ಮಂಚಿಕೇರಿ: ಬೇಡ್ತಿ ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಾಳೆ ಬೃಹತ್ ಸಮಾವೇಶ

ಶಿರಸಿ: ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನದ ಅಂಗವಾಗಿ ಮಂಚೀಕೇರಿ ಸಮಾಜ ಮಂದಿರದ ಆವರಣದಲ್ಲಿ ನಾಳೆ, ಜೂನ್‌ 14 ರಂದು ಮಧ್ಯಾಹ್ನ 3 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಮಂಚೀಕೇರಿ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣಿಗಳು, ಪರಿಸರ ತಜ್ಞರು, ರೈತರು, ಸಂಘ ಸಂಸ್ಥೆಗಳು, ಸಹಕಾರಿ ಧುರೀಣರು ನೂರಾರು ಗ್ರಾಮ ಪಂಚಾಯತ ಜನ ಪ್ರತಿನಿಧಿಗಳು, ಮಾತೃ ಮಂಡಳಿಗಳು, ಗ್ರಾಮ ಅರಣ್ಯ ಸಮಿತಿಗಳು ಜೀವ ವೈವಿಧ್ಯ ಸಮಿತಿಗಳು, ಸೀಮಾ ಪರಿಷತ್‌ನವರು ಪಾಲ್ಗೊಳ್ಳಲಿದ್ದಾರೆ
ಪೂಜ್ಯ ಸೋಂದಾ ಜೈನ ಮಠದ ಸ್ವಾಮೀಜಿಯವರು, ಸಚಿವರಾದ ಶ್ರೀನಿವಾಸ ಪುಜಾರಿ, ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ.ದೇಶಪಾಂಡೆ, ರೂಪಾಲಿ ನಾಯ್ಕ, ಶಾಂತಾರಾಮ ಸಿದ್ಧಿ, ವಿ.ಎಸ್. ಪಾಟೀಲ್, ಪ್ರಮೋದ ಹೆಗಡೆ ರಾಜಕೀಯ ಮುಖಂಡರಾದ ಭೀಮಣ್ಣ ನಾಯ್ಕ, ಶಶಿಭೂಷಣ ಹೆಗಡೆ ಅವರನ್ನು ಆಹ್ವಾನಿಸಲಾಗಿದೆ. ಬೇಡ್ತಿ-ಅಘನಾಶಿನಿ ಕಣಿವೆ ಪ್ರದೇಶದ ಜನತೆ ಜೂನ 14 ರಂದು ಮಂಚೀಕೇರಿಗೆ ಬಂದು ತಮ್ಮ ಬಲವಾದ ಧ್ವನಿ ಎತ್ತಬೇಕು ಎಂದು ಸಮಿತಿಯ ಅಧ್ಯಕ್ಷ ವಿ.ಎನ್.ಹೆಗಡೆ ಹಾಗೂ ಸಮಾವೇಶದ ಸಂಚಾಲಕ ಶ್ರೀಪಾದ ಶಿರನಾಲಾ ಕರೆ ನೀಡಿದ್ದಾರೆ.

ರಾಜ್ಯ ಸರ್ಕಾರವು ಬಯಲು ನಾಡಿನ ಹಲವು ಪ್ರದೇಶಗಳಿಗೆ ನೀರಾವರಿ ಸೌಕರ್ಯ ಒದಗಿಸಲು ಈಗ ಬೇಡ್ತಿ-ವರದಾ-ಧರ್ಮಾ ನದಿ ಜೋಡಣೆ ಯೋಜನೆ ಪ್ರಾರಂಭಿಸುವ ಪ್ರಯತ್ನದಲ್ಲಿ ನಡೆಸಿದೆ. ಈ ಯೋಜನೆಯ ಪ್ರಮುಖ ಅಂಶಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
* ಶಿರಸಿ ತಾಲೂಕಿನ ಸಾಲ್ಕಣಿ-ವಾನಳ್ಳಿ ನಡುವೆ ಇರುವ ಶಿರ್ಲೇಬೈಲು ಹಳ್ಳಿಯಲ್ಲಿ ಪಟ್ಣದಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ಸಹಸ್ರಲಿಂಗದ ಅಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು.
* ಶಿರಸಿ ತಾಲೂಕಿನ ಸಹಸ್ರಲಿಂಗದ ಮೇಲ್ಭಾಗದಲ್ಲಿ ಶಾಲ್ಮಲಾ ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ವರದಾ ನದಿಗೆ ನೀರನ್ನು ಪಂಪ್ ಮಾಡುವುದು.
* ಯಲ್ಲಾಪುರ ತಾಲೂಕಿನ ಬೇಡ್ತಿ ಸೇತುವೆಯ ಕೆಳಭಾಗದಲ್ಲಿ ಸುರಮನೆ ಹಳ್ಳಿಯಲ್ಲಿ ಬೇಡ್ತಿ ನದಿಗೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ಮುಂಡಗೋಡು ತಾಲೂಕಿನ ಮಳಗಿ ಸಮೀಪದ ಧರ್ಮಾ ಆಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು.

ಹೀಗೆ ನೀರನ್ನು ಪಂಪ್ ಮಾಡುವುದಕ್ಕೆ ಅಂದಾಜು 399 ಮೆಗಾವ್ಯಾಟ್ ವಿದ್ಯುತ್ ಅಗತ್ಯ ಎಂದು ಅಂದಾಜು ಮಾಡಲಾಗಿದೆ. ಈ ಮೂರು ಆಣೆಕಟ್ಟುಗಳಿಂದ ಅನುಕ್ರಮವಾಗಿ 6.5 ಕಿಮಿ, 6.7 ಕಿಮಿ ಮತ್ತು 4.23 ಕಿಮಿ ಉದ್ದದ ಸುರಂಗ ನಿರ್ಮಾಣ ಮಾಡಲಾಗುತ್ತದೆ. ಒಟ್ಟೂ 52.40 ಕೋಟಿ ಘನ ಮೀಟರ್ ನೀರನ್ನು ಸಂಗ್ರಹಿಸಿ ಪಂಪ್ ಮಾಡಲಾಗುತ್ತದೆ ಹಾಗೂ ಕಲ್ಯಾಣ ಕರ್ನಾಟಕ ಪ್ರಾಂತ್ಯದ ತುಂಗಭದ್ರಾ ಎಡದಂಡೆ ಪ್ರದೇಶದ 1,06,220 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸಲಾಗುತ್ತದೆ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವರದಿಯಲ್ಲಿ ಯೋಜನೆಯ ಪೂರ್ವದಲ್ಲಿ ಕಾನೂನಾತ್ಮಕವಾಗಿ ಮಾಡಲೇಬೇಕಾಗಿದ್ದ ಪರಿಸರ ಪರಿಣಾಮದ ಅಧ್ಯಯನವನ್ನು ನಡೆಸಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಅಣೆಕಟ್ಟುಗಳ ಎತ್ತರವನ್ನು ನಮೂದಿಸಿಲ್ಲ. ಆದರೆ ಈ ಯೋಜನೆಯಿಂದ ಕೇವಲ 243 ಹೆಕ್ಟೇರ್ ಅರಣ್ಯ ನಾಶ ಆಗುತ್ತದೆ ಎಂದು ತೋರಿಸಲಾಗಿದೆ; ಸುರಂಗ ನಿರ್ಮಾಣಕ್ಕೆ, ವಿದ್ಯುತ್ ಲೈನ್ ಜೋಡಣೆಗೆ, ಪೈಪ್ ಲೈನ್ ಅಳವಡಿಕೆಗೆ ಎಷ್ಟು ಅರಣ್ಯ ಅಗತ್ಯ ಎನ್ನುವ ವಿವರ ಇಲ್ಲ. ನೀರನ್ನು ತಡೆದು ನಿಲ್ಲಿಸುವುದರಿಂದ ಅಕ್ಕಪಕ್ಕದ ತೋಟಗದ್ದೆಗಳ ಮೇಲೆ ಉಂಟಾಗುವ ದುಃಷ್ಪರಿಣಾಮ ಕುರಿತು ಉಲ್ಲೇಖವೇ ಇಲ್ಲ. ಸರ್ಕಾರವೇ ಘೋಷಿಸಿರುವ ಶಾಲ್ಮಲಾ ಸಂರಕ್ಷಿತ ಪ್ರದೇಶ ಅರಣ್ಯೇತರ ಚಟುವಟಿಕೆಗಳ ಕೇಂದ್ರವಾಗಲಿದೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಬೇಡ್ತಿ ನದಿಯಿಂದ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಕೋಟ್ಯಾಂತರ ಹಣ ವ್ಯಯವಾಗಿ, ಕುಡಿಯುವ ನೀರು ಪೂರೈಸಲಾಗದೇ ಯೋಜನೆ ವಿಫಲವಾಗಿದೆ. ಅದೇ ನದಿಯಿಂದ ಪೈಪಲೈನ್ ಮೂಲಕ ಮುಂಡಗೋಡು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ನೂರಾರು ಕೋಟಿ ರೂಪಾಯಿ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಹೀಗಿರುವಾಗ ಉದ್ದೇಶಿತ ಯೋಜನೆಗೆ ಬಳಸುವ ನೀರು ಎಲ್ಲಿಂದ ದೊರಕುತ್ತದೆ ಎನ್ನುವುದು ಯಕ್ಷಪ್ರಶ್ನೆ ಎಂದು ವಿ.ಎನ್.ಹೆಗಡೆ ಹಾಗೂ ಶ್ರೀಪಾದ ಶಿರನಾಲಾ ಹೇಳಿದ್ದಾರೆ.
2011ರಲ್ಲಿ ಪ್ರಾರಂಭಿಸಲಾದ ಕೋಲಾರಕ್ಕೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಈವರೆಗೆ 22,000 ಕೋಟಿ ರೂ.ಗಳಿಗಿಂತ ಅಧಿಕ ಹಣ ಖರ್ಚಾದರೂ ನೀರು ಹರಿಯದಿರುವ ವಾಸ್ತವಿಕ ಘಟನೆ ಎಲ್ಲರಿಗೂ ತಿಳಿದಿರುವ ಸಂಗತಿ. ವಸ್ತುಸ್ಥಿತಿ ಹೀಗಿರುವಾಗ ಅದೇ ಮಾದರಿಯಲ್ಲಿ ಬೇಡ್ತಿ-ವರದಾ-ಧರ್ಮಾ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನ ಮಾಡಲು ಸರಕಾರ ಮುಂದಾಗುತ್ತಿರುವುದು ಒಂದು ವಿಪರ್ಯಾಸ. ಹೀಗೆ ಬಯಲು ಸೀಮೆಯ ಜನತೆಗೆ ನೀರನ್ನು ಒದಗಿಸುವ ಹುಸಿ ಭರವಸೆಯನ್ನು ಬಿತ್ತಿ ಮಲೆನಾಡಿನ ಅರಣ್ಯವನ್ನು, ಕೃಷಿಯನ್ನು ಹಾಗೂ ಜನಜೀವನವನ್ನೂ ಅತಂತ್ರಗೊಳಿಸುವ ಇಂತಹ ಯೋಜನೆಗಳ ಬಗ್ಗೆ ಜನತೆ ಎಚ್ಚೆತ್ತುಕೊಂಡು ತಮ್ಮ ವಿರೋಧವನ್ನು ಒಕ್ಕೊರಲಿನಿಂದ ಗಟ್ಟಿಯಾಗಿ ಹೇಳಲೇಬೇಕಾದ ಅವಶ್ಯಕತೆ ಇದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಬೇಡ್ತಿ ಮತ್ತು ಅಘನಾಶಿನಿ ನದಿಗಳ ನೀರನ್ನು ಬಯಲು ಪ್ರದೇಶಗಳಿಗೆ ಹರಿಸುವ ಸರ್ಕಾರದ ನಿಲುವನ್ನು ಕಳೆದ 17 ವರ್ಷಗಳಿಂದ ವಿರೋಧಿಸಲಾಗುತ್ತಿದೆ. ಕಳೆದ ವರ್ಷ 24-03-2021ರಂದು ಈ ಕುರಿತು ಶಿರಸಿಯಲ್ಲಿ ತಜ್ಞರ ಸಭೆ ನಡೆಸಿ ಸರ್ಕಾರಕ್ಕೆ ಪ್ರತಿರೋಧವನ್ನು ವ್ಯಕ್ತಪಡಿಸಲಾಗಿತ್ತು. ಆದರೂ ಸರ್ಕಾರ ಈಗಾಗಲೇ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್.) ಸಿದ್ಧಪಡಿಸಿ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಈ ಭಾಗವೂ ಮತ್ತೊಂದು ಎತ್ತಿನಹೊಳೆ ಆಗಬಾರದು ಎಂದಾದರೆ ನಾವು ಈಗಲೇ ಜಾಗೃತರಾಗಬೇಕಾದ ತುರ್ತು ಅನಿವಾರ್ಯತೆ ಇದೆ.
ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಈ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ದೇಶಿತ ಯೋಜನೆ ತಡೆಗಟ್ಟಲು ಗಟ್ಟಿಯಾಗಿ ನಿಲ್ಲಬೇಕು ಎಂದು ಸಮಿತಿಯ ಅಧ್ಯಕ್ಷ ವಿ.ಎನ್.ಹೆಗಡೆ ಹಾಗೂ ಸಮಾವೇಶದ ಸಂಚಾಲಕ ಶ್ರೀಪಾದ ಶಿರನಾಲಾ  ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement