ಹಿಂದೂಸ್ಥಾನೀ ಸಂಗೀತದ ಮೇರು ಗಾಯಕ, ದುರ್ಲಭ ರಾಗಗಳ ನಿಧಿ ಡಾ. ರಾಜಶೇಖರ ಮನ್ಸೂರ ಇನ್ನಿಲ್ಲ

ಧಾರವಾಡ: ಹಿಂದುಸ್ಥಾನಿ ಸಂಗೀತದ ಮೇರು ಗಾಯಕ, ಅಪ್ರಚಲಿತ ರಾಗಗಳನ್ನು ಪ್ರಸ್ತುತಪಡಿಸುವ ದೇಶದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರಾಗಿದ್ದ ಡಾ. ರಾಜಶೇಖರ ಮನ್ಸೂರ ಅವರು ಇಂದು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಡಾ. ರಾಜಶೇಖರ ಮನ್ಸೂರ ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ತಂದೆ ದಿವಂಗತ ಡಾ.ಮಲ್ಲಿಕಾರ್ಜುನ ಮನ್ಸೂರ ಅವರಂತೆಯೇ ಹಿಂದೂಸ್ಥಾನೀ ಸಂಗೀತದ ಜೈಪುರ-ಅತ್ರೌಲಿ ಘರಾಣೆಯ ಅಗ್ರ ಗಾಯಕರಾಗಿದ್ದ ರಾಜಶೇಖರ ಮನ್ಸೂರ ಅವರು ದುರ್ಲಭ ಹಾಗೂ ವಿರಳಾತಿ ವಿರಳ ರಾಗಗಳನ್ನು ಪ್ರಸ್ತುತಪಡಿಸುವಲ್ಲಿ ಸಿದ್ಧ ಹಸ್ತರಾಗಿದ್ದರು. ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅವರು ತಂದೆಯ ಗರಡಿಯಲ್ಲೇ ಸಂಗೀತವನ್ನು ಗುರು-ಶಿಷ್ಯ ಪರಂಪರೆಯಲ್ಲಿ ಅಭ್ಯಾಸ ಮಾಡಿದವರು. ತಂದೆ ಮಲ್ಲಿಕಾರ್ಜುನ ಮನ್ಸೂರ ಅವರಂತೆಯೇ ದೇಶದ ಅಗ್ರಪಂಕ್ತಿ ಶ್ರೇಷ್ಠ ಗಾಯಕರಲ್ಲಿ ಒಬ್ಬರು ಎಂದೆನಿಸಿಕೊಂಡವರು.

16 ಡಿಸೆಂಬರ್ 1942 ರಲ್ಲಿ ಜನಿಸಿದ ರಾಜಶೇಖರ ಮನನ್ಸೂರ ಅವರು ಜೈಪುರ-ಅತ್ರೌಲಿ ಘರಾನಾದ ಮೇರು ಗಾಯಕ ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರ ಮಗ ಹಾಗೂ ಶಿಷ್ಯ. ಅವರು ತಮ್ಮ 18ನೇ ವಯಸ್ಸಿನಲ್ಲಿ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಚಿನ್ನದ ಪದಕ ಹಾಗೂ AIR ಯುವ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ವೇಲ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದರು

ನನ್ನ ಗುರು ಡಾ. ರಾಜಶೇಖರ ಮನ್ಸೂರ ಅವರು ಯಾವತ್ತಿಗೂ ಜನಪ್ರಿಯತೆ ಹಿಂದೆ ಬಿದ್ದವರಲ್ಲ, ಜನಪ್ರಿಯತೆಗಾಗಿ ಕೆಲವೇ ರಾಗಗಳಿಗೆ ಸೀಮಿತವಾಗಬಾರದು ಎಂದು ನಮಗೂ ಹೇಳುತ್ತಿದ್ದರು, ಜನರಿಗೆ ಅರ್ಥವಾಗುವುದಿಲ್ಲವೆಂದು ಅಪ್ರಚಲಿತ ರಾಗಗಳನ್ನು ಕಛೇರಿಗಳಲ್ಲಿ ಹಾಡುವುದನ್ನು ಬಿಡಬೇಡಿ ಎಂದೇ ಹೇಳುತ್ತಿದ್ದರು. ಯಾವತ್ತಿಗೂ ಸಂಗೀತ ಉಳಿಯಬೇಕಾದರೆ ಅದರ ಪ್ಯುರಿಟಿ (ಶುದ್ಧತೆ) ಉಳಿಯಬೇಕು, ರಾಗವನ್ನು ಶುದ್ಧಭಾವದಲ್ಲಿಯೇ ಹಾಡಬೇಕು. ಜನಪ್ರಿಯತೆಯ ಹಿಂದೆ ಬೀಳಬೇಡಿ

– ಡಾ.ಚಂದ್ರಿಕಾ ಕಾಮತ್‌ ಹುಬ್ಬಳ್ಳಿ (ಡಾ. ರಾಜಶೇಖರ ಮನ್ಸೂರ ಶಿಷ್ಯೆ)

ರಾಜಶೇಖರ್ ಮನ್ಸೂರ್ ಅವರು 20ನೇ ವಯಸ್ಸಿನಲ್ಲಿ ತಮ್ಮ ತಂದೆಯೊಂದಿಗೆ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು, ಆದರೆ ಅವರ ತಂದೆ ಪೂರ್ಣ ಸಮಯದ ಸಂಗೀತಗಾರನಾಗುವ ಬದಲು ನಿಯಮಿತ ಉದ್ಯೋಗವನ್ನು ಕಂಡುಕೊಂಡು ಸಂಗೀತಗಾರನಾಗು ಎಂದು ಒತ್ತಾಯಿಸಿದ್ದರಿಂದ ರಾಜಶೇಖರ ಅವರು ಸುಮಾರು 35 ವರ್ಷಗಳ ಕಾಲ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸಾಹಿತ್ಯ ಮತ್ತು ಭಾಷಾಶಾಸ್ತ್ರವನ್ನು ಕಲಿಸಿದರು. ನಂತರ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಕೆಲಕಾಲ ಕಲ್ಬುರ್ಗಿ ಪಿ.ಜಿ.ಸೆಂಟರ್‌ನಲ್ಲಿ ಇಂಗ್ಲಿಷ್ ಕಲಿಸಿದರು. ಅದೇ ಸಮಯದಲ್ಲಿ, ಅವರು ಗಾಯನವನ್ನೂ ಮುಂದುವರೆಸಿದರು, ಆಲ್ ಇಂಡಿಯಾ ರೇಡಿಯೊಗೆ ಸ್ವತಂತ್ರವಾಗಿ ಪ್ರದರ್ಶನ ನೀಡಿದರು.
ಗ್ವಾಲಿಯರ್‌ ತಾನಸೇನ್‌ ಉತ್ಸವ ಸೇರಿದಂತೆ, ದೆಹಲಿ, ಮುಂಬೈ, ಕೋಲ್ಕತ್ತಾ, ಜೈಪುರ, ಚೆನ್ನೈ, ಹೈದರಾಬಾದ್‌, ಲಕ್ನೋ, ಪುಣೆ ಸವಾಯಿ ಗಂಧರ್ವ ಉತ್ಸವ ಸೇರಿದಂತೆ ಹೀಗೆ ದೇಶದ ನಾನಾ ಭಾಗಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

ವಿಶೇಷವಾಗಿ ಅವರು ಗುರುತಿಸಲ್ಪಡುವುದು ದುರ್ಲಭ ಹಾಗೂ ಕ್ಲಿಷ್‌ ರಾಗಗಳ ಬಗ್ಗೆ ಅವರು ನಡೆಸುತ್ತಿದ್ದ ಕಾರ್ಯಾಗಾರಗಳಿಂದಾಗಿ. ಸಂಗೀತ ಕಛೇರಿಗಳಿಂದ ದೂರವಾಗಿರುವ ದುರ್ಲಭ ರಾಗಗಳನ್ನು ಪ್ರಚಲಿತಗೊಳಿಸಲು ಕಾರ್ಯಾಗಾರಗಳನ್ನು ದೇಶಾದ್ಯಂತ ನಡೆಸಿದ್ದಾರೆ. ಜೈಪುರ ಅತ್ರೌಲಿ ಘರಾಣೆಯ ಉಪಜ್‌ ಅಂಗದ ಪುರಾತನ ಗಾಯನ ಶೈಲಿಯನ್ನು ಅನುಕರಿಸುತ್ತಿದ್ದ ಅವರು, ಸಂಗೀತದ ಬಗ್ಗೆ ವಿದ್ಯಾರ್ಥಿಗಳ ಜೊತೆ ಅನೇಕ ಅನುಸಂಧಾನಗಳನ್ನು ನಡೆಸಿದ್ದಾರೆ.ಧಾರವಾಡ ಅವರ ಕರ್ಮ ಸ್ಥಾನವಾದರೂ ಇತ್ತೀಚಿನ ಕೆಲ ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.
ಗಾಯನ ಕಛೇರಿಗಳಿಂದ ಇತ್ತೀಚಿಗೆ ದೂರವಾದ ರಾಗಗಳನ್ನು ಅವರ ಗಾಯನ ಕಛೇರಿಗಳಲ್ಲಿ ಕೇಳಬಹುದಾಗಿತ್ತು. ಜೋಡ್‌ ರಾಗಗಳನ್ನು ಹಾಡುವುದಲ್ಲಿ ಸಿದ್ಧ ಹಸ್ತರಾಗಿದ್ದ ಅವರು ಅಪರೂಪದ ಹಾಗೂ ಕ್ಲಿಷ್ಟ ರಾಗಗಳನ್ನೂ ಅತ್ಯಂತ ಸುಲಲಿತವಾಗಿ ಹಾಡುತ್ತಿದ್ದರು. ಯಾವುದೇ ರಾಗಗಳಾದರೂ ಈಗ ದುರ್ಲಭ ಅಥವಾ ಅಪರೂಪ ಎಂದೆನಿಸಿಕೊಳ್ಳಲು ಗಾಯಕರು ಅದನ್ನು ಪ್ರಸ್ತುತ ಪಡಿಸದಿರುವುದೇ ಕಾರಣ ಎಂದು ಹೇಳುತ್ತಿದ್ದ ಅವರು ಅದನ್ನು ಶ್ರೋತೃಗಳಿಗೆ ಪರಿಚಯಿಸುವ ಹೊಣೆಗಾರಿಕೆ ಸಹ ಶಾಸ್ತ್ರೀಯ ಸಂಗೀತಗಾರರಾದ ನಮ್ಮ ಮೇಲೆಯೇ ಇದೆ ಎಂದು ಹೇಳುತ್ತಿದ್ದರು.

ಅತ್ಯಂತ ದುರ್ಲಭವಾದ ರಾಗಗಳಾದ ಬರಾರಿ, ಖಟ್‌, ನಟ ಬಿಹಾಗ್‌, ಗೋಧಾನ್‌ ಗೌರಿ, ಲಚ್ಚಾ ಸಖ್‌, ರಾಮ್‌ಸಖ್‌, ದೇವ್‌ ಸಖ್‌, ಕಬೀರಿ ಭೈರವ್‌, ಬಿಹಾಗ್ಡಾ, ಡಾಗೋರಿ, ಬಿಹಾರಿ, ಗರಾ ಬಾಗೇಶ್ರೀ, ಮೀರಾಬಾಯಿ ಕೀ ಮಲ್ಹಾರ, ರಾಮದಾಸಿ ಮಲ್ಹಾರ್‌, ಮಾಲವಿ, ನಾಯಕಿ ಕಾನಡಾ, ಶಿವಮತ್‌ ಭೈರವ್‌, ಬಿಲಾವಲಿ, ರಾಗ ಖೋಕರ್‌, ಸರಪದ ಬಿಲಾವಲ್‌, ಲಾಚಾರಿ ತೋಡಿ,  ಸುಗ್ರಾಯ್‌,  ಗೋಂಡಗಿರಿ ಮಲ್ಹಾರ, ಸಂಪೂರ್ಣ ಬಿಭಾಸ್‌,  ಎಕ್‌ ನಿಶಾದ್‌ ಬಿಹಾಗ್ದಾ, ಯಮನಿ ನಿಲಾವಲ್‌, ಜೈತ್‌ ಕಲ್ಯಾಣ, ಸಾವನಿ ಕಲ್ಯಾಣ, ಪರಜ, ಖಟ್‌ ತೋಡಿ, ಬಹಾದ್ದೂರ್‌ ತೋಡಿ, ಬಂಕಾರ ಹೀಗೆ ಕ್ಲಿಷ್ಟ ಹಾಗೂ ಅಪರೂಪದ ರಾಗಗಳನ್ನು ಸುಲಲಿತವಾಗಿ ಅವರು ಪ್ರಸ್ತುತಪಡಿಸುತ್ತಿದ್ದರು.

ಅವರು ನಮಗೆ ಕಲಿಸುತ್ತಿದ್ದಾಗ ಕಲಿಸುತ್ತಿದ್ದರು ಎಂದು ಅನ್ನಿಸುತ್ತಿರಲಿಲ್ಲ, ನಮಗೆ ಕಛೇರಿಯಲ್ಲಿ ಹಾಡುತ್ತಿದ್ದ ಅನುಭವವೇ ಆಗುತ್ತಿತ್ತು. ಅವರು ಗಾಯನದಲ್ಲಿ ತನ್ಮಯರಾಗಿ ಬಿಡುತ್ತಿದ್ದರು. ಅವರ ಗಾಯನ ನಾವು ಅನುಕುರಿಸುಬೇಕಿತ್ತು. ನಮಗೆ ಅವರಿಗೆ ಗೊತ್ತಿರುವ ಎಲ್ಲ ಅಪ್ರಚಲಿತ ರಾಗಗಳನ್ನೂ ಕಲಿಸಿದ್ದಾರೆ. ಆದರೆ ನಾವು ಅದಕ್ಕೆ ಅರ್ಹರೇ ಎಂದು ನಮಗೆ ಅನ್ನಿಸಿದ್ದುಂಟು. ಆ ಬಗ್ಗೆ ಅವರಲ್ಲಿ ನಾವು ಕೇಳಿಯೂ ಕೇಳಿದ್ದೆವು. ಆದರೆ ಅವರು ಈ ರಾಗಗಳನ್ನು ನನಗೆ ನನ್ನ ತಂದೆ ಹಾಗೂ ಗುರು ಮಲ್ಲಿಕಾರ್ಜುನ ಮನ್ಸೂರ ನೀಡಿದ್ದಾರೆ. ನಾನು ಅದನ್ನು ಮುಂದಿನವರಿಗೆ ಹಸ್ತಾಂತರಿಸಲೇಬೇಕು. ಅದನ್ನು ನೀವೂ ನಿಮ್ಮ ಮುಂದಿನವರಿಗೆ ಪಾಸ್‌ ಮಾಡಬೇಕು ಎಂದು ಹೇಳುತ್ತಿದ್ದರು. ಅವರಂಥ ಗುರುಗಳು ಸಿಗಲು ಸಾಧ್ಯವೇ ಇಲ್ಲ, ಅಷ್ಟೊಂದು ಪಾಂಡಿತ್ಯವಿದ್ದರೂ ಅವರಿಗೆ ಯಾವುದೇ ಅಪೇಕ್ಷೆಯೇ ಇರಲಿಲ್ಲ. ಬಹುಶಃ ಅವರ ಸಜ್ಜನಿಕೆ ಯಾವಾಗಲೂ ನಮಗೆ ನೆನಪಾಗುತ್ತಲೇ ಇರುತ್ತದೆ ಎಂದು ಅವರ ಶಿಷ್ಯೆ ಹುಬ್ಬಳ್ಳಿಯ ಡಾ. ಚಂದ್ರಿಕಾ ಕಾಮತ್‌ ನೆನಪಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು : ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು

ಪ್ರಶಸ್ತಿ-ಪುರಸ್ಕಾರಗಳು….
ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಅವರು ಉನ್ನತ ದರ್ಜೆ ಶ್ರೇಣಿಯ (ಎ+) ಗಾಯಕರಾಗಿದ್ದರು. ಕರ್ನಾಟಕ ಸರ್ಕಾರವು ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಸಂಗೀತಕ್ಕೆ ಅವರ ಕೊಡುಗೆಗಳನ್ನು ಗುರುತಿಸಿದೆ (1997). ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡು (2005-2008) ಕಾರ್ಯನಿರ್ವಹಿಸಿದರು. ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ (2009) ಗೆ ಭಾಜನರಾಗಿದ್ದಾರೆ. ರಾಜಶೇಖರ ಮನ್ಸೂರ ಅವರ ಸಂಗೀತವನ್ನು ಭೋಪಾಲ್‌ನ ಇಂದಿರಾ ಗಾಂಧಿ ಮಾನವ ಸಂಗ್ರಹಾಲಯದ ಆರ್ಕೈವ್‌ನಲ್ಲಿ ಸಂರಕ್ಷಿಸಲಾಗಿದೆ. 7 ಸೆಪ್ಟೆಂಬರ್ 2009 ರಂದು, ಅವರು ತಮ್ಮ ಸಂಗೀತ ಆಲ್ಬಂ ಇನ್ ದಿ ಫೂಟ್‌ಸ್ಟೆಪ್ಸ್ ಮತ್ತು ಬಿಯಾಂಡ್ ಅನ್ನು ತಮ್ಮ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಅವರ ತಂದೆ ಆತ್ಮಚರಿತೆ ನನ್ನ ರಸ ಯಾತ್ರೆಯನ್ನು ಇಂಗ್ಲಿಷಿಗೆ ಅನುವಾದಿಸಿದ್ದರು.
ಭಾರತದ ಸಂಗೀತ, ನೃತ್ಯ ರಾಷ್ಟ್ರೀಯ ಅಕಾಡೆಮಿಯಿಂದ 2012 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು, ಇದು ಪ್ರದರ್ಶಕ ಕಲಾವಿದರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ, ಅವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ಸಣ್ಣ ಭರಮಣ್ಣ ಸ್ಮಾರಕ ರಾಷ್ಟ್ರೀಯ ಪುರಸ್ಕಾರವನ್ನು ಚೆನ್ನೈನ ತಾನ್ಸೆನ್ ಅಕಾಡೆಮಿ ಆಫ್ ಮ್ಯೂಸಿಕ್ ನೀಡಿ ಗೌರವಿಸಿದೆ.
ಈಗ ಅವರ ನಿಧನದಿಂದ ಅತ್ಯಂತ ಮೇರು ಗಾಯಕರೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement