ಬೆಂಗಳೂರು: ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ರಾಜ್ಯ ದಿಂದ ರಾಜ್ಯ ಸಭೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ಅಂತಿಮಗೊಳಿಸಲಾಗಿದೆ.ಎಂದು ತಿಳಿದುಬಂದಿದೆ.
ಹಣಕಾಸು ಸಚಿವರಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಕರ್ನಾಟಕದಿಂದಲೇ ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಮರು ಆಯ್ಕೆ ಮಾಡಲು ಕೇಂದ್ರ ವರಿಷ್ಠರು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಪಕ್ಷ ಸರ್ವಸಮ್ಮತದ ತೀರ್ಮಾನವನ್ನು ಕೈಗೊಂಡಿದೆ.
ವಿಧಾನಸಭೆಯಲ್ಲಿ ಹೊಂದಿರುವ ಬಲಾಬಲದ ಸಂಖ್ಯೆ ಮೇಲೆ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದಾಗಿದೆ.ಮತ್ತೊಂದು ಸ್ಥಾನಕ್ಕೆ ಕೆ.ಸಿ.ರಾಮಮೂರ್ತಿ ಅವರ ಜೊತೆಗೆ ಲಹರಿ ವೇಲು, ಉದ್ಯಮಿ ವಿಜಯ ಸಂಕೇಶ್ವರ ಮೊದಲಾದವರ ಹೆಸರು ಸಹ ಕೇಳಿಬರುತ್ತಿದೆ. ಮೂರನೇ ಅಭ್ಯರ್ಥಿಯನ್ನು ಪರಿಸ್ಥಿತಿ ನೋಡಿಕೊಂಡು ಜೆಡಿಎಸ್ ಬೆಂಬಲ ಪಡೆದು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಈ ಬಾರಿಯ ಚುನಾವಣೆಯಲ್ಲೂ ಕೆಲವು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಸಂಘದ ಹಿನ್ನೆಲೆ ಹೊಂದಿರುವ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಹೆಸರು ಬಹುತೇಕ ಅಂತಿಮವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಅಲ್ಲದೆ, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಜಿಪಂ ಮತ್ತು ತಾಪಂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಕುರಿತಂತೆಯೂ ಕೈಗೊಳ್ಳಬೇಕಾದ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನ ಬಿಜೆಪಿಗೆ ಲಭಿಸಲಿವೆ. ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿ ಹಾಗೂ ಲೆಹರ್ ಸಿಂಗ್ ಅವರನ್ನು ಪುನರಾಯ್ಕೆ ಮಾಡಬೇಕೊ ಅಥವಾ ಬೇರೆಯವರಿಗೆ ನೀಡಬೇಕೊ ಎನ್ನುವ ಕುರಿತಂತೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ.
ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ ಹಿರೇಮನಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮ ಕುಮಾರ ಸುರಾನ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಟೆಂಗಿನಕಾಯಿ, ಸಿದ್ದರಾಜು, ಶಿಕ್ಷಕರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮೋಹನ್ ಲಿಂಬಿಕಾಯಿ ಅವರ ಹೆಸರು ಪರಿಷತ್ ಸ್ಥಾನಕ್ಕೆ ಕೇಳಿಬರುತ್ತಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ವಿಧಾನಸಭೆ ಸದಸ್ಯರಿಂದ ಆಯ್ಕೆಯಾಗುವ ವಿಧಾನ ಪರಿಷತ್ 7 ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದ್ದು ಮೇ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅದೇ ರೀತಿ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13ಕ್ಕೆ ಮತದಾನ ನಡೆಯಲಿದೆ.
ಬಿಜೆಪಿ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ