ವಿವಾದಿತ ಪಠ್ಯಗಳ ಪರಿಷ್ಕರಣೆಗೆ ಸರ್ಕಾರದ ಆದೇಶ: ಕೈ ಬಿಟ್ಟ ಅಂಶಗಳ ಸೇರ್ಪಡೆ

posted in: ರಾಜ್ಯ | 0

ಬೆಂಗಳೂರು : ರೋಹಿತ್​ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆ ವಿವಾದದಿಂದ ಭುಗಿಲೆದ್ದಿದ್ದ ಪಠ್ಯ ವಿವಾದಕ್ಕೆ ಸರ್ಕಾರ ತೆರೆ ಎಳೆದಿದ್ದು ಕೆಲವೊಂದಷ್ಟಕ್ಕೆ ತಿದ್ದುಪಡಿ ಮಾಡಲು ಆದೇಶ ಹೊರಡಿಸಿದೆ.
ವಿವಾದಿತ 8 ಅಂಶಗಳು ತಿದ್ದುಪಡಿಯಾಗಲಿದ್ದು, ಮಕ್ಕಳ ವಯೋಮಾನ ಮೀರಿದ ಪಠ್ಯ ಬೋಧನೆಯನ್ನು ಕೈಬಿಡಲು ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ, ಬಿಟ್ಟುಹೋದ ಕೆಲವು ವಿಷಯಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗುತ್ತಿದೆ.
ಸ್ವಾಮೀಜಿಗಳು, ಸಂಘ ಸಂಸ್ಥೆಗಳ ವಿರೋಧ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏನೇ ಪರಿಷ್ಕರಣೆ ಇದ್ದರೂ ಮಾರ್ಪಾಡು ಮಾಡುವುದಾಗಿ ತಿಳಿಸಿದ್ದರು. ಭರವಸೆಯಂತೆ ಈಗ ಅವರು ನೀಡಿದ ಸೂಚನೆ‌ ಮೇರೆಗೆ ತಿದ್ದುಪಡಿಗಳನ್ನು ಸೇರಿಸಿ ಪಠ್ಯಗಳ ಮಾರ್ಪಾಡಿಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

advertisement

* 9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿರುತ್ತದೆ. ಅದರಲ್ಲಿ ಪರಿಷ್ಕೃತ ಪಠ್ಯದಲ್ಲಿ ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನದ ಶಿಲ್ಪಿ ಎಂಬ ವಾಕ್ಯವು ಇಲ್ಲವಾಗಿದ್ದು, ಎಂದು “ಸಂವಿಧಾನದ ಶಿಲ್ಪಿ” ಎಂಬುದನ್ನು ಪುನರ್ ಸೇರ್ಪಡೆ.

*7ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿತ್ತು. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2 ರಲ್ಲಿ ಭಕ್ತಿಪಂಥ ಎಂಬ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರ ಕುರಿತು ವಿಷಯಗಳು ಸಂಕ್ಷಿಪ್ತಗೊಳಿಸಲಾಗಿದೆ. ಆದ್ದರಿಂದ, 2021-22ನೇ ಸಾಲಿನ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಸಂಪೂರ್ಣ ಪಾಠ ಸೇರ್ಪಡೆ.

*7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147 ರಲ್ಲಿ “ಗೊಂಬೆ ಕಲಿಸುವ ನೀತಿ” ಪದ್ಯದ ಕೃತಿಕಾರರ ಹೆಸರು ಡಾ. ಆರ್.ಎನ್. ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ ರವರ ಕವಿ ಪರಿಚಯ ಸೇರ್ಪಡೆ ಮಾಡಲಾಗುತ್ತದೆ.

*6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಪಾಠ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ಪಾಠದಲ್ಲಿ ಸಿದ್ಧಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಕುರಿತಾದ ಸಮಾಜ ಸೇವೆಯ ಸಾಲುಗಳನ್ನು ಸೇರ್ಪಡೆಗೊಳಿಸಲಾಗುತ್ತದೆ.

*7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ “ಮೈಸೂರು ಮತ್ತು ಇತರ ಸಂಸ್ಥಾನಗಳು” ಎಂಬ ಪಾಠದಲ್ಲಿದ್ದ ಸುರಪುರ ನಾಯಕರ ಕುರಿತಾದ ವಿವರಗಳು ಸೇರ್ಪಡೆ.

* 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಠ್ಯಪುಸ್ತಕದಲ್ಲಿ ಭಾರತದ ಮತ ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ.

* 7ನೇ ತರಗತಿ ಸಮಾಜ ವಿಜ್ಞಾನ ಭಾಗ-2ರ ಪಠ್ಯಪುಸ್ತಕದ ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿವಿವಾದಗಳು ಎಂಬ ಪಾಠದ ರಾಷ್ಟ್ರಕವಿ ಕುವೆಂಪು ಹಾಗೂ ಹುಯಿಲಗೋಳ ನಾರಾಯಣರಾವ್ ಅವರ ಭಾವಚಿತ್ರಗಳನ್ನು ಸೇರಿಸಲಾಗಿದೆ.

* 4ನೇ ತರಗತಿಯ ಪರಿಸರ ಅಧ್ಯಯನ ಪ್ರತಿಯೊಬ್ಬರು ವಿಶಿಷ್ಟ ಎಂಬ ಪಾಠದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದು, ಬರೆಯುವ ಅಭ್ಯಾಸ ಇತ್ತು ಎಂಬ ವಾಕ್ಯದ ನಂತರ ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಸಾಲನ್ನು ಕೈಬಿಡುವುದು

ಈ ಎಲ್ಲ ತಿದ್ದುಪಡಿಗಳನ್ನು ಮರು ಸೇರ್ಪಡೆ ಮಾಡಲಾಗಿದೆ. ಈ ವಿಷಯಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಅಗತ್ಯವಿರುವ ತಿದ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಪಠ್ಯಪುಸ್ತಕಗಳ ಮುದ್ರಣಕ್ಕೆ ಕಾರ್ಯಾದೇಶ ಪಡೆದಿರುವ ಎಲ್-1 ದರ ನಮೂದಿಸಿರುವ ಮುದ್ರಕರಿಂದ ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಲಭ್ಯವಿರುವ ಅನುದಾನದಿಂದ ಭರಿಸಿ, ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಹಾಗೂ ಅನುದಾನರಹಿತ ಶಾಲೆಗಳಿಗೆ ಉಚಿತವಾಗಿ ತಲಾ ಒಂದು ಪ್ರತಿಯಂತೆ ವಿತರಿಸುವುದು ಎಂದು ತಿಳಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ನಿಮ್ಮ ಕಾಮೆಂಟ್ ಬರೆಯಿರಿ

advertisement