ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನೆ ಬಂಡಾಯ ಶಾಸಕರ ನಿವಾಸಕ್ಕೆ ಬಿಗಿ ಭದ್ರತೆ, ಜುಲೈ 10 ವರೆಗೆ ಮುಂಬೈನಲ್ಲಿ 144 ಸೆಕ್ಷನ್ ಜಾರಿ

ಮುಂಬೈ : ರಾಜ್ಯದಲ್ಲಿ ಶಿವಸೇನೆ ಹಾಗೂ ಶಿವಸೇನೆ ಬಂಡಾಯ ಶಾಸಕರ ನಡುವಿನ ರಾಜಕೀಯ ಸಮರದ ಮಧ್ಯೆ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಮುನ್ನೆಚರಿಕೆ ಕ್ರಮವಾಗಿ ಪೊಲೀಸರು ಜುಲೈ 10ರ ವರೆಗೂ ಮುಂಬೈನಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಬಾಳಾ ಠಾಕ್ರೆ ಸ್ಥಾಪಿಸಿದ ಶಿವಸೇನೆ ಇಬ್ಭಾಗದ ದಾರಿಯಲ್ಲಿ ಸಾಗಿದ್ದು, ಪಕ್ಷದ ಬಂಡಾಯ ಶಾಸಕರು ತಮ್ಮ ಗುಂಪಿಗೆ ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡಿದ್ದು ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬೆಂಬಲಿಗರು, ಬಂಡಾಯ ಶಾಸಕರ ಬ್ಯಾನರ್​​​ಗಳನ್ನು ವಿರೂಪಗೊಳಿಸಿ, ಕೆಲವೆಡೆ ಕಲ್ಲು ತೂರಾಟ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ ರಾಜಕೀಯ ಪಕ್ಷಗಳು, ಮುಖಂಡರ ಕಚೇರಿಗಳು ಮತ್ತು ನಿವಾಸಗಳ ಹೊರಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ವಿಷಯ, ಸಂದೇಶಗಳು, ವೀಡಿಯೊಗಳನ್ನು ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಜುಲೈ 10 ರ ವರೆಗೆ ಮುಂಬೈನಲ್ಲಿ ಸೆಕ್ಷನ್ 144 ಸೆಕ್ಷನ್ ಮುಂದುವರೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಡಾಯ ಶಾಸಕರ ನಾಯಕ, ಸಚಿವ ಏಕ್​ನಾಥ್ ಶಿಂಧೆ ಅವರು ತಮಗೆ 40ಕ್ಕೂ ಹೆಚ್ಚು ಶಿವಸೇನೆ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದು, ಆದ್ದರಿಂದ ನಮ್ಮದೇ ನಿಜವಾದ ಶಿವಸೇನೆ ಎಂದು ಬಂಡಾಯ ಶಾಸಕರ ಗುಂಪು ಹೇಳಿಕೊಳ್ಳುತ್ತಿದೆ. ಸದ್ಯಕ್ಕೆ ಬಂಡಾಯ ಶಾಸಕರು ಅಸ್ಸಾಂ ರೆಸಾರ್ಟ್​ವೊಂದರಲ್ಲಿ ವಾಸ್ತವ್ಯ ಮಾಡಿದ್ದಾರೆ. ಎಂವಿಎ ಹಿಡಿತದಿಂದ ಪಕ್ಷವನ್ನು ಉಳಿಸಿಕೊಳ್ಳಲು ನಾನು ಹೋರಾಡುತ್ತಿದ್ದೇನೆ. ದಯವಿಟ್ಟು ಎಲ್ಲಾ ಶಿವಸೇನೆ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಂಡಾಯ ಶಿವಸೇನೆ ನಾಯಕ ಏಕ್​​​ನಾಥ್​​ ಶಿಂಧೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಏತನ್ಮಧ್ಯೆ ಶನಿವಾರ ಮುಂಬೈನಲ್ಲಿ ನಡೆದ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಯಾರೂ ನನ್ನ ತಂದೆಯ ಹೆಸರನ್ನು ಬಳಸಬೇಡಿ, ನಿಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳಿ. ಪಕ್ಷದ ಆದೇಶ ಮೀರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ, ಅಸ್ಸಾಂನ ಗುವಾಹತಿ ರೆಸಾರ್ಟ್​ನಲ್ಲಿ ತಂಗಿರುವ ಕೆಲವು ಬಂಡಾಯ ಶಾಸಕರ ಪತ್ನಿಯರ ಸಂಪರ್ಕಿಸಿ, ಶಾಸಕರ ಮನವೊಲಿಸುವಂತೆ ಮನವಿ ಮಾಡಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement