ಪಿಯುಸಿ ಪಠ್ಯ ಪರಿಷ್ಕರಣೆ: ರೋಹಿತ್‌ ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ

ಬೆಂಗಳೂರು:  ವಿವಾದದ ನಂತರ ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ಚಿಂತಕ ರೋಹಿತ್​ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ.
ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚನೆಯ ಆದೇಶವನ್ನು ಶಿಕ್ಷಣ ಇಲಾಖೆ ಹಿಂಪಡೆದು ಸಮಿತಿಯನ್ನು ವಿಸರ್ಜಿಸಿದೆ.
ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಮಾಡಿದ್ದ ಶಿಕ್ಷಣ ಇಲಾಖೆಯು ದ್ವೀತಿಯ ಪಿಯುಸಿಯ `ಹೊಸ ಧರ್ಮಗಳ ಉದಯ’ ಪಠ್ಯ ಮಾತ್ರ ಪರಿಷ್ಕರಣೆಗೆ ವಹಿಸಿತ್ತು. ಶಾಲಾ ಪಠ್ಯ ಪುಸ್ತಕ ಗೊಂದಲ ಉಂಟಾದ ಹಿನ್ನಲೆಯಲ್ಲಿ ಪಿಯುಸಿ ಪಠ್ಯ ಪರಿಷ್ಕರಣೆ ಕೈ ಬಿಡಲು ತೀರ್ಮಾನಿಸಿ, ರೋಹಿತ್ ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದೇ ಇರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ದ್ವೀತಿಯ ಪಿಯುಸಿಯ ಇತಿಹಾಸದ ಒಂದು ಪಠ್ಯವನ್ನು ಪರಿಷ್ಕರಣೆಗಾಗಿ ಸಮಿತಿಗೆ ನೀಡಲಾಗಿತ್ತು. ಈಗಾಗಲೇ ಮುಖ್ಯಮಂತ್ರಿಗಳು ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿರುವುದರಿಂದ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯೂ ವಿಸರ್ಜನೆ ಆಗಿದೆ. ದ್ವಿತೀಯ ಪಿಯುಸಿಯ ಒಂದು ಪಠ್ಯವನ್ನೂ ಸಹ ಪರಿಷ್ಕರಣೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯನ್ನ ಜನಾಭಿಪ್ರಾಯಕ್ಕೆ ಬಿಡುತ್ತೇವೆ. ಯಾವ ಪಠ್ಯದಲ್ಲಿ ತಪ್ಪಾಗಿದೆ? ಎಲ್ಲಿ ಲೋಪ ಉಂಟಾಗಿದೆಯೋ ಅದನ್ನು ಸರಿ ಮಾಡುತ್ತೇವೆ. ಜನಾಭಿಪ್ರಾಯದಲ್ಲಿ ಏನಾದರೂ ಆಕ್ಷೇಪಗಳು ಬಂದರೆ ಅದನ್ನ ಸ್ವೀಕಾರ ಮಾಡಿ, ಸರಿ ಇದ್ದರೆ ಅದನ್ನ ಪರಿಷ್ಕರಣೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 3 ರಂದು ವಿಸರ್ಜಿಸಿದ್ದರು. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದ ಮುಖ್ಯಮಂತ್ರಿಗಳು, ‘ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ‘ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ’ ಎಂದೂ ಅವರು ಹೇಳಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement