ಹೈದರಾಬಾದ್: ಗೋರಕ್ಷಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ಪೊಲೀಸರು ನೀಡಿದ್ದ ನೋಟಿಸ್ ರದ್ದುಗೊಳಿಸುವಂತೆ ಕೋರಿ ನಟಿ ಸಾಯಿ ಪಲ್ಲವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತೆಲಂಗಾಣ ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
ಸಾಯಿ ಪಲ್ಲವಿ ಕಾಮೆಂಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ ನಂತರ ಬಜರಂಗದಳದ ಕಾರ್ಯಕರ್ತರೊಬ್ಬರು ಅವರ ವಿರುದ್ಧ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ನಟಿಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ರದ್ದುಗೊಳಿಸುವಂತೆ ಕೋರಿ ನಟಿ ಸಾಯಿ ಪಲ್ಲವಿ ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಂತದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಕೆ ಲಲಿತಾ ಅವರು ಸಾಯಿ ಪಲ್ಲವಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದಾರೆ.
ವಿರಾಟಪರ್ವಂ’ ಚಿತ್ರದ ಪ್ರಚಾರದ ವೇಳೆ ಯೂ ಟ್ಯೂಬ್ ಚಾನಲ್ವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ, “ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎನ್ನುವುದು ನೋಡಿದ್ದೇವೆ. ಇದನ್ನು ನೀವು ಧಾರ್ಮಿಕ ಸಂಘರ್ಷ, ಹಿಂಸಾಚಾರ ಎಂದು ಹೇಳುವುದಾದರೆ, ಇತ್ತೀಚೆಗೆ ಹಸುವನ್ನು ಹೊತ್ತೊಯ್ಯುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ಬಲವಂತವಾಗಿ ಜೈ ಶ್ರೀರಾಮ್ ಎಂಬ ಘೋಷಣೆ ಹಾಕುವಂತೆ ಒತ್ತಾಯಿಸಲಾಗಿತ್ತು. ಹಾಗಿದ್ದರೆ ಈ ಎರಡು ಘಟನೆಗಳ ನಡುವೆ ಇರುವ ವ್ಯತ್ಯಾಸವೇನು?” ಎಂದು ಅವರು ಕೇಳಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ