ಬಿಜೆಪಿ ನಾಯಕ ಬಗ್ಗಾ ಬಂಧನಕ್ಕೆ ಸಿನಿಮೀಯ ತಿರುವು: ದೆಹಲಿಯಲ್ಲಿ ಪಂಜಾಬ್‌ ಪೊಲೀಸರಿಂದ ಬಂಧನ, ಹರ್ಯಾಣದಲ್ಲಿ ಪಂಜಾಬ್‌ ಪೊಲೀಸರಿಗೆ ತಡೆ. ಮತ್ತೆ ದೆಹಲಿಗೆ ವಾಪಸ್‌…!

ನವದೆಹಲಿ: ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಅವರ ನಿವಾಸದಲ್ಲಿಯೇ ಪಂಜಾಬ್‌ ಪೊಲೀಸರು ಬಂಧಿಸಿದ ನಂತರ ಪ್ರಕರಣವು ಸಿನಿಮೀಯ ರೀತಿಯಲ್ಲಿ ತಿರುವು ಪಡೆದುಕೊಂಡಿದೆ.
ದೆಹಲಿಯಲ್ಲಿನ ಬಗ್ಗಾ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಅವರನ್ನು ಬಂಧಿಸಿ ಕರೆದೊಯ್ದಿದ್ದ ಪಂಜಾಬ್ ಪೊಲೀಸರನ್ನು ತಡೆದ ಹರ್ಯಾಣ ಪೊಲೀಸರು, ಬಗ್ಗಾ ಅವರನ್ನು ಬಿಡಿಸಿಕೊಂಡು ಮರಳಿ ದೆಹಲಿಗೆ ಕಳುಹಿಸಿದ್ದಾರೆ.
ದೆಹಲಿಯಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಹರ್ಯಾಣದ ಮೂಲಕ ರಸ್ತೆ ಮಾರ್ಗವಾಗಿ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಕುರುಕ್ಷೇತ್ರ ಸಮೀಪ ಪಂಜಾಬ್ ಪೊಲೀಸರ ವಾಹನವನ್ನು ತಡೆದ ಹರ್ಯಾಣ ಪೊಲೀಸರು, ಬಗ್ಗಾ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ತಮ್ಮದೇ ಬೆಂಗಾವಲಿನಲ್ಲಿ ಅವರನ್ನು ಕರೆದೊಯ್ದಿದ್ದಾರೆ. ದೆಹಲಿ ಪೊಲೀಸರ ತಂಡವೊಂದು ಅಲ್ಲಿಗೆ ತೆರಳಿದ್ದು, ಬಗ್ಗಾ ಅವರನ್ನು ಮರಳಿ ರಾಜಧಾನಿಗೆ ಕರೆದುಕೊಂಡು ಹೋಗಿದ್ದಾರೆ.

ಹೀಗಾಗಲು ಕಾರಣವೇನು…?
ಬಗ್ಗಾ ಅವರನ್ನು ಬಲವಂತವಾಗಿ ಮನೆಯಿಂದ ಎಳೆದುಕೊಂಡು ಹೋದ ನಂತರ ಅವರ ತಂದೆ ದೆಹಲಿ ಪೊಲೀಸರಿಗೆ ಅಪಹರಣದ ದೂರು ನೀಡಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಪಂಜಾಬ್ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೆ, ಬಗ್ಗಾ ಅವರನ್ನು ಬಂಧಿಸಲು ಬಂದಿದ್ದ ಪಂಜಾಬ್ ಪೊಲೀಸರು ತಮ್ಮ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದರು ಎಂದು ಅವರ ತಂದೆ ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಪ್ರಕರಣದ ಅನ್ವಯ ಹರ್ಯಾಣದ ಕುರುಕ್ಷೇತ್ರ ಪೊಲೀಸರು ತಜಿಂದರ್ ಬಗ್ಗಾ ಅವರನ್ನು ಕರೆದೊಯ್ಯುತ್ತಿದ್ದ ಪಂಜಾಬ್ ಪೊಲೀಸರ ವಾಹನವನ್ನು ತಡೆದಿದ್ದಾರೆ.

ಇದು ಅಪರಹಣ ಪ್ರಕರಣವಲ್ಲ. ಅನಗತ್ಯವಾಗಿ ತಮ್ಮನ್ನು ತಡೆಯಲಾಗುತ್ತಿದೆ ಎಂದು ಪಂಜಾಬ್ ಪೊಲೀಸರು ಹರ್ಯಾಣ ಪೊಲೀಸರಿಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದರು. ಅದರ ಜತೆಗೆ ಅವರು ತಜಿಂದರ್ ವಿರುದ್ಧ ದಾಖಲಾದ ಎಫ್‌ಐಆರ್ ಪ್ರತಿಯನ್ನು ಕೂಡ ರವಾನಿಸಿದ್ದರು.
ಈ ಘಟನೆ ಎಎಪಿ ಮತ್ತು ಬಿಜೆಪಿ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ದೆಹಲ್ಲಿಯಲ್ಲಿ ಎಎಪಿ ಸರ್ಕಾರವಿದ್ದರೂ, ಪೊಲೀಸ್ ವ್ಯವಸ್ಥೆ ಕೇಂದ್ರದಲ್ಲಿನ ಬಿಜೆಪಿ ಕೈಯಲ್ಲಿದೆ. ಪಂಜಾಬ್‌ನಲ್ಲಿ ಎಎಪಿ ನೇತೃತ್ವದ ಸರ್ಕಾರವಿದ್ದು, ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ.

ತಜಿಂದರ್ ಬಂಧನದ ಬಗ್ಗೆ ತಮಗೆ ಪೂರ್ವ ಮಾಹಿತಿ ನೀಡಿರಲಿಲ್ಲ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಆದರೆ ಮೊದಲೇ ಮಾಹತಿ ನೀಡಲಾಗಿತ್ತು ಮತ್ತು ಒಂದು ತಂಡ ಗುರುವಾರ ಸಂಜೆಯೇ ಜನಕಪುರಿ ಪೊಲೀಸ್ ಠಾಣೆಗೆ ತೆರಳಿತ್ತು ಎಂದು ಪಂಜಾಬ್ ಪೊಲೀಸರು ಪ್ರತಿಪಾದನೆ ಮಾಡಿದ್ದಾರೆ.
‘ಕಾಶ್ಮೀರ್ ಫೈಲ್ಸ್’ ಚಿತ್ರದ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರುದ್ಧ ಬಗ್ಗಾ ಅವರು ಮಾಡಿದ್ದ ಟ್ವೀಟ್ ಕುರಿತು ಪಂಜಾಬ್‌ನ ಶಹೀಬ್ಜಾದಾ ಅಜಿತ್ ಸಿಂಗ್ ನಗರದಲ್ಲಿ ಬಗ್ಗಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ, ಧಾರ್ಮಿಕ ವೈರತ್ವ ಪ್ರಚಾರ ಮತ್ತು ಅಪರಾಧ ಬೆದರಿಕೆ ಆರೋಪಗಳನ್ನು ಹೊರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಗ್ಗಾ ಅವರನ್ನು ಬಂಧಿಸಲು ಪಂಜಾಬ್‌ ಪೊಲೀಸರು ಆಗಮಿಸಿದ್ದರು. ಪಂಜಾಬ್‌ ಪೊಲೀಸರು ಬಲವಂತಾಗಿ ಬಗ್ಗಾ ಅವರನ್ನು ಎಳೆದೊಯಿದ್ದಾರೆ ಹಾಗೂ ಬಗ್ಗಾ ಅವರಿಗೆ ಟರ್ಬನ್‌ ಹಾಕಿಕೊಳ್ಳಲು ಸಹ ಅವಕಾಶ ನೀಡಿಲ್ಲ ಎಂದು ಬಗ್ಗಾ ತಂದೆ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement