ಸೆಕ್ಷನ್ 124ಎ ಮರುಪರಿಶೀಲನೆ ಆಗುವ ವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ಐಪಿಸಿ ಸೆಕ್ಷನ್ 124 ಎ ಮರುಪರಿಶೀಲನೆ ಮಾಡುವ ಕೇಂದ್ರ ಸರ್ಕಾರದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಾಕಿ ಉಳಿದಿರುವ ಎಲ್ಲ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರಗಳಿಗೆ ನಿರ್ದೇಶನ ನೀಡಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನಾಳೆಯೊಳಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿದೆ.
ದೇಶದ್ರೋಹವನ್ನು ಅಪರಾಧವಾಗಿ ಪರಿಗಣಿಸುವ ಐಪಿಸಿ ಸೆಕ್ಷನ್ 124 ಎ ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಿಳಿಸಿತ್ತು.
ನಾವು ಪ್ರತಿವಾದಿಯ (ಕೇಂದ್ರ ಸರ್ಕಾರ) ಅಫಿಡವಿಟ್ ಪರಿಶೀಲಿಸಿದ್ದೇವೆ. ಈ ಮಧ್ಯೆ, 124 ಎ ಅಡಿಯಲ್ಲಿ ಬಂಧಿಸಿದ ವ್ಯಕ್ತಿಗಳ ಹಿತಾಸಕ್ತಿ ರಕ್ಷಿಸಲು ಮತ್ತು ಈ ನಿಬಂಧನೆಯ ಭವಿಷ್ಯದ ರಕ್ಷಿಸಲು ಮುಂದಿನ ಅವಧಿಯವರೆಗೆ ಪ್ರಕರಣಗಳನ್ನು ಸ್ಥಗಿತಗೊಳಿಸಬಹುದೇ ಎಂಬ ಕುರಿತಂತೆ ಸಾಲಿಸಿಟರ್‌ ಜೆನರಲ್‌ ಅವರು ಕೇಂದ್ರ ಸರ್ಕಾರದ ಸೂಚನೆ ಪಡೆಯಲಿದ್ದಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಓದಿರಿ :-   ಪೋಪ್‌ರಿಂದ ಸಂತ ಎಂದು ಘೋಷಿಸಲ್ಪಟ್ಟ ಮೊದಲನೇ ಭಾರತೀಯ ದೇವಸಹಾಯಂ ಪಿಳ್ಳೈ

ನಾಳೆ ಪ್ರಕರಣದ ವಿಚಾರಣೆ ಮುಂದುವರೆಯಲಿದೆ. ಐಪಿಸಿ ಸೆಕ್ಷನ್ 124ಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಯೋಧ, ಕರ್ನಾಟಕ ಮೂಲದ ಎಸ್ ಜಿ ವೊಂಬತ್ಕೆರೆ ಹಾಗೂ ‘ಎಡಿಟರ್ಸ್ ಗಿಲ್ಡ್’ ಸಲ್ಲಿಸಿದ್ದ ಮನವಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪ್ರಕರಣವನ್ನು ನ್ಯಾಯಾಲಯ ಇಂದು, ಮಂಗಳವಾರ ಕೈಗೆತ್ತಿಕೊಂಡಾಗ ಕಾನೂನನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸುವುದರಿಂದ ವಿಚಾರಣೆ ಮುಂದೂಡುವಂತೆ ತುಷಾರ್‌ ಮೆಹ್ತಾ ಕೋರಿದರು. ಇದನ್ನು ವಿರೋಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸರ್ಕಾರ ನಿಬಂಧನೆಯನ್ನು ಪರಿಶೀಲಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ನ್ಯಾಯಾಲಯವು ಸಿಂಧುತ್ವವನ್ನು ನಿರ್ಧರಿಸಲು ಮುಂದಾಗಬೇಕು. (ಕಾನೂನು) ಸಾಂವಿಧಾನಿಕವೇ ಅಲ್ಲವೇ ಎಂಬುದನ್ನು ನ್ಯಾಯಾಂಗ ಪರಿಗಣಿಸಬೇಕು” ಎಂದು ಕೋರಿದರು.
ಕಾನೂನು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲು ಸರ್ಕಾರಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎಂದು ಸಿಜೆಐ ಪ್ರಶ್ನಿಸಿದಾಗ ನಿಖರವಾದ ಸಮಯ ತಿಳಿಸಲು ಸಾಧ್ಯವಿಲ್ಲ. ಮರು ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ ಮೆಹ್ತಾ ತಿಳಿಸಿದರು.

ನ್ಯಾ. ಸೂರ್ಯಕಾಂತ್‌, ಕೇಂದ್ರ ಸರ್ಕಾರ ಕಾನೂನು ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ ಮೆಹ್ತಾ, ಮುಂದೆ ಈ ದಂಡನೀಯ ಕಾನೂನನ್ನು ಬಳಸಬೇಡಿ ಎಂದು ಹೇಳುವುದು ಅಪಾಯಕಾರಿಯಾಗುತ್ತದೆ. ದೇಶದ ಚರಿತ್ರೆಯಲ್ಲಿ ದಂಡನೀಯ ಕಾನೂನನ್ನು ಬಳಸಲು ಅನುಮತಿ ಇಲ್ಲ ಎಂದು ನಾನು ಭಾವಿಸುವುದಿಲ್ಲ” ಎಂದರು.
ಕೇಂದ್ರ ಸರ್ಕಾರವಾಗಿ ನೀವು (ಕಾನೂನು ಮರುಪರಿಶೀಲನೆಗೆ) ಮನಸ್ಸು ಮಾಡುತ್ತಿರುವುದರಿಂದ ದೇಶದ್ರೋಹ ಕಾನೂನಿನಡಿ ಕ್ರಮ ಕೈಗೊಳ್ಳಬೇಡಿ ಎಂದು ರಾಜ್ಯಗಳಿಗೆ ಏಕೆ ಸೂಚಿಸುವುದಿಲ್ಲ?” ಎಂದು ನ್ಯಾ. ಹಿಮಾ ಕೊಹ್ಲಿ ಪ್ರಶ್ನಿಸಿದರು. “ನಾನು ಸರ್ಕಾರದೊಟ್ಟಿಗೆ ಚರ್ಚಿಸಬಲ್ಲೆ. ಈ ಬಗ್ಗೆ ಮಾರ್ಗಸೂಚಿಗಳು ಇರಬಹುದು ಎಂದು ಮೆಹ್ತಾ ಹೇಳಿದರು.
ಗಂಭೀರವಾದುದು ಏನಾದರೂ ಘಟಿಸಿದರೆ ಇತರ ದಂಡನೀಯ ನಿಬಂಧನೆಗಳು ಆ ಬಗ್ಗೆ ಗಮನ ಹರಿಸುತ್ತವೆ. ಕಾನೂನು ಜಾರಿ ಸಂಸ್ಥೆಗಳು ಅಸಹಾಯಕರಾಗುವ ಹಾಗೆ ಇಲ್ಲ” ಎಂದು ನ್ಯಾ. ಕಾಂತ್ ಹೇಳಿದರು.
ವಿನೋದ್ ದುವಾ ತೀರ್ಪಿನಲ್ಲಿ, ಸೆಕ್ಷನ್ 124 ಎ ಅನ್ನು ಹೇಗೆ ಅರ್ಥಪೂರ್ಣವಾಗಿ ಬಳಸಬಹುದು ಎಂದು ಮಾರ್ಗಸೂಚಿಗಳನ್ನು ಹಾಕಲಾಗಿದೆ” ಎಂದು ಸಾಲಿಸಿಟರ್‌ ಜನರಲ್‌ ಪ್ರಸ್ತಾಪಿಸಿದರು. ಈ ಅಂಶದ ಬಗ್ಗೆ ಕೇಂದ್ರದಿಂದ ಸೂಚನೆಗಳನ್ನು ಪಡೆದು ನಾಳೆ ಪ್ರತಿಕ್ರಿಯಿಸುವಂತೆ ಪೀಠವು ಅಂತಿಮವಾಗಿ ಅವರಿಗೆ ಸೂಚಿಸಿತು.

ಓದಿರಿ :-   ಸತ್ತ ತಾಯಿ ತನ್ನೊಂದಿಗೆ ಶಾಶ್ವತವಾಗಿರುವಂತೆ ಮಾಡಲು ಪ್ಲಾಸ್ಟಿಕ್ ಬ್ಯಾರೆಲ್‌ನಲ್ಲಿ ಸಿಮೆಂಟ್‌ ಹಾಕಿ ಶವ ಹೂತಿಟ್ಟ ಮಗ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ