ಬೆಂಗಳೂರಿನಲ್ಲಿ ರೈತ ಮುಖಂಡ ಟಿಕಾಯತ್‌ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ: ವ್ಯಕ್ತಿಗೆ ಥಳಿತ

ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ಧ್​ವೀರ್​ ಸಿಂಗ್ ಅವರ ಮೇಲೆ ಕಪ್ಪು ಮಸಿ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರ ಕೋಡಿಹಳ್ಳಿ‌ ಚಂದ್ರಶೇಖರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿತ್ತು. ರಾಷ್ಟ್ರೀಯ ಕಿಸಾನ್ ಮೊರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು. ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಿರುವಾಗ ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಲಾಗಿದೆ.
ಈ ವೇಳೆ ಏಕಾಏಕಿ ನುಗ್ಗಿದ ಯುವಕ ಟಿಕಾಯತ್ ಮುಖಕ್ಕೆ ಮಸಿ ಬಳಿದು ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು‌ ಘೋಷಣೆ ಕೂಗಿದ್ದಾನೆ. ಯುವಕ ಟಿವಿ ಚಾನಲ್ ಮೈಕ್ ಕಿತ್ತುಕೊಂಡು‌ ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಎರಚಿದ್ದಾನೆ.

ಈ ಸಂದರ್ಭದಲ್ಲಿ ಅಲ್ಲಿ ಮಾರಾಮಾರಿ ನಡೆದಿದ್ದು ಅಲ್ಲಿದ್ದ ವ್ಯಕ್ತಿಗಳು ಯುವಕನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಕುರ್ಚಿಗಳನ್ನು ಹಿಡಿದು ತೂರಿದ ವೀಡಿಯೋ ಲಭ್ಯವಾಗಿದೆ.
ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತ ಮುಖಂಡರು ನೀಡುವ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ‌ತಿಳಿಸಿದ್ದಾರೆ.
ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ಮತ್ತು ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ರಾಕೇಶ್​ ಟಿಕಾಯತ್ ಮುಂಚೂಣಿಯಲ್ಲಿದ್ದರು. ನಂತರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯೇ ಜಯಗಳಿಸಿತು. ಕೋಡಿಹಳ್ಳಿ ಚಂದ್ರಶೇಖರ ಮತ್ತು ರಾಕೇಶ್ ಟಿಕಾಯತ್ ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡಿದ್ದರು. ಕೋಡಿಹಳ್ಳಿ ಚಂದ್ರಶೇಖರಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದ ವೇಳೆ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿಯಲಾಯಿತು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ‘ಇಂಥ ಘಟನೆ ನಡೆಯಬಾರದಿತ್ತು. ಪೊಲೀಸರು ಭದ್ರತೆ ಒದಗಿಸಿರಲಿಲ್ಲ. ಸರ್ಕಾರವು ಈ ಘಟನೆಯಲ್ಲಿ ಶಾಮೀಲಾಗಿದೆ’ ಎಂದು ಹೇಳಿದರು. ಪರಸ್ಪರ ಹೊಡೆದಾಟಕ್ಕೆ ಮುಂದಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement