ಕನ್ನಡ ಸಾರಸ್ವತ ಲೋಕದ ಶಿಖರಪ್ರಾಯ ಕಾದಂಬರಿಕಾರ ತರಾಸು…21ರಂದು ಜನ್ಮ ಶತಮಾನೋತ್ಸವ ಕಾರ್ಯಕ್ರಮ

(ತರಾಸು ಅಭಿಮಾನಿಗಳ ಬಳಗ, ಹುಬ್ಬಳ್ಳಿ-ಧಾರವಾಡ, ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಶಿಕ್ಷಣ ವಿಭಾಗ ಹುಬ್ಬಳ್ಳಿ ಸಹಯೋಗದಲ್ಲಿ ತ.ರಾ.ಸು ಜನ್ಮ ಶತಮಾನೋತ್ಸವ ಮತ್ತು ಪ್ರಬಂಧ ಸ್ಪರ್ಧೇ ಹಾಗೂ ಸನ್ಮಾನ ಸಮಾರಂಭವು ೨೧ ರಂದು (ಶನಿವಾರ ೨೧-೦೫-೨೦೨೨ ರಂದು) ಮಧ್ಯಾಹ್ನ ೧೨.೦೦ ಗಂಟೆಗೆ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದ್ದು, ಈ ನಿಮಿತ್ತ ಲೇಖನ.)

೬೪ ವರ್ಷ ಬಾಳಿದ ತ.ರಾ. ಸುಬ್ಬರಾವ್‌ (ಜನನ:೨೧.೦೪.೧೯೨೦. ಮರಣ ೧೦.೦೪.೧೯೮೪) ಅವರು ನಾಡಿಗೆ ತ.ರಾ.ಸು. ಎಂದೇ ಚಿರಪರಿಚಿತರು. ೬೮ ಕಾದಂಬರಿ ೪ ಕಥಾ ಸಂಕಲನ, ೨ ಬಾನುಲಿ ನಾಟಕ, ೯ ಅನುದಾನಿತ ಕೃತಿಗಳು, ೩ ಜೀವನ ಚರಿತ್ರೆ, ೨ ಸಂಪಾದಿತ , ೧ ಆತ್ಮಕಥನ ಮತ್ತು ಇತರ ಗ್ರಂಥಗಳ ಮೂಲಕ ಕನ್ನಡಿಗರಲ್ಲಿ ಓದುವ ಸಂಸ್ಕೃತಿ ಬೆಳೆಸಿದವರು. ೯೪ ಕ್ಕೂ ಹೆಚ್ಚಿನ ಕೃತಿಗಳ ಮೂಲಕ ತಮ್ಮದೇ ಆದ ಓದುಗರ ವಲಯ ಸೃಷ್ಟಿಸಿಕೊಂಡ ಕಾದಂಬರಿಕಾರರು.
ಅಂದಿನ ಚಿತ್ರದುರ್ಗ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ಜನಿಸಿದ ತರಾಸು ಚಿತ್ರದುರ್ಗ, ಶಿವಮೊಗ್ಗ, ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಸಿನಿಯರ್ ಇಂಟರ್‌ಮಿಡಿಯೆಟ್‌ವರೆಗೆ ಅಧ್ಯಯನ ಮಾಡಿದ ತ.ರಾ. ಸುಬ್ಬರಾವ್‌ ಅವರು ಕೃತಿಗಳ ರಚನೆಯಲ್ಲಿ ದಾಖಲೆಯನ್ನು ಸ್ಥಾಪಿಸಿದವರು. ೧ ತಿಂಗಳ ೧೦ ದಿನಗಳಲ್ಲಿ ೫ ಕಾದಂಬರಿಗಳನ್ನು ರಚಿಸಿದ್ದು, ಅವರದು ಇನ್ನೊಂದು ವೈಶಿಷ್ಟ್ಯ.

ಹಂಸಗೀತೆ, ಚಂದುವಳ್ಳಿ ತೋಟ, ಚಕ್ರತೀರ್ಥ, ಸಾಕುಮಗಳು, ಮಾರ್ಗದರ್ಶಿ, ನಾಗರಹಾವು, ಚಂದನದಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂ ಮುಂತಾದ ಕಾದಂಬರಿಗಳು ಚಲನ ಚಿತ್ರಗಳಾಗಿದ್ದು, ಪ್ರೇಕ್ಷಕರಿಗೆ ಹೊಸತನ ನೀಡಿವೆ. ಅವರ ಚಲನಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ದುರ್ಗಾಸ್ತಮಾನ, ಶೀಲ್ಪಶ್ರೀ, ಯಕ್ಷಪ್ರಶ್ನೆ ಕಾದಂಬರಿಗಳಿಗೆ ವಿಶೇಷ ಪ್ರಶಸ್ತಿಗಳು ಸಂದಿವೆ. ನಾಗರಹಾವು ಚಂದುವಳ್ಳಿ ತೋಟ, ಚಂದನದಗೊಂಬೆ ಕಥೆಗಳಿಗಾಗಿ ಶ್ರೇಷ್ಠ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.

ಪ್ರಜಾವಾಣಿ, ಪ್ರಜಾಮತ, ವಿಶ್ವಕರ್ನಾಟಕ, ವಾಹಿನಿ, ನವೋದನ, ವಿಚಾರವಾಣಿ, ಚೇತನ, ಕಾಲದೂತ, ಮೈಸೂರು ಮಲ್ಲಿಗೆ, ಶ್ರೀ ಶಂಕರ ಕೃಪಾ ಮುಂತಾದ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಧ್ವಜ, ಅರಣ್ಯ ಸತ್ಯಾಗ್ರಹ, ಚಲೇ ಜಾವ್ ಚಳವಳಿ, ಜವಾಬ್ದಾರಿ ಸರಕಾರ, ಪ್ರಗತಿಶೀಲ, ಕನ್ನಡ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸ್ವಾತಂತ್ರ್ಯ ಅಂದೋಲನದಲ್ಲಿ ಕೈಜೋಡಿಸಿದ್ದಾರೆ. ಮೈಸೂರು ಪುರಸಭೆಗೆ ೧೯೬೨ -೧೯೬೫ ವರೆಗೆ ಸದಸ್ಯರಾಗಿ ರಚನಾತ್ಮಕ ಕಾರ್ಯ ಮಾಡಿದ್ದಾರಲ್ಲದೆ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಉನ್ನತ ಶಿಕ್ಷಣದ ಬೆಳವಣಿಗಾಗಿ ಕೈಜೋಡಿಸಿದ್ದಾರೆ. ಪ್ರಶ್ಚಿಮ ಜರ್ಮನಿ, ಸೋವಿಯತ್ ರಷ್ಯಾ ದೇಶಗಳ ಪ್ರವಾಸವನ್ನು ಮಾಡಿ ಅಲ್ಲಿಯ ಉತ್ತಮ ಅಂಶಗಳನ್ನು ತಮ್ಮ ಬರಹಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ತ.ರಾ.ಸು ಅವರಿಗೆ ೧೯೭೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಕಾದಂಬರಿಕಾರ, ೧೯೭೪ ರಲ್ಲಿ ರಾಜ್ಯ ಸಾಹಿತ್ಯ ಅಕ್ಯಾಡೆಮಿಯ, ೧೯೮೧ ರಲ್ಲಿ ಸಾಹಿತ್ಯ ರತ್ನ ಪ್ರಶಸ್ತಿಗಳು ಚಂದಿವೆ. ಆಕಾಶವಾಣಿ, ದೂರದರ್ಶನದಲ್ಲಿ ಅವರ ಸಣ್ಣ ಕಥೆಗಳು ಮತ್ತು ಸಂದರ್ಶನಗಳು ಪ್ರಸಾರವಾಗಿವೆ. ಕರ್ನಾಟಕ ಸರಕಾರ, ಕನ್ನಡ ಚಲನಚಿತ್ರ ಪ್ರೇಮಿಗಳ ಸಂಘ, ಲಯನ್ಸ್ ಮುಂತಾದ ಸಂಸ್ಥೆಗಳು ಅವರ ಸೇವೆಯನ್ನು ಪರಿಗಣಿಸಿ, ಗೌರವಿಸಿ ಸನ್ಮಾನಿಸಿವೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ತ.ರಾ.ಸು ಕುರಿತು ಶ್ಯಾ.ಮ. ಕೃಷ್ಣರಾಯ್ ಸಂಪಾದನೆಯಲ್ಲಿ ತ.ರಾ.ಸು ಬದುಕು ಬರಹ, ಜೆ. ಶೇಷಗಿರಿ ಆಚಾರ ಅವರ ಮಾರ್ಗದರ್ಶನದಲ್ಲಿ ತ.ರಾ.ಸು ಅಂದು ಇಂದು, ನಾ. ಪ್ರಭಾಕರ ಅವರು ತ.ರಾ.ಸು ಮಕ್ಕಳ ಪುಸ್ತಕ, ಎಚ್. ಶ್ರೀಶೈಲ ಆರಾಧ್ಯ, ಸಂಪಾದನೆಯಲ್ಲಿ ಗಿರಿಮಲ್ಲಿಗೆ, ಸಂಸ್ಮರಣ, ಪಿ.ಎಸ್. ಛಾಯಾಪತಿ ಅವರ ವರಲೇಖಕ, ಎಲ್.ಎಸ್. ಶೇಷಗಿರಿರಾವ ಅವರು ಭಾರತೀಯ ಸಾಹಿತ್ಯ ನಿರ್ಮಾಪಕರು ಗ್ರಂಥಗಳು ಪ್ರಕಟವಾಗಿವೆ. ಅವರ ಕಾದಂಬರಿ ಮತ್ತು ಇತರ ಗ್ರಂಥಗಳ ಕುರಿತು ಸಂಶೋಧಕರು ಪ್ರೌಢ ಪ್ರಬಂಧಗಳನ್ನು ವಿಶ್ವವಿದ್ಯಾಲಯಗಳಿಗೆ ಮಂಡಿಸಿ, ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ.
ಸಾಧು ಸಂತರ, ವಿದ್ವಾಂಸರ, ರಂಗಭೂಮಿಯ, ಸಂಗೀತಗಾರರ, ಚಿತ್ರದುರ್ಗ ಕೋಟೆಯ ಪ್ರಭಾವ ತ.ರಾ.ಸು ಅವರ ಮೇಲೆ ಅಪಾರವಾಗಿತ್ತು. ಎಸ್. ನಿಜಲಿಂಗಪ್ಪನವರ ಪ್ರಭಾವದಿಂದಾಗಿ ಚಿಕ್ಕಂದಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.
ಕನ್ನಡವನ್ನು ಕಟ್ಟಬೇಕು ಮತ್ತು ಬೆಳೆಸಬೇಕೆಂದರೆ ಪ್ರತಿಯೋಬ್ಬರು ಉತ್ಸಾಹ ಮತ್ತು ಶ್ರದ್ಧೆಯಿಂದ ಕನ್ನಡಕ್ಕಾಗಿ ಕಾರ್ಯಮಾಡಬೇಕೆನ್ನುತ್ತಿದ್ದ ತ.ರಾ.ಸು ಅವರು ನಾನು ಬರೆದ ಒಂದೊಂದು ಕೃತಿಗೂ ಕೂಡ ಜೀವನದಲ್ಲಿಯೇ ನಡೆದ ಅಥವಾ ನಾನು ಕೇಳಿದ ಅಥವಾ ನಾನು ಓದಿದ ಘಟನೆಗಳನ್ನು ವಿಷಯ ಯಾವುದೋ ಒಂದು ವಸ್ತು ಮೂಲ ಭೂತ ಪ್ರೇರಕ ಶಕ್ತಿ ಆಗಿದೆ ಎಂದು ಸದಾ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಿದ್ದರು. ಅಪಾರ ಸಾಹಿತ್ಯ ರಚಿಸಿದ ತ.ರಾ.ಸು ಅವರು ನಾನು ಬರೆದಿದ್ದು ಕಡಿಮೆ ಆಯಿತು, ಇನ್ನೂ ಅಷ್ಟು ಬರೆಯುವುದು ಬಾಕಿ ಇದೆ ಎಂದು ತಮ್ಮ ಸ್ನೇಹಿತರಲ್ಲಿ ಮತ್ತು ಬಂಧುಗಳಲ್ಲಿ ಹೇಳುತ್ತಿದ್ದರು.
ಶ್ರೀರಾಮನ ಪರಮ ಭಕ್ತರಾಗಿದ್ದ ತ.ರಾ.ಸು ಅವರು ತಮ್ಮ ಹಿರಿಯರ ನೆನಪಿನಲ್ಲಿ ತಮ್ಮ ಊರು ತಳುಕಿನಲ್ಲಿ ಶ್ರೀರಾಮ ಮಂದಿರವನ್ನು ಸ್ಥಾಪಿಸಿ, ಅಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಮೈಸೂರಿನ ಯಾದವಗಿರಿ ಪ್ರದೇಶದ ಅವರ ಮನೆ ಗಿರಿಕನ್ನಿಕಾ, ಸಾಹಿತಿಗಳ, ಸಂಗೀತಗಾರರ ಮತ್ತು ಚಿಂತಕರ ಸಂಗಮವಾಗಿತ್ತು.
ವ್ಯಾಪಕವಾದ ಅಧ್ಯಯನ, ನಿರಂತರ ಚರ್ಚೆ ಮತ್ತು ಅನುಭವನಗಳಿಂದ ಸಾಹಿತ್ಯವನ್ನು ರಚಿಸಿರುವ ತ.ರಾ.ಸು ಅವರ ಬದುಕು ಬರಹಗಳು ಅನ್ಯನ್ಯ ಮತ್ತು ಆದರ್ಶವಾಗಿದ್ದು, ಕಿರಿಯರಿಗೆ ಮಾರ್ಗದರ್ಶನವಾಗಿವೆ. ಅವರ ಸಾವಿರಾರು ಅನುಯಾಯಿಗಳು ಅವರ ಸಂದೇಶಗಳನ್ನು ಸಮಾಜದಲ್ಲಿ ಬಿರುತ್ತಿದ್ದಾರೆ ಎಂದು ಅವರ ಅಭಿಮಾನಿಯಾದ ಪ್ರೊ. ಈ.ವ್ಹಿ. ಬಿಳೇಕಲ್ ಸದಾ ಸ್ಮರಿಸುತ್ತಾರೆ. ಅವರ ತ.ರಾಸು ಅಭಿಮಾನ ಬಳಗವನ್ನು ಸ್ಥಾಪಿಸಿ ಆ ಮೂಲಕ ತ.ರಾಸು ಅವರ ಕೃತಿಗಳನ್ನು ಓದಲು ಸಾರ್ವಜನಿಕರಿಗೆ ಪ್ರೇರಣೆಯನ್ನು ನೀಡಿ, ನಗದು ಬಹುಮಾನಗಳನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ.
ವಕೀಲರಾಗಿದ್ದ ತಂದೆ ರಾಮಸ್ವಾಮಯ್ಯ, ತಾಯಿ ಸೀತಮ್ಮ, ಪತ್ನಿ ಅಂಬುಜಾ, ಮಕ್ಕಳಾದ ನಾಗಪ್ರಸಾದ, ಪೂರ್ಣಿಮಾ, ಪ್ರದೀಪ ಕುಮಾರ, ಕಾದಂಬರಿಕಾರ ಅ.ನ.ಕೃಷ್ಣರಾಯ್ , ಪ್ರಕಾಶಕರಾದ ಡಿ.ವಿ.ಕೆ ಮೂರ್ತಿ ಮುಂತಾದವರನ್ನು ತ.ರಾ.ಸು ಅವರು ಸದಾ ಸ್ಮರಿಸುತ್ತಿದ್ದರು. ಪ್ರಗತಿಶೀಲ ಬರಹಗಾರರಾಗಿದ್ದ ತ.ರಾ.ಸು ಅವರು ಕನ್ನಡ ಸಾಹಿತ್ಯದಲ್ಲಿ ಸಂಚಲನವನ್ನು ಮೂಡಿಸಿ, ಓದುಗರಲ್ಲಿ ಸದಾ ಕಾಲ ತಮ್ಮ ಕೃತಿಗಳ ಮೂಲಕ ಉಳಿದ ವ್ಯಕ್ತಿಯಾಗಿದ್ದಾರೆ.
-ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement