ಮೇ 2ರಿಂದ ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ; 25 ಕಾರ್ಯಕ್ರಮ, 8 ವಿಶ್ವ ನಾಯಕರ ಜೊತೆ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಈ ವರ್ಷದ ಮೊದಲ ವಿದೇಶಿ ಪ್ರವಾಸ ಸೋಮವಾರದಿಂದ (ಮೇ 2) ಆರಂಭಗೊಳ್ಳಲಿದ್ದು, 65 ತಾಸುಗಳ ಈ ಪ್ರವಾಸದಲ್ಲಿ ಮೂರು ದೇಶಗಳಿಗೆ ಭೇಟಿ ನೀಡಲಿದ್ದಾರೆ ಹಾಗೂ 25 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿದೇಶಿ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಈ ಪ್ರವಾಸವನ್ನೂ ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಒಂದು ನಿಮಿಷ ಕೂಡ ಪೋಲಾಗದಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.

ಏಳು ದೇಶಗಳ ಎಂಟು ಗಣ್ಯರ ಜತೆಗೂಡಿ ಜಗತ್ತಿನ ಶ್ರೇಷ್ಠ 50 ಉದ್ಯಮಿಗಳ ಜತೆಗೆ ಅವರು ಸಮಾಲೋಚನೆ ನಡೆಸಲಿದ್ದಾರೆ. ಭಾರತೀಯ ಸಮುದಾಯದ ಸಾವಿರಾರು ಗಣ್ಯರ ಜತೆಗೂ ಸಮಾಲೋಚನೆ ನಡೆಸಲಿದ್ದಾರೆ.
ಉಕ್ರೇನ್‌ ವಿರುದ್ಧ ರಷ್ಯಾ ಆಕ್ರಮಣ ನಡೆಸಿರುವ ಈ ಬಿಗುವಿನ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ, ಯೂರೋಪ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವುದು ಮಹತ್ವ ಪಡೆದಿದೆ. ಮೇ 2ರಿಂದ ಮೇ 4ರವರೆಗೆ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ ಪ್ರವಾಸ ಮಾಡಲಿದ್ದಾರೆ. ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ತಲಾ ಒಂದು ರಾತ್ರಿ ಕಳೆಯುವ ಪ್ರಧಾನಿ, ಎರಡು ರಾತ್ರಿಗಳನ್ನು ವಿಮಾನದಲ್ಲಿ ಕಳೆಯಲಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌, ಜರ್ಮನಿ ಚಾನ್ಸಲರ್‌ ಓಲಾಫ್‌ ಸ್ಕೋಲ್ಜ್ ಸೇರಿದಂತೆ ಹಲವು ಗಣ್ಯರ ಜತೆಗೆ ಪ್ರಧಾನಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಜರ್ಮನಿಯಲ್ಲಿ ಪ್ರಧಾನಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದು ಜನರ ಜತೆಗೆ ಸಂವಾದ ನಡೆಸಲಿದ್ದಾರೆ. 2021ರಲ್ಲಿ ಭಾರತ ಮತ್ತು ಜರ್ಮನಿ ತಮ್ಮ ರಾಜತಾಂತ್ರಿಕ ಸಂಬಂಧ ಸೃಷ್ಟಿಯ 70 ವರ್ಷದ ಸಂಭ್ರಮ ಆಚರಿಸಿದ್ದವು. 2000ದಿಂದಲೂ ಉಭಯ ದೇಶಗಳು ಕಾರ್ಯತಂತ್ರ ಪಾಲುದಾರಿಕೆ ಹೊಂದಿವೆ.
ಪ್ರಧಾನಿ ಮೋದಿ ಅವರು ನಂತರ ಡೆನ್ಮಾರ್ಕ್ ಪ್ರಧಾನಿ ಮೆಟ್ ಫ್ರೆಡರಿಕ್‌ಸೆನ್ ಆಹ್ವಾನದ ಮೇರೆಗೆ ಕೋಪನ್‌ಹೇಗನ್‌ಗೆ ತೆರಳಲಿದ್ದು, ಡೆನ್ಮಾರ್ಕ್ ಆತಿಥ್ಯದಲ್ಲಿ ಎರಡನೇ ಭಾರತ- ನೋರ್ಡಿಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ಫ್ರೆಡರಿಕ್‌ಸೆನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ರಾಣಿ ಮಾರ್ಗರೆಟ್ II ಜತೆ ಕೂಡ ಸಭೆ ಏರ್ಪಾಟಾಗಿದೆ. ಭಾರತ ಮತ್ತು ಡೆನ್ಮಾರ್ಕ್ ನಡುವೆ ಮೊದಲೊ ಬಾರಿಗೆ ‘ಹಸಿರು ಕಾರ್ಯತಂತ್ರ ಪಾಲುದಾರಿಕೆ’ ಬಗ್ಗೆ ಮಾತುಕತೆ ನಡೆಯಲಿದೆ. ಈ ವೇಳೆ ಇತರ ನಾರ್ಡಿಕ್ ನಾಯಕರಾದ ಐಸ್‌ಲ್ಯಾಂಡ್ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್‌ಡಾಟಿರ್, ನಾರ್ವೆ ಪ್ರಧಾನಿ ಜೊನಾಸ್ ಗಹ್ರ್ ಸ್ಟೋರ್, ಸ್ವೀಡನ್ ಮಗ್ದಲೆನಾ ಆಂಡರ್‌ಸನ್ ಮತ್ತು ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಜತೆ ಕೂಡ ಸಂವಾದ ನಡೆಸಲಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ- ಡೆನ್ಮಾರ್ಕ್ ಉದ್ಯಮ ವೇದಿಕೆಯಲ್ಲಿ ಭಾಗವಹಿಸಲಿದ್ದು, ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement