ಕಾನೂನು ತಿದ್ದುಪಡಿಯಾದರೂ ಅರಣ್ಯ ಅತಿಕ್ರಮಣ ಮಂಜೂರಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳ್ತಾರೆ, ಇದು ಅಗತ್ಯವೇ: ಸರ್ಕಾರಕ್ಕೆ ರವೀಂದ್ರ ನಾಯ್ಕ ಪ್ರಶ್ನೆ

ಹೊನ್ನಾವರ: ಅರಣ್ಯ ಅತಿಕ್ರಮಣ ಮಂಜೂರಾತಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳುತ್ತಾರೆ. ಕಾನೂನು ತಿದ್ದುಪಡಿಯಾಗಿದೆ. ಆದರೂ ಮೂರು ತಲೆಮಾರಿನ ಹಿಂದಿನ ಕಾಗದಪತ್ರಗಳ ಅಗತ್ಯವಿದೆಯೇ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರನಾಥ ನಾಯ್ಕ ಗುಡುಗಿದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಶನಿವಾರ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ವತಿಯಿಂದ ನಡೆದ ಅರಣ್ಯ ವಾಸಿಗಳನ್ನು ಉಳಿಸಿ ಬೃಹತ್ ಜಾಥಾ ನಡೆಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯ ವಾಸಿಗಳಿಗೆ ಯಾವುದೇ ನಿರ್ದಿಷ್ಟ ಕಾಗದಪತ್ರಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂದು ಕಾನೂನು ಹೇಳುತ್ತದೆ. ಆದರೆ ಅಧಿಕಾರಿಗಳು ವಿರುದ್ಧವಾಗಿ ವರ್ತಿಸುತ್ತಾರೆ. ಕಾಗದ ಪತ್ರಗಳ ಮೇಲೆ ಕಾಗದ ಪತ್ರಗಳನ್ನು ಕೇಳುತ್ತಾರೆ. ಹಾಗಾದರೆ ಕಾನೂನು ತಿದ್ದುಪಡಿಯಾಗಿರುವ ಪ್ರಜ್ಞೆ ಅಧಿಕಾರಿಗಳಿಗೆ ಸಚಿವರಿಗೆ ಇಲ್ಲವಾಗಿದೆಯೇ ಎಂದು ರವೀಂದ್ರ ನಾಯ್ಕ ಪ್ರಶ್ನಿಸಿದರು.
ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳ ಪರವಾಗಿದೆ. ಆದರೆ ಕಾನೂನಿನ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಬದ್ಧ, ಸಾಮಾಜಿಕ ಬದ್ಧತೆಯುಳ್ಳ ಹೋರಾಟದಿಂದ ನಾವು ಅರಣ್ಯ ಇಲಾಖಾಧಿಕಾರಿಗಳ ದೌರ್ಜನ್ಯದ ವಿರುದ್ಧ ಸೆಟೆದು ನಿಂತಿದ್ದೇವೆ. ಪ್ರತಿಯೊಬ್ಬ ಅರಣ್ಯ ಭೂಮಿ ಅತಿಕ್ರಮಣದಾರನಿಗೂ ಭೂಮಿಯ ಹಕ್ಕು ಸಿಗುವ ತನಕ ಹೋರಾಟ ನಮ್ಮ ಮುಂದುವರಿಯುತ್ತದೆ. ಇದು ಯಾವುದೇ ಕಾರಣಕ್ಕೂ ನಿಲ್ಲುವ ಹೋರಾಟವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದಲಾವಣೆಯಾಗಬೇಕಾದರೆ ಹೋರಾಟ ಮಾಡಬೇಕು. ಹೋರಾಟವಿಲ್ಲದೆ ಈಗಿನ ಸಂದರ್ಭದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ರವೀಂದ್ರನಾಥ ನಾಯ್ಕ ಮಾಡುತ್ತಿರುವ ಹೋರಾಟದಿಂದ ಅರಣ್ಯವಾಸಿಗಳಲ್ಲಿ ವಿಶ್ವಾಸ ಮೂಡಿದೆ. ರವೀಂದ್ರ ನಾಯ್ಕ ಅವರು ಅರಣ್ಯವಾಸಿಗಳನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ. ಜೈಲಿಗೆ ಹೋದರೂ ಅರಣ್ಯವಾಸಿಗಳು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಬಿಡಬಾರದು ಎಂದು ಕರೆ ನೀಡಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಮಾತನಾಡಿ, ಅರಣ್ಯವಾಸಿಗಳಿಂದಾಗಿಯೇ ನಮ್ಮ ಬಹುಪಾಲು ಅರಣ್ಯ ಉಳಿದಿದೆ. ಭ್ರಷ್ಟ ಅರಣ್ಯ ಅಧಿಕಾರಿಗಳು, ಕಾಡುಗಳ್ಳರು, ರೈಲು ಮಾರ್ಗ, ಹೆದ್ದಾರಿ, ಹೈಟೆನ್ಸನ್ ವಿದ್ಯುತ್‌ ತಂತಿಗಳಿಂದಾಗಿ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದರು.
ಸರ್ಕಾರದ ವಿವಿಧ ಯೋಜನೆಗಳಿಗಾಗಿಯೂ ಅರಣ್ಯ ಕಡಿಯಲಾಗಗಿದೆ. ಈ ಎಲ್ಲ ಕಾರಣಗಳಿಂದ ಹೆಚ್ಚು ಅರಣ್ಯ ಕಡಿಮೆಯಾಗಿದೆ. ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳ ಪರವಾಗಿದೆ. ಆದರೆ ಕಾನೂನಿನ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅರಣ್ಯ ವಾಸಿಗಳಿಂದ ಅರಣ್ಯ ನಾಶವಾಗಿಲ್ಲ. ಅನೇಕ ರೋಗಗಳು ಅರಣ್ಯವನ್ನು ಕಾಡುತ್ತಿದೆ. ಸರ್ಕಾರ ಇದನ್ನು ಗಣನೆಗೆ ತೆಗೆದುಕೊಂಡರೆ ಅರಣ್ಯ ರಕ್ಷಣೆಯಾಗುತ್ತದೆ ಹಾಗೂ ಅರಣ್ಯವಾಸಿಗಳು ಹಿತರಕ್ಷಣೆಯೂ ಆಗುತ್ತದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸೀ ಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶ್ರೀ ನಿಶ್ಚಲಾನಂದ ಸ್ವಾಮೀಜಿ, ಫಾದರ್ ಗೆಬ್ರಿಯಲ್ ಲೋಪೀಸ್, ತಂಜೀಂ ಕಾರ್ಯದರ್ಶಿ ಅಬ್ದುಲ್ ರಕೀಬ್, ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಆರ್.ಎಸ್.ರಾಯ್ಕರ, ಚಂದ್ರಕಾಂತ ಕೊಚರೇಕರ ಮೊದಲಾದವರು ಪಾಲ್ಗೊಂಡಿದ್ದರು.
ಪಟ್ಟಣದ ಪೊಲೀಸ್ ಮೈದಾನದಿಂದ ಬೃಹತ್ ಜಾಥಾ ನಡೆಯಿತು. ಆರು ಸಾವಿರಕ್ಕೂ ಹೆಚ್ಚು ಅರಣ್ಯಭೂಮಿ ಅತಿಕ್ರಮಣದಾರರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement