ಗುಜರಾತ್: ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಸಾವು

ಮೊರ್ಬಿ: ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಮೊರ್ಬಿ ಜಿಲ್ಲೆಯ ಹಲ್ವಾಡ್ ಜಿಐಡಿಸಿಯಲ್ಲಿ ಉಪ್ಪು ಕಾರ್ಖಾನೆಯ ಗೋಡೆಯ ಕುಸಿದು ಕನಿಷ್ಠ ಹನ್ನೆರಡು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು 15 ಮಂದಿ ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಮೊರ್ಬಿ ಜಿಲ್ಲಾಡಳಿತ ಹೇಳಿದೆ.
ದುರಂತ ಘಟನೆಯ ಬಗ್ಗೆ ಗಾಂಧಿನಗರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬ್ರಿಜೇಶ್ ಮೆರ್ಜಾ ಅವರು, ಹಲ್ವಾಡ್ ಜಿಐಡಿಸಿಯಲ್ಲಿರುವ ಸಾಗರ್ ಸಾಲ್ಟ್ ಕಾರ್ಖಾನೆಯಲ್ಲಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೋಡೆ ಕುಸಿದಿದೆ. 12 ಕಾರ್ಮಿಕರ ಮೃತದೇಹಗಳು ಅವಶೇಷಗಳಿಂದ ಪತ್ತೆಯಾಗಿವೆ ಎಂದು ತಿಳಿಸಿದರು.

ಶೇ.90 ರಷ್ಟು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ, ಆದರೆ ಗೋಡೆ ಕುಸಿತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ತನಿಖೆಯ ವಿಷಯವಾಗಿದ್ದು, ಅದನ್ನು ಪೊಲೀಸರು ಮಾಡುತ್ತಾರೆ. ಸಂತ್ರಸ್ತರ ಕುಟುಂಬಗಳಿಗೆ ಶೀಘ್ರವೇ ರಾಜ್ಯ ಸರ್ಕಾರ ಪರಿಹಾರ ಘೋಷಿಸಲಿದೆ ಎಂದು ಹೇಳಿದರು.ಕಾರ್ಖಾನೆಯು ಉಪ್ಪನ್ನು ಸಂಸ್ಕರಿಸಿ ಪ್ಯಾಕೇಜ್ ಮಾಡುತ್ತಿತ್ತು ಎಂದು ಸಚಿವರು ಹೇಳಿದರು.
ಕಾರ್ಖಾನೆಯ ಮೂಲಗಳು ಹೇಳುವಂತೆ, ಗೋಡೆಯ ಉದ್ದಕ್ಕೂ ಜೋಡಿಸಲಾದ ಉಪ್ಪಿನ ಚೀಲಗಳು ಅವರ ಮೇಲೆ ಬಿದ್ದ ನಂತರ ಕಾರ್ಮಿಕರು ಸಾವಿಗೀಡಾದರು ಅಥವಾ ಅದರ ಅಡಿಗೆ ಸಿಕ್ಕಿಬಿದ್ದರು. ಮೊರ್ಬಿ ಜಿಲ್ಲಾಧಿಕಾರಿ ಜೆ.ಬಿ.ಪಟೇಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ತ್ರಿಪಾಠಿ ತಮ್ಮ ತಂಡದೊಂದಿಗೆ ಅಪಘಾತ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು. ಜಿಲ್ಲಾಡಳಿತ ಜೆಸಿಬಿ ಯಂತ್ರಗಳಲ್ಲಿ ಉಪ್ಪಿನ ಚೀಲ, ಗಟ್ಟಿಯಾದ ಕಲ್ಲು ಉಪ್ಪು, ಗೋಡೆಯ ಅವಶೇಷಗಳನ್ನು ತೆಗೆಯಲು ಮುಂದಾಯಿತು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಮತ್ತು ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಿದ ನಂತರ, ಸ್ಥಳೀಯ ಪೊಲೀಸರೊಂದಿಗೆ ಎಫ್‌ಎಸ್‌ಎಲ್ ತಂಡವು ಘಟನೆಯ ಬಗ್ಗೆ ತನಿಖೆ ನಡೆಸಲಿದೆ ಎಂದು ಎಸ್‌ಪಿ ತ್ರಿಪಾಠಿ ಹೇಳಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಬಹುದು ಎಂದು ಅವರು ಹೇಳಿದರು.
ಗುಜರಾತ್‌ನ ಮೋರ್ಬಿಯಲ್ಲಿ ಗೋಡೆ ಕುಸಿತದ ಘಟನೆಯಲ್ಲಿ ಸಂಭವಿಸಿದ ಜೀವಹಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಾಪ ಸೂಚಿಸಿದ್ದು, ಮೃತರ ಮುಂದಿನ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.
ಗೋಡೆ ಕುಸಿತದಿಂದ ಮೋರ್ಬಿಯಲ್ಲಿ ಸಂಭವಿಸಿದ ದುರಂತವು ಹೃದಯ ವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ, ನಾನು ದುಃಖಿತ ಕುಟುಂಬಗಳೊಂದಿಗೆ ಇದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮೋರ್ಬಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ 2 ಲಕ್ಷ ರೂಪಾಯಿ ನೀಡಲಾಗುವುದು ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುವುದು ಎಂದು ಅವರು ತಮ್ಮ ಕಚೇರಿಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement