16 ಬಂಡಾಯ ಶಾಸಕರ ವಿರುದ್ಧ ಶಿವಸೇನಾ ಕ್ರಮ ಆರಂಭಿಸಿದ ಮಧ್ಯೆಯೇ ಏಕನಾಥ ಶಿಂಧೆ ಪಾಳಯ ಸೇರಿದ ಮತ್ತೊಬ್ಬ ಸಚಿವ…!

ಮುಂಬೈ: ಶಿವಸೇನೆ ನಾಯಕತ್ವಕ್ಕೆ ಮತ್ತೊಂದು ಹಿನ್ನಡೆಯಾಗಿ ಮತ್ತೊಬ್ಬ ಸಚಿವರು ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಸೇರಿದ್ದಾರೆ.
ಕಳೆದ ನಾಲ್ಕು ದಿನಗಳಿಂದಐಷಾರಾಮಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಬೀಡುಬಿಟ್ಟಿರುವ ಗುವಾಹಟಿಗೆ ಬಂದಿಳಿದ ಉದಯ್ ಸಮಂತ್ ಅವರು, ಉದ್ಧವ್ ಠಾಕ್ರೆ ಗುಂಪನ್ನು ತೊರೆದ ಒಂಬತ್ತನೇ ಸಚಿವರಾಗಿದ್ದಾರೆ. ಈ ಮೊದಲು ಎಂಟು ಸಚಿವರು ಉದ್ಧವ್‌ ಠಾಕ್ರೆ ಗುಂಪನ್ನು ತೊರೆದಿದ್ದಾರೆ.
ಏತನ್ಮಧ್ಯೆ, ಕನಿಷ್ಠ 20 ಬಂಡಾಯ ಶಾಸಕರು ಪಕ್ಷದ ಅಧಿಕೃತ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಗಳು ಸೂಚಿಸಿವೆ. “ಸುಮಾರು 20 (ಬಂಡಾಯ) ಶಾಸಕರು ಶಿವಸೇನೆಯೊಂದಿಗೆ ಸಂಪರ್ಕದಲ್ಲಿದ್ದಾರೆ. ವಿಧಾನಸಭಾ ಫ್ಲೋರ್‌ ಟೆಸ್ಟ್‌ ಸಮಯದಲ್ಲಿ ಅವರು ನಮಗೆ ಮತ ಹಾಕುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ಉನ್ನತ ಮೂಲವನ್ನು ಉಲ್ಲೇಖಿಸಿ ThePrint ವರದಿ ಮಾಡಿದೆ.

ಠಾಕ್ರೆ ಪಾಳಯ ಈಗಾಗಲೇ ಬಂಡುಕೋರರ ವಿರುದ್ಧ ಕ್ರಮ ಕೈಗೊಂಡಿದ್ದು, 16 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದೆ. ಇನ್ನು ಕೆಲವು ಸಚಿವರ ಖಾತೆಯನ್ನೂ ಕಿತ್ತುಕೊಳ್ಳಲು ಪಕ್ಷ ಮುಂದಾಗಿದೆ. ನಗರಾಭಿವೃದ್ಧಿ ಸಚಿವಾಲಯದ ಮುಖ್ಯಸ್ಥರಾಗಿರುವ ಶಿಂಧೆ, ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವ ಗುಲಾಬ್‌ ರಾವ್ ಪಾಟೀಲ್ ಮತ್ತು ಕೃಷಿ ಸಚಿವ ದಾದಾ ಭೂಸೆ ಹಾಗೂ ರಾಜ್ಯ ಸಚಿವರಾದ ಸಂಭುರಾಜೇ ದೇಸಾಯಿ ಮತ್ತು ಅಬ್ದುಲ್ ಸತ್ತಾರ್ ಅವರು ತಮ್ಮ ಖಾತೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೋಮವಾರ ರಾತ್ರಿ ಶಿಂಧೆ ಬಂಡಾಯದ ಬಾವುಟ ಹಾರಿಸಿದಂದಿನಿಂದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮಹಾ ಅಘಾಡಿ ಮೈತ್ರಿ ಸರ್ಕಾರ ತತ್ತರಿಸಿ ಹೋಗಿದೆ.

ಪ್ರಮುಖ ಸುದ್ದಿ :-   ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

ತಮ್ಮ ಅನರ್ಹತೆ ಕೋರಿ ಸಲ್ಲಿಸಿರುವ ದೂರುಗಳಿಗೆ ಜೂನ್ 27 ರ ಸಂಜೆಯೊಳಗೆ ಲಿಖಿತ ಉತ್ತರ ನೀಡುವಂತೆ ಶಿಂಧೆ ಸೇರಿದಂತೆ 16 ಬಂಡಾಯ ಸೇನಾ ಶಾಸಕರಿಗೆ ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಶನಿವಾರ ‘ಸಮನ್ಸ್’ ಜಾರಿ ಮಾಡಿದ್ದರು. “ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ನಡೆಯುತ್ತಿದೆ, ಹಲವು ಶಾಸಕರು ಪಕ್ಷಾಂತರ ಮಾಡಿ ಅಸ್ಸಾಂಗೆ ಹೋಗಿದ್ದಾರೆ. ನಾವು ಅವರ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಿದ್ದೇವೆ ಮತ್ತು ಇದುವರೆಗೆ 16 ಶಾಸಕರಿಗೆ ನೋಟಿಸ್ ನೀಡಲಾಗಿದೆ ಎಂದು ಶಿವಸೇನಾ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.
ಏತನ್ಮಧ್ಯೆ, ಕನಿಷ್ಠ 15 ಬಂಡಾಯ ಶಿವಸೇನೆ ಶಾಸಕರಿಗೆ ಸಿಆರ್‌ಪಿಎಫ್ ಕಮಾಂಡೋಗಳ ವೈ-ಪ್ಲಸ್ ಭದ್ರತೆಯನ್ನು ಕೇಂದ್ರವು ಭಾನುವಾರ ವಿಸ್ತರಿಸಿದೆ. ಭದ್ರತೆ ಒದಗಿಸಿದವರಲ್ಲಿ ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್, ಲತಾಬಾಯಿ ಸೋನಾವಾನೆ, ಪ್ರಕಾಶ್ ಸುರ್ವೆ ಮತ್ತು ಇತರ 10 ಮಂದಿ ಸೇರಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement