ನೇಪಾಳ ತಾರಾ ಏರ್ ವಿಮಾನ ಪತನ: ಎಲ್ಲಾ ಪ್ರಯಾಣಿಕರ ಸಾವು

ಕಠ್ಮಂಡು (ನೇಪಾಳ): ನೇಪಾಳ ತಾರಾ ಏರ್ ವಿಮಾನ ಪತನದಿಂದಾಗಿ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಭಾನುವಾರ ಪತನಗೊಂಡ ತಾರಾ ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಯಾಣಿಕರ ಪಟ್ಟಿಯಲ್ಲಿ ಏರ್‌ಲೈನ್ಸ್ ತಿಳಿಸಿದೆ.
ವಿಮಾನದಲ್ಲಿ 13 ನೇಪಾಳಿಗಳು, ನಾಲ್ವರು ಭಾರತೀಯರು ಮತ್ತು ಇಬ್ಬರು ಜರ್ಮನ್ನರು ಇದ್ದರು ಎಂದು ಹೇಳಲಾಗಿದೆ.
ಕೆನಡಾ ನಿರ್ಮಿತ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸೋಮ್‌ಗೆ ಹಾರುತ್ತಿತ್ತು.

ಭಾರತದ ಪುಣೆಯ ನಿವಾಸಿಗಳು
ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ವೈಭವಿ ಬಾಂದೇರ್ಕರ್, ಅಶೋಕ್ ಕುಮಾರ್ ತ್ರಿಪಾಠಿ, ಧನುಷ್ ತ್ರಿಪಾಠಿ ಮತ್ತು ರಿತಿಕಾ ತ್ರಿಪಾಠಿ ಎಂದು ಗುರುತಿಸಲಾಗಿರುವ ಭಾರತೀಯ ಪ್ರಜೆಗಳು ಪುಣೆಯವರು ಎನ್ನಲಾಗಿದೆ. ಅಂತೆಯೇ ಅಪಘಾತದಲ್ಲಿ ನೇಪಾಳದ ಒಂದೇ ಕುಟುಂಬದ ಏಳು ಸದಸ್ಯರು ಸಹ ಸಾವಿಗೀಡಾಗಿದ್ದಾರೆ.
“ತಾರಾ ಏರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಲು ನನಗೆ ದುಃಖವಾಗಿದೆ” ಎಂದು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸೋಮವಾರ ಮಧ್ಯಾಹ್ನ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ ಈಗಾಗಲೇ ಅಗಲಿದ ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದೆ. ವಿಮಾನ ಅಪಘಾತದ ನಂತರ, ನೇಪಾಳದ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವಾಲಯವು ದುರಂತದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಸೋಮವಾರ ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಮೃತ ದೇಹಗಳನ್ನು ಕಠ್ಮಂಡುವಿಗೆ ತಂದ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

ಹಲವಾರು ತುಂಡುಗಳಾಗಿ ಧ್ವಂಸ
ಭಾನುವಾರ ನಾಪತ್ತೆಯಾಗಿದ್ದ ವಿಮಾನ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡ 24 ಗಂಟೆಗಳ ನಂತರ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಅಪಘಾತಗೊಂಡ ವಿಮಾನದ ಫೋಟೋವನ್ನು ಟ್ವೀಟ್ ಮಾಡಿರುವ ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್, ನಾಪತ್ತೆಯಾದ ವಿಮಾನವು ಜೋಮ್ಸಮ್ ವಿಮಾನ ನಿಲ್ದಾಣದ ಬಳಿಯ ಮುಸ್ತಾಂಗ್‌ನಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಭಾನುವಾರ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಿಂದಾಗಿ ಸೇನೆಯು ಕಾರ್ಯಾಚರಣೆಯನ್ನು ಹಿಂತೆಗೆದುಕೊಂಡಿತು ಮತ್ತು ಸೋಮವಾರ ಬೆಳಿಗ್ಗೆ ಕಾರ್ಯಾಚರಣೆಯನ್ನು ಪುನರಾರಂಭಿಸಿತು. ಪೋಖರಾದಿಂದ ಜೋಮ್ಸಮ್ ತಲುಪಲು ವಿಮಾನ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಟೇಕಾಫ್ ಆದ 12 ನಿಮಿಷಗಳಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement