ಅಂಕೋಲಾ: ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಓರ್ವ ಸಾವು

ಅಂಕೋಲಾ: ಅಂಕೋಲಾ: ಸ್ವಿಪ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದ ನಂತರ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಹಾರವಾಡದ ರೈಲ್ವೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಉಳಿದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ಮಾಹಿತಿ ದೊರಕಿದೆ.

ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ. ಆಂಧಪ್ರದೇಶದ ಅನಂತಪುರದ ನಿವಾಸಿ, ವಿದ್ಯಾರ್ಥಿ ರವಿತೇಜ್ (21) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಾರು ಚಾಲಕ ಪವನ್ ಬಿ, ಬಾಲಚಂದ್ರ ಕೈತಾವರ, ಮೋಹನ ಸಾಯಿ, ಬೊಯೆಜ್ ಕುಮಾರ ಎಂಬವರು ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಇವರು
ಆಂಧ್ರ ಪ್ರದೇಶದ ಕಾಲೇಜಿನ 10 ವಿದ್ಯಾರ್ಥಿಗಳು ಎರಡು ಕಾರಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಸೋಮವಾರ ಬೆಳಿಗ್ಗೆ ಗೋಕರ್ಣವನ್ನು ವೀಕ್ಷಿಸಿ, ಸಂಜೆ ಅಂಕೋಲಾ ಮೂಲಕ ಗೋವಾದತ್ತ ಹೊರಟಿದ್ದರು. ಆಗ ನಿಯಂತ್ರಣ ತಪ್ಪಿ ಕಾರು ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಘಘಾತವಾಗಿದ್ದನ್ನು ಕಂಡ ಶಾಸಕಿ ರೂಪಾಲಿ ನಾಯ್ಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement