ನಾಯಕತ್ವ ಬದಲಾವಣೆ, ಹೊಸ ಮುಖಗಳಿಗೆ ಮನ್ನಣೆಯೇ ಬಿಜೆಪಿಯ ಶಕ್ತಿ, : ಬಿಜೆಪಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯ್ತು ಬಿ.ಎಲ್‌ ಸಂತೋಷ್ ಮಾತು

ಮೈಸೂರು: ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ. ಈ ಪ್ರಯೋಗ ಗುಜರಾತ್‍ನಲ್ಲೂ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಹಾಗೂ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ ಅವರು, ಬಿಜೆಪಿಗೆ ದೇಶಾದ್ಯಂತ ರಾಜಕೀಯ ಯಶಸ್ಸು ಸಿಗುತ್ತಿದೆ. 18 ರಾಜ್ಯಗಳಲ್ಲಿ‌ ಬಿಜೆಪಿ ಅಧಿಕಾರದಲ್ಲಿದೆ. ದೇಶದಲ್ಲಿ ಕನಸು ಕಾಣದಷ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿ ಬೆಳೆದಿದೆ. ಆದರೆ ಬಿಜೆಪಿಯಲ್ಲಿ ಶಾಸಕರು, ಕುಟುಂಬ ರಾಜಕಾರಣ ದೂರವಿಟ್ಟು ಚುನಾವಣೆ ನಡೆಸಲಾಗುತ್ತದೆ. ಹೊಸ ಮುಖಗಳನ್ನು ಕಣಕ್ಕಿಳಿಸುವುದೇ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದವರಿಗೆ ನಿವೃತ್ತಿಯಾಗುವಂತೆ ಹೇಳಿದ್ದೇವೆ. ಹೊಸ ಕಾರ್ಯಕರ್ತರನ್ನು ಕಣಕ್ಕಿಳಿಸಿ ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಹಾಗೂ ಇದು ಪಕ್ಷದ ಯಶಸಿಗೂ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

ಕಾಲ ಕಾಲಕ್ಕೆ ತಕ್ಕಂತೆ ಸಮಾಜದ ಬದಲಾವಣೆಗೆ ಸ್ಪಂದಿಸಿ ಪಕ್ಷವು ಪರಿಷ್ಕರಣೆಯಾಗದಿದ್ದಲ್ಲಿ ಅಂತಹ ಪಕ್ಷ ನಾಶವಾಗಲಿದೆ. ‘ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗುತ್ತದೆ. ಆದರೆ, ಕಾಂಗ್ರೆಸ್‌ ಹಾಗೆಯೇ ಇದ್ದು, ಕಾಂಗ್ರೆಸ್‌ನಲ್ಲಿ ಯುವನಾಯಕರು ಯಾರು ಎಂದರೆ ಸೋನಿಯಾಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎಂದು ಹೇಳುತ್ತಾರೆ. ಆದರೆ, ಬಿಜೆಪಿಯಲ್ಲಿ ಇಂತಹವುಗಳು ಕಡಿಮೆ. ಕಾರ್ಯಕರ್ತರೇ ನಾಯಕರಾಗುವ ಅವಕಾಶ ಇಲ್ಲಿದೆ. ಹಾಗಾಗಿಯೇ, ಬಿಜೆಪಿ ದೃಢವಾಗುತ್ತಿದೆ, ಕಾಂಗ್ರೆಸ್‌ ಅವಸಾನದ ಅಂಚನ್ನು ತಲುಪಿದೆ. ಇದರಿಂದಲೇ ಅನೇಕ ನಾಯಕರು ಬಿಜೆಪಿಯತ್ತ ಮುಖಮಾಡಿದ್ದಾರೆ ಎಂದು ಬಿ ಎಲ್ ಸಂತೋಷ್ ಹೇಳಿದ್ದಾರೆ.

10 ವರ್ಷಗಳ ಹಿಂದೆ ಚುನಾವಣಾ ಪ್ರಚಾರ ಮಾಡುತ್ತಿದ್ದಂತೆಯೇ ಈಗಲೂ ಮಾಡಿದರೆ, ಹಿಂದೆ ನಡೆಸಿದಂತೆ ಈಗಲೂ ಅಧಿಕಾರ ನಡೆಸಿದರೆ ಯಾವುದೇ ಪಕ್ಷವಾದರೂ ಗೆಲ್ಲುವುದು ಕಷ್ಟ. ಕಾಂಗ್ರೆಸ್‌ನಲ್ಲಿ 32 ವರ್ಷಗಳಲ್ಲಿ ಇಬ್ಬರು ವ್ಯಕ್ತಿಗಳಷ್ಟೇ ಅಧ್ಯಕ್ಷ ಸ್ಥಾನದಲ್ಲಿದ್ದರು. ಆದರೆ, ಬಿಜೆಪಿಯಲ್ಲಿ ಎಷ್ಟೋ ಮಂದಿ ಅಧ್ಯಕ್ಷರಾದರು. ಕಾಂಗ್ರೆಸ್ ರೀತಿ ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶ ಇಲ್ಲ. ರಾಜಕಾರಣದಲ್ಲಿ ಉಳಿಯಬೇಕಾದರೆ ಅಧಿಕಾರ ಹಂಚಿಕೆಯಾಗಬೇಕು. ಹಾಗೂ ಅಧಿಕಾರ ಕೈಗಳಿಂದ ಕೈಗಳಿಗೆ ಹಸ್ತಾಂತರವಾಗಬೇಕು ಎಂದು ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ 11 ಸ್ಥಾನದಲ್ಲಿ ಬಿಜೆಪಿ ಕನಿಷ್ಠ 8 ಸ್ಥಾನವಾದರೂ ಗೆಲ್ಲಬೇಕು. ಇಂತಹವರಿಗೆ ಟಿಕೆಟ್‌ ಕೊಡಿ ಎಂದು ಹೇಳುತ್ತ ಅವರ ಹಿಂದೆಯೇ ಓಡಾಡಬೇಡಿ. ಯಾರಿಗೇ ಟಿಕೆಟ್‌ ಲಭಿಸಿದರೂ ಅವರ ಪರವಾಗಿ ಕೆಲಸ ಮಾಡಿ. ಮುಂದೊಂದು ದಿನ ನೀವೂ ನಾಯಕರಾಗುತ್ತೀರಿ. ಯಾಕೆಂದರೆ ಬಿಜೆಪಿ ಕಾರ್ಯಕರ್ತರ ಪಕ್ಷ, ಅವರನ್ನು ಬೆಳೆಸುತ್ತದೆ ಎಂದು ಹೇಳಿದರು.
ಬಿಜೆಪಿ ಪ್ರಮುಖರ ಸಭೆಯಲ್ಲಿ ಸಂತೋಷ ಅವರು ಮಾರ್ಮಿಕವಾಗಿ ಮಾತನಾಡಿರುವುದು ಬಿಜೆಪಿ ಸಚಿವ ಸಂಪುಟದಲ್ಲಿ ಬದಲಾವಣೆ ವಿಷಯದ ಚರ್ಚೆಗೆ ಮತ್ತಷ್ಟು ಗ್ರಾಸ ಒದಗಿಸಿದೆ. ರಾಜ್ಯದಲ್ಲಿಯೂ ನಾಯಕತ್ವ ಸೇರಿದಂತೆ ಯಾವರೀತಿ ಬದಲಾವಣೆ ಆಗಲಿದೆ ಎಂಬ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ. ಅವರ ಹೇಳಿಕೆ ನಂತರ ಈಗ ಬಿಜೆಪಿ ಹೈಕಮಾಂಡ್​ ನಡೆ ಕುತೂಹಲಕ್ಕೆ ಕಾರಣವಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement