ಪರಿಸರ ಸ್ನೇಹಿತ ಬಾಲಚಂದ್ರ ಡಂಗನವರ…ಉಡುಗೊರೆ ನೀಡಲು ಇವರ ಬೈಕ್‌ನಲ್ಲಿ ಯಾವಾಗಲೂ ಇರುತ್ತದೆ ಸಸಿಗಳು..!

ಇಂದು (೫.೦೬.೨೦೨೨) ಪರಿಸರ ದಿನವಾಗಿದ್ದು, ಪರಿಸರ ಸಂರಕ್ಷಣೆಗೆ ಕಾರ‍್ಯಮಾಡುತ್ತಿರುವ ವ್ಯಕ್ತಿಯ ಪರಿಚಯಾತ್ಮಕ ಲೇಖನ)

ದೇಶದಲ್ಲಿ, ರಾಜ್ಯದಲ್ಲಿ, ತಾವಿರುವ ಪ್ರದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ಪರಿಸರ ಸಂರಕ್ಷಣೆಗೆ ನಿರಂತರ ಕಾರ‍್ಯಮಾಡುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತಮ್ಮ ವೃತ್ತಿಯೊಂದಿಗೆ ಕಾರ‍್ಯಮಾಡುತ್ತಿದ್ದಾರೆ. ಅವರೇ ವಿದ್ಯಾನಗರದ ನಿವಾಸಿ ಬಾಲಚಂದ್ರ ವೀರಭದ್ರಪ್ಪ ಡಂಗನವರ.
ಗ್ರೋ ಗ್ರೀನ್ ಪಡೆಲರ್ಸ ಸಂಸ್ಥೆಯ ಮೂಲಕ ೨೦೧೫ ರಿಂದ ಬಾಲಚಂದ್ರ ಅವರು ಸ್ವಚ್ಛ ಭಾರತ ಕಾರ‍್ಯಕ್ಕೆ ಕೈಜೋಡಿಸುತ್ತಿದ್ದಾರೆ. ಮರ ಬೆಳೆಸಿ, ನಾಡು ಉಳಿಸಿ, ಮರ ಬೆಳೆಸಿ, ಬರ ಅಳಸಿ, ಮನೆಗೊಂದು ಮರ, ಶಾಲೆಗೊಂದು ವನ, ಕೊಲ್ಲದಿರಿ ಅಂತರ್ಜಲ, ಹತ್ತು ಬಾವಿಗಳು-ಒಂದು ಕೆರೆಗೆ ಸಮ, ಹತ್ತು ಕೆರೆಗಳು ಒಂದು ಸರೋವರಕ್ಕೆ ಸಮ, ಹತ್ತು ಸರೋವರಗಳು ಒಂದು ಮಗನಿಗೆ ಸಮ, ಹತ್ತು ಮಕ್ಕಳು ಒಂದು ಮರಕ್ಕೆ ಸಮ, ನೀರು ಇಂಧನ ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಮಾಲಿನ್ಯ ಮಾಡದಿರಿ, ಉತ್ತಮ ಆರೋಗ್ಯ ಹೊಂದಿ ಮುಂತಾದ ಪರಿಸರ ಸ್ನೇಹಿ ಉಕ್ತಿಗಳನ್ನು ಹೇಳುತ್ತಾ ಪರಿಸರ ಜಾಗೃತೆಯನ್ನು ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ, ಮೂಡಿಸುತ್ತಿದ್ದಾರೆ.
ಮಾನವರಲ್ಲಿ ಹೆಚ್ಚುತ್ತಿರುವ ದುರಾಸೆ, ಹೊಣೆಗೇಡಿತನ ಫಲವಾಗಿ ಅತಿಯಾದ ಗಣಿಗಾರಿಕೆ, ಮರಳಿನ ಅತಿ ಬಳಕೆ, ರಾಸಾಯನಿಕ ಗೊಬ್ಬರಗಳ ಅತಿ ಹೆಚ್ಚಿನ ಬಳಕೆಯಿಂದ ಭೂಮಿಯನ್ನು ಅಭದ್ರಗೊಳಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸುವ ಬಾಲಚಂದ್ರ ಅವರು ನೀರು ಮತ್ತು ಭೂಮಿಯನ್ನು ರಕ್ಷಿಸಲು ಮತ್ತು ಚಂಡಮಾರುತ ತಡೆಯಲು ಗಿಡಮರಗಳನ್ನು ಬೆಳೆಯಲು ಸಾರ್ವಜನಿಕರಲ್ಲಿ ಜಾಗೃತ ಮೂಡಿಸುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಗಿಡ ಮರಗಳ ಮಾಯವಾಗಿ, ಕಾಂಕ್ರೀಟ್ ಕಟ್ಟಗಳು, ರಸ್ತೆಗಳು, ಭರದಿಂದ ನಿರ್ಮಾಣವಾಗುತ್ತಿವೆ. ಜನಸಂಖ್ಯೆ ಹೆಚ್ಚಳ, ಹೆಚ್ಚುತ್ತಿರುವ ಕೈಗಾರಿಕೆಗಳಿಂದಾಗಿ, ರಸ್ತೆ ಬದಿಯಲ್ಲಿನ ಅಪರೂಪದ ಮತ್ತು ಹಳೆಯ ಗಿಡಗಳು ಅವಸಾನದ ಹಂತವನ್ನು ತಲುಪುತ್ತಿವೆ ಎನ್ನುವ ಅವರು, ವಾಹನಗಳ ಬಳಕೆಯಿಂದ ಹವೆಯಲ್ಲಿನ ಇಂಗಾಲದ ಡೈ ಆಕ್ಸೈಡ್ ಶೇಕಡವಾರು ಹೆಚ್ಚಾಗುತ್ತಿರುವದರಿಂದ ಸಾಂಕ್ರಮಿಕ ಮತ್ತು ಚರ್ಮರೋಗಗಳು ಹೆಚ್ಚಾಗುತ್ತಿರುವದನ್ನು ಸಂಶೋಧನೆಗಳು ತಿಳಿಸಿವೆ ಎನ್ನುತ್ತಾರೆ.
ಮನೆಗಳ ಸುತ್ತಮುತ್ತ ಕರಿಬೇವು, ಸಂಪಿಗೆ, ಮಲ್ಲಿಗೆ, ನುಗ್ಗೆ, ತೆಂಗಿನ ಮರಗಳನ್ನು ದೇವಸ್ಥಾನಗಳ ಸುತ್ತಮುತ್ತ ಬಿಲ್ವ ಪತ್ರೆ, ಆಲದ ಮರ, ಮಾತ್ರ ಹಲಸು ಮರಗಳನ್ನು ದೇವಸ್ಥಾನಗಳ ಸುತ್ತಮುತ್ತ ರಸ್ತೆಗಳ ಬದಿಯಲ್ಲಿ ಹಲಸೆ, ಅತ್ತಿ, ಅರಳಿ, ನೇರಳೆ ಮರಗಳನ್ನು ಬೆಳೆಸಿದಲ್ಲಿ ಪ್ರಕೃತಿ ಸಮತೋಲನ ಕಾಯ್ದುಕೊಳ್ಳುಬಹುದು ಎನ್ನುವ ಬಾಲಚಂದ್ರ ಅವರು ಇವುಗಳಿಂದ ಹಣ್ಣು, ಹೂವು, ನೆರಳು, ತರಕಾರಿ, ಔಷಧಗಳ ಪ್ರಯೋಜನ ಪಡೆಯ ಬಹುದೆನ್ನುತ್ತಾರೆ. ಗಿಡ-ಮರಗಳ ಸಂರಕ್ಷಣೆ ಬೃಹತ್ ಅಂದೋಲನ ಪರಿಸರ ರಕ್ಷಣೆ ಸಾಧ್ಯವೆನ್ನುತ್ತಾರೆ ಅವರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ನಗರದಲ್ಲಿ ಹೆಚ್ಚುತ್ತಿರುವ ಚಿಕ್ಕ , ಮಧ್ಯಮ, ಮತ್ತು ಬೃಹತ್ ಮಾರುಕಟ್ಟೆಗಳ ಸರಕುಗಳ ವಹಿವಾಟದಿಂದಾಗಿ, ಪ್ಲಾಸ್ಟಿಕ್ ಉಪಯೋಗ ಹೆಚ್ಚುತ್ತಿದ್ದು, ಮತ್ತು ಅಸ್ಪತ್ರೆಗಳ ತ್ಯಾಜ್ಯ ಬೆಳೆಯುತ್ತಿದ್ದು, ಬೃಹತ್ ಸಮಸ್ಯೆಯಾಗುತ್ತಿದೆ. ಅದನ್ನು ನಿರ್ವಹಿಸಲು ಪರಿಸರ ಸ್ನೇಹಿ ಚೀಲಗಳನ್ನು ಸೆಣಬಿನಿಂದ ಮಾಡಿದ ಚೀಲಗಳನ್ನು ಉಪಯೋಗಿಸಲು ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಬಾಲಚಂದ್ರ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕೆಎಲ್‌ಇ ಸಂಸ್ಥೆಯ ಎಂ.ಆರ್. ಸಾಖರೆಯಿಂದ ಪಡೆದಿದ್ದು ಬಿ.ಎ. ಪದವಿಯನ್ನು ಪಡೆದು ಎಲ್.ಐ.ಸಿ. ಮತ್ತು ನ್ಯೂ ಇಂಡಿಯಾ ಅಶ್ಯುರನ್ಸ್ ಸೇವೆ, ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಮಕ್ಕಳ ಮತ್ತು ಸಾರ್ವಜನಿಕರು ಜನ್ಮದಿನ, ಗೃಹಪ್ರವೇಶ, ಪದೋನ್ನತಿ, ನಿವೃತ್ತಿ , ಪೌರಕಾರ್ಮಿಕರು, ಶಾಲಾ, ಕಾಲೇಜು, ಪೋಲಿಸರು, ಪತ್ರಕರ್ತರು, ದೇವಸ್ಥಾನ ಚರ್ಚ್‌, ಮಸೀದಿ, ಚುನಾಯಿತ ಪ್ರತಿನಿಧಿಗಳು ಮುಂತಾದವರಿಗೆ ಈವರೆಗೆ ನರ್ಸರಿಗಳಿಂದ ೧೬,೦೦೦ ಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ಪರಿಸರ ಕಾರ‍್ಯಕ್ಕೆ ಕೈಜೋಡಿಸುತ್ತಿದ್ದಾರೆ.

ಪೌರಕಾರ್ಮಿಕರಿಗೆ, ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸೋಪು, ಖಾದಿ ಟಾವೇಲಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ಸದಾ ಕಾಲ ಸಸಿಗಳನ್ನು ಇಟ್ಟುಕೊಂಡು ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಸ್ನೇಹಿತರಾದ ಸುರೇಶ ಚಿಂದಿ, ರಾಜು ರಾಜೋಳ್ಳಿ, ಭವಾನಿ ಶಂಕರ, ರಾಜೇಂದ್ರ ಎಡನ್, ಮಗ ವೃಷಭ ಅವರು ಬಾಲಚಂದ್ರ ಅವರ ಕಾರ‍್ಯಗಳಿಗೆ ಸದಾ ಕೈಜೋಡಿಸುತ್ತಾರೆ.
ತಂದೆ ವೀರಭದ್ರಪ್ಪ, ತಾಯಿ ವಿಜಯಲಕ್ಷ್ಮಿ ಆಶೀರ್ವಾದ, ಪತ್ನಿ ಸುಪ್ರಿಯಾ, ಸಹೋದರರಾದ ಮೃಜ್ಯುಂಜಯ, ಸದಾನಂದ, ಶಶಿಶೇಖರ, ಸಹೋದರಿ, ಸುಮಂಗಲಾ ಸ್ನೇಹಿತರ ಸಹಕಾರದಿಂದಾಗಿ ಪರಿಸರ ರಕ್ಷಣೆ ಸಾಧ್ಯವಾಗಿದೆ ಎಂದು ಸೌಜನ್ಯದಿಂದಲೇ ಹೇಳುತ್ತಾರೆ. ಬಾಲಚಂದ್ರ ಡಂಗನವರ ಅವರು ಸಸಿಗಳನ್ನು ಪಡೆದುಕೊಂಡಿರುವ ನಾಗರಿಕರು ಪ್ರತಿದಿನವೂ ಸಸಿಗಳು ಹೂವುಗಳನ್ನು ಬಿಟ್ಟಿರುದನ್ನು ಮತ್ತು ಅದನ್ನು ದೇವರಿಗೆ ಅರ್ಪಿಸುತ್ತಿರುವದನ್ನು, ಕೆಲವು ಮಕ್ಕಳು ಸಸಿಗಳಿಗೆ ಪ್ರತಿದಿನವೂ ನೀರು ಹಾಕಿ, ಬೆಳೆಯುತ್ತಿರುವ ದೃಶ್ಯಾವಳಿಗಳನ್ನು ವ್ಯಾಟ್ಸ್ಪ್ ಮೂಲಕ ಹಂಚಿಕೋಳ್ಳುತ್ತಿದ್ದಾರೆ ಎನ್ನುತ್ತಾರೆ ಬಾಲಚಂದ್ರ ಅವರು.
ಕಲುಷಿತ ವಾತಾವರಣದ ಇಂದಿನ ದಿನಮಾನಗಳಲ್ಲಿ ಉಸಿರಾಡಲು ಶುದ್ಧವಾದ ಹವೆ, ಕುಡಿಯಲು ಶುದ್ಧವಾದ ನೀರು, ತಿನ್ನಲು ಕಲಬರಕೆಯಾಗದ ಶುಚಿರುಚಿಯಾದ ತಿನಿಸು ಎಲ್ಲರಿಗೂ ದೊರೆಯಲು ಪರಿಸರದಿಂದ ಮಾತ್ರ ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ ಎನ್ನುತ್ತಾರೆ ಬಾಲಚಂದ್ರ ಡಂಗನವರು. ಆಸಕ್ತರು ಬಾಲಚಂದ್ರ ಡಂಗನವರ ೩೦೨, ಫೇಸಪಿಕ್ ಪರ್ಲ ಅಪಾರ್ಟಮೆಂಟ್, ವಿದ್ಯಾನಗರ, ಹುಬ್ಬಳ್ಳಿ -೫೮೦೦೩೧ ಈ ಮೇಲ್; [email protected] ಸಂಪರ್ಕಿಸಬಹುದು.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement