ವೇಶ್ಯಾವಾಟಿಕೆ ಕಾನೂನುಬದ್ಧ, ವಯಸ್ಕ- ಒಪ್ಪಿಗೆಯ ಲೈಂಗಿಕ ಕಾರ್ಯಕರ್ತರ ಮೇಲೆ ಪೊಲೀಸರು ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ : ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ, ಸುಪ್ರೀಂಕೋರ್ಟ್ ವೇಶ್ಯಾವೃತ್ತಿಯನ್ನು ಕಾನೂನುಬದ್ಧ ಎಂದು ಹೇಳಿದೆ. ಒಪ್ಪಿಗೆ ಮೇರೆಗೆ ಲೈಂಗಿಕ ವೃತ್ತಿ ನಡೆಸುತ್ತಿರುವವರ ಮೇಲೆ ಪೊಲೀಸರು ಅಪರಾಧ ಕ್ರಮ ಕೈಗೊಳ್ಳುವಂತಿಲ್ಲ ಹಾಗೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವೇಶ್ಯಾವಾಟಿಕೆ ಒಂದು ವೃತ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿಯಲ್ಲಿ ಘನತೆ ಹಾಗೂ ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠವು ಲೈಂಗಿಕ ಕಾರ್ಯಕರ್ತರ ಹಕ್ಕುಗಳ ರಕ್ಷಣೆಗೆ ಕೆಲವು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಹಾಗೂ ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ ಎಂದು ಹೇಳಿದೆ.
ಲೈಂಗಿಕ ಕಾರ್ಯಕರ್ತೆ ಪ್ರಾಪ್ತ ವಯಸ್ಕಳಾಗಿದ್ದಾಳೆ ಮತ್ತು ತನ್ನ ಒಪ್ಪಿಗೆಯೊಂದಿಗೆ ವೃತ್ತಿಯಲ್ಲಿ ತೊಡಗಿದ್ದಾಳೆ ಎಂದು ಸ್ಪಷ್ಟವಾದಾಗ, ಪೊಲೀಸರು ಹಸ್ತಕ್ಷೇಪ ಮಾಡುವುದರಿಂದ ಅಥವಾ ಅವರ ಮೇಲೆ ಯಾವುದೇ ಅಪರಾಧ ಕ್ರಮ ಕೈಗೊಳ್ಳುವುದರಿಂದ ದೂರ ಇರಬೇಕು ಎಂದು ಕೋರ್ಟ್‌ ಹೇಳಿದೆ.

ಯಾವುದೇ ವೃತ್ತಿ ನಡೆಸುತ್ತಿದ್ದರೂ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವಾಸಿಸುವ ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಸ್ವಯಂಪ್ರೇರಣೆಯ ವೇಶ್ಯಾವಾಟಿಕೆ ಅಕ್ರಮವಲ್ಲ ಮತ್ತು ವೇಶ್ಯಾಗೃಹ ನಡೆಸುವುದು ಕಾನೂನುಬಾಹಿರವಲ್ಲ. ಹೀಗಾಗಿ ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿದಾಗ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವುದು, ದಂಡ ಹಾಕುವುದು, ಕಿರುಕುಳ ನೀಡುವುದು ಮಾಡುವಂತಿಲ್ಲ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

ವೇಶ್ಯಾಗೃಹದಲ್ಲಿ ಅಥವಾ ಲೈಂಗಿಕ ಕಾರ್ಯಕರ್ತೆಯರ ಜೊತೆ ಅಪ್ರಾಪ್ತ ವಯಸ್ಸಿನ ಮಗು ಪತ್ತೆಯಾದರೆ, ಆ ಮಗುವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಭಾವಿಸಬಾರದು.ಮಹಿಳೆಯು ಲೈಂಗಿಕ ವ್ಯವಹಾರದಲ್ಲಿ ತೊಡಗಿರುವ ಒಂದೇ ಕಾರಣಕ್ಕೆ ತಾಯಿಯಿಂದ ಆಕೆಯ ಮಗುವನ್ನು ದೂರ ಮಾಡುವಂತಿಲ್ಲ. ಮಾನವೀಯ ಶಿಷ್ಟತೆ ಮತ್ತು ಘನತೆಯ ಮೂಲ ರಕ್ಷಣೆಯು ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಅವರ ಮಕ್ಕಳಿಗೆ ಕೂಡ ಅನ್ವಯವಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ದೂರು ನೀಡಿದಾಗ, ಮುಖ್ಯವಾಗಿ ಅವರ ಮೇಲೆ ಲೈಂಗಿಕ ಸ್ವರೂಪದ ದಾಳಿ ನಡೆದಾಗ ಪೊಲೀಸರು ಯಾವುದೇ ತಾರತಮ್ಯ ನಡೆಸಬಾರದು. ಮಾನವನ ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷಣೆ ಲೈಂಗಿಕ ಕಾರ್ಯಕರ್ತರು ಮತ್ತು ಅವರ ಮಕ್ಕಳಿಗೆ ವಿಸ್ತರಿಸುತ್ತದೆ” ಎಂದು ಪೀಠ ಹೇಳಿದೆ.

ಲೈಂಗಿಕ ದೌರ್ಜನ್ಯದ ಬಲಿಪಶುಗಳಾದ ಲೈಂಗಿಕ ಕಾರ್ಯಕರ್ತೆಯರಿಗೆ ತಕ್ಷಣದ ವೈದ್ಯಕೀಯ- ಕಾನೂನು ಆರೈಕೆ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಲೈಂಗಿಕ ಕಾರ್ಯಕರ್ತೆಯರ ಮೇಲಿನ ಪೊಲೀಸರ ವರ್ತನೆ ಕ್ರೂರ ಮತ್ತು ಹಿಂಸಾತ್ಮಕವಾಗಿರುವುದನ್ನು ಗಮನಿಸಿದ್ದೇವೆ. ಅದೊಂದು ವರ್ಗವಾಗಿದ್ದು, ಅವರ ಹಕ್ಕುಗಳನ್ನು ಗುರುತಿಸಲಾಗಿಲ್ಲ” ಎಂದು ಕೋರ್ಟ್ ಹೇಳಿದೆ.
ಬಂಧನ, ದಾಳಿ ಮತ್ತು ರಕ್ಷಣಾ ಕಾರ್ಯಾಚರಣೆಗಳ ವೇಳೆ ಲೈಂಗಿಕ ಕಾರ್ಯಕರ್ತೆಯರ ಗುರುತುಗಳನ್ನು ಮಾಧ್ಯಮಗಳು ಬಹಿರಂಗಪಡಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದೆ.
ರಕ್ಷಿಸಲಾದ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾದ ವೇಶ್ಯೆಯರನ್ನು ಎರಡರಿಂದ ಮೂರು ವರ್ಷಕ್ಕಿಂತ ಹೆಚ್ಚು ಸಮಯಕ್ಕಿಂತ ಹೆಚ್ಚಿಲ್ಲದಂತೆ ಆಶ್ರಯ ಗೃಹಗಳಿಗೆ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಲೈಂಗಿಕ ಕಾರ್ಯಕರ್ತೆ ತನ್ನ ಇಚ್ಛೆಯಂತೆ ಆ ವೃತ್ತಿ ನಡೆಸುತ್ತಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ನಿರ್ಧರಿಸಿದರೆ, ಅವರನ್ನು ಬಿಡುಗಡೆ ಮಾಡಬೇಕು” ಎಂದು ಹೇಳಿದೆ. ಆದರೆ ಲೈಂಗಿಕ ಕಾರ್ಯಕರ್ತೆಯರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ತಿದ್ದುಪಡಿ/ಆಶ್ರಯ ಗೃಹಗಳಿಗೆ ಹೋಗುವಂತೆ ಒತ್ತಾಯಿಸುವಂತಿಲ್ಲ ಎಂದು ಕೂಡ ಕೋರ್ಟ್ ಹೇಳಿದೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement