ಸುವರ್ಣಸೌಧದಲ್ಲಿ ಶಾವಿಗೆ ಒಣ ಹಾಕಿ ವಜಾಗೊಂಡ ಮಹಿಳೆಗೆ ಮತ್ತೆ ಸಿಕ್ತು ಕೆಲಸ

ಬೆಳಗಾವಿ :ಇಲ್ಲಿಯ ಸುವರ್ಣ ವಿಧಾನಸೌಧದ ಎದುರು ಶಾವಿಗೆ ಒಣ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳ ಹಿಂದಷ್ಟೇ ಕೆಲಸದಿಂದ ವಜಾಗೊಳಿಸಲಾಗಿದ್ದ ಮಹಿಳೆಯರನ್ನು ಈಗ ಮತ್ತೆ ಕೆಲಸಕ್ಕೆ ನಿಯೋಜಿಸಲಾಗಿದೆ. ಮಲ್ಲಮ್ಮ ಎಂಬ ಮಹಿಳೆಯನ್ನು ಶಾವಿಗೆ ಒಣ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸುವರ್ಣ ಸೌಧದ ಸ್ವಚ್ಛತಾ ಕೆಲಸದಿಂದ ತೆಗೆಯಲಾಗಿತ್ತು. ಇವರು ಸೌಧದಲ್ಲಿ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಾಂವಕ್ಕ ಎಂಬ ಮಹಿಳೆ ಶಾವಿಗೆಯನ್ನು ಮಲ್ಲಮ್ಮಳಿಗೆ ತಂದು ಕೊಟ್ಟಿದ್ದಳು. ಶಾವಿಗೆ ಹಸಿ ಇರುವ ಕಾರಣ ಸುವರ್ಣಸೌಧದ ಎದುರು ಒಣ ಹಾಕಿದ್ದರು. ಇದನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಸುದ್ದಿ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿ ರಾಜ್ಯದ ಗಮನ ಸೆಳೆದಿತ್ತು.
ಅದರ ಬೆನ್ನಿಗೆ ಗುತ್ತಿಗೆದಾರರು ಕೆಲಸದಿಂದ ವಜಾಗೊಳಿಸಿದ್ದರು. ಗುತ್ತಿಗೆದಾರರ ಈ ನಿಲುವಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂ ಎಚ್ಚೆತ್ತಿರುವ ಜಿಲ್ಲಾಡಳಿತ ಇದೀಗ ಮತ್ತೆ ಕೆಲಸಕ್ಕೆ ನಿಯೋಜಿಸುವ ಮೂಲಕ ಅಮಾಯಕ ಮಹಿಳೆಯರು ಅರಿಯದೆ ಮಾಡಿರುವ ತಪ್ಪು ಅಪರಾಧ ಅಲ್ಲ ಎಂದು ತೀರ್ಮಾನಿಸಿ ಕೆಲಸ ನೀಡಿ ಆ ಕುಟುಂಬದ ನೆರವಿಗೆ ಬಂದಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಮನೆ ಕಟ್ಟಿಕೊಡಲಾಗುತ್ತದೆ….
ಸುವರ್ಣಸೌಧದ ಮುಂದೆ ಶಾವಿಗೆ ಒಣ ಹಾಕಿ ಕೆಲಸದಿಂದ ವಜಾಗೊಂಡಿದ್ದ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಮಲ್ಲಮ್ಮ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಆದೇಶ ನೀಡಿರುವುದಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಮಲ್ಲಮ್ಮ ಅವರನ್ನು ಮತ್ತೆ ಸೌಧದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಗುತ್ತಿಗೆದಾರರಿಗೆ ಈಗಾಗಲೇ ಈ ಬಗ್ಗೆ ಸೂಚಿಸಲಾಗಿದೆ. ಮಲ್ಲಮ್ಮ ಅವರ ಸಂಬಳವನ್ನು ಯಾವುದೇ ಕಾರಣಕ್ಕೆ ತಡೆಹಿಡಿಯುವ ಪ್ರಶ್ನೆಯಿಲ್ಲ. ಅವರು ಇಷ್ಟರಲ್ಲೇ ಕೆಲಸಕ್ಕೆ ಹಾಜರಾಗಲಿದ್ದಾರೆ. ಸದ್ಯ ಅವರು ಸಂಬಂಧಿಕರ ಮನೆಯಲ್ಲಿ ಇರುವುದು ತಮ್ಮ ಗಮನಕ್ಕೆ ಬಂದಿದೆ. ಅವರಿಗೆ ಮನೆ ನೀಡುವ ಬೇಡಿಕೆ ಇದೆ. ಬಸ್ತವಾಡ ಗ್ರಾಮದಲ್ಲಿ ಜಾಗ ಕೊಟ್ಟು ಮನೆ ನಿರ್ಮಿಸುತ್ತವೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಾಹಕ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ನಿತೀಶ್ ಪಾಟೀಲ ತಿಳಿಸಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement