ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡುವಂತಿಲ್ಲ : ರಾಜ್ಯ ಸರ್ಕಾರದ ಸೂಚನೆ

ಬೆಂಗಳೂರು: ಜುಲೈ 9 ಹಾಗೂ ಜುಲೈ 10 ರಂದು ದೇಶಾದ್ಯಂತ ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಹಬ್ಬದಂದು ರಾಜ್ಯದಲ್ಲಿ ಗೋಹತ್ಯೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸೂಚಿಸಿದೆ.
ಬಕ್ರೀದ್‌ ದಿನದಂದು ರಾಜ್ಯದಲ್ಲಿ ಗೋಹತ್ಯೆ ಮಾಡದಂತೆ ನೋಡಿಕೊಳ್ಳಲು ಸರ್ಕಾರವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಹಬ್ಬದ ಸಂದರ್ಭದಲ್ಲಿ ಹಸು, ಕರು, ಎತ್ತು, ಎಮ್ಮೆ ಮತ್ತು ಒಂಟೆಯನ್ನು ಕೊಲ್ಲುವಂತಿಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಕರುಗಳನ್ನು ಕೊಲ್ಲುವಂತಿಲ್ಲ. ಅವುಗಳನ್ನು ಸಾಗಾಟ ಮಾಡುವಂತೆಯೂ ಇಲ್ಲ ಎಂದು ಸೂಚಿಸಿದೆ.
ಅಲ್ಲದೆ, ಪೊಲೀಸ್‌ ಇಲಾಖೆ, ಪಶು ಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೂ ಹಬ್ಬದ ಆಚರಣೆ ಕುರಿತು ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕದ ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣೆ ಕಾಯ್ದೆ-2020 ಅನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರವು ಕಾರ್ಯಪಡೆಯನ್ನು ರಚಿಸಿದೆ.

ಪ್ರಮುಖ ಸುದ್ದಿ :-   ಮಾರ್ಚ್‌ 31ರೊಳಗೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಬದಲಾವಣೆ ಮಾಡಿ : ಬಿಜೆಪಿ ಹೈಕಮಾಂಡಿಗೆ ಮಠಾಧೀಶರ ಗಡುವು

ಬಕ್ರೀದ್ ಹಬ್ಬದ ಆಚರಣೆಯಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚೌಹಾಣ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ರಾಜ್ಯದಿಂದ ಅಥವಾ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಅಕ್ರಮ ಗೋವು ಮತ್ತು ಗೋಮಾಂಸ ಸಾಗಿಸದಂತೆ ಪಶುಸಂಗೋಪನೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ರಸ್ತೆ ಬದಿಯಲ್ಲಿ ನಮಾಜ್​ಗೆ ಅನುಮತಿಯಿಲ್ಲ
ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ರಸ್ತೆ ಬದಿಯಲ್ಲಿ ನಮಾಜ್ ಮಾಡದೇ ಇರಲು ಸೂಚಿಸಲಾಗಿದೆ. ಮಸೀದಿಗಳು, ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆ ಮಾಡಬೇಕು. ಮುಸ್ಲಿಮರ ಹಬ್ಬದ ಪ್ರಾರ್ಥನೆಗೆ ಅಡ್ಡಿಯಿಲ್ಲ‌. ಆದರೆ ರಸ್ತೆ ಬದಿಯಲ್ಲಿ ಮಾತ್ರ ನಮಾಜ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.
ಬಕ್ರೀದ್ ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement