ್ಸನ್ ಹೇಳಿದ್ದಾರೆ.

ಇದೇವೇಳೆ ಹೊಸ ಫೈಟರ್ ಜೆಟ್ ತಂತ್ರಜ್ಞಾನ, ಹೆಲಿಕಾಪ್ಟರ್ ಮತ್ತು ಸಮುದ್ರ ತಳದಲ್ಲಿನ ಯುದ್ಧ ಪ್ರದೇಶಗಳಲ್ಲಿನ ಸಂಯೋಜನೆಗಳು ಸೇರಿದಂತೆ ಇಂಡೋ ಪೆಸಿಫಿಕ್ ಪ್ರದೇಶದಲ್ಲಿನ ಭದ್ರತೆಯನ್ನು ವೃದ್ಧಿಸಲು ಭಾರತದ ಜತೆ ಬ್ರಿಟನ್ ಕೆಲಸ ಮಾಡಲಿದೆ. ಶುದ್ಧ ಮತ್ತು ನವೀಕರಿಸಬಹುದಾದ ಇಂಧನಗಳಲ್ಲಿ ಹೊಸ ಸಹಕಾರದ ಬಗ್ಗೆ ಕೂಡ ಪ್ರಧಾನಿ ಚರ್ಚಿಸಲಿದ್ದಾರೆ ಎಂದು ಬ್ರಿಟಿಷ್ ಹೈ ಕಮಿಷನ್ ಹೇಳಿದೆ.
ಅಲ್ಲದೆ, ಭೂಮಿ, ಸಮುದ್ರ, ವಾಯು, ಬಾಹ್ಯಾಕಾಶ ಮತ್ತು ಸೈಬರ್- ಈ ಐದು ವಿಭಾಗಗಳಲ್ಲಿನ ಹೊಸ ಪೀಳಿಗೆಯ ರಕ್ಷಣೆ ಮತ್ತು ಭದ್ರತಾ ಸಂಯೋಜನೆ ಬಗ್ಗೆ ಜಾನ್ಸನ್ ಮತ್ತು ಮೋದಿ ಅವರು ಚರ್ಚೆ ನಡೆಸುವ ನಿರೀಕ್ಷೆ ಇದೆ. ಎರಡೂ ದೇಶಗಳು ಹೊಸ ಬೆದರಿಕೆಗಳನ್ನು ಎದುರಿಸುತ್ತಿರುವುದರಿಂದ ಈ ಚರ್ಚೆ ಮಹತ್ವದ್ದಾಗಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement