ಸುಬ್ರಹ್ಮಣ್ಯದಲ್ಲಿ ಭಾರಿ ಮಳೆಗೆ ಗುಡ್ಡ ಕುಸಿದು ಇಬ್ಬರು ಮಕ್ಕಳ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಗುಡ್ಡವೊಂದು ಮನೆಯ ಮೇಲೇ ಕುಸಿದು, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ, ಸಾವಿಗೀಡಾದ ದುರಂತ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಬ್ರಹ್ಮಣ್ಯ ಕುಮಾರಧಾರದ ಸ್ನಾನಘಟ್ಟದ ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾಾರಿಯ ಪರ್ವತಮುಖಿ ಎಂಬಲ್ಲಿ ದುರಂತ ಸಂಭವಿಸಿದ್ದು, ಕುಸುಮಾಧರ – ರೂಪಾಶ್ರೀ ದಂಪತಿಯ ಮಕ್ಕಳಾದ ಶ್ರುತಿ (11), ಗಾನ (6) ಎಂಬ ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಗುಡ್ಡ ಕುಸಿತದಿಂದ ಮನೆ ನೆಲಸಮವಾದ ಕಾರಣ ಅದರ ಅಡಿ ಅವರು ಸಿಲುಕಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಸ್ಥಳೀಯಾಡಳಿತದವರು ದೌಡಾಯಿಸಿದ್ದು, ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ, ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ.

ಕುಮಾರಧಾರಾ ಸ್ನಾನಘಟ್ಟದ ಸಮೀಪವೇ ಇವರ ಮನೆ ಇದ್ದು, ಮನೆಯಿಂದ 100 ಮೀಟರ್ ದೂರದಲ್ಲಿ ಕುಸುಮಾಧರ ಅವರಿಗೆ ಅಂಗಡಿ ಇದೆ. ದಂಪತಿಗೆ ಮೂವರು ಮಕ್ಕಳಿದ್ದು, ದುರಂತ ಸಂಭವಿಸುವ ಸ್ವಲ್ಪ ಮೊದಲು ತಾಯಿ ರೂಪಶ್ರೀ ತನ್ನ ಕಿರಿಯ ಮಗುವಿನೊಂದಿಗೆ ಮನೆಯಿಂದ ಹೊರಗೆ ಹೋಗಿದ್ದರು. ಭಾರಿ ಮಳೆ ಹಿನ್ನೆಲೆಯಲ್ಲಿ ಮಕ್ಕಳನ್ನು ಎಚ್ಚರಿಸಲೆಂದು ತಂದೆ ಮನೆಗೆ ಬರುವ ವೇಳೆಗೆ ಗುಡ್ಡ ಕುಸಿತು ಮನೆ ಸಂಪೂರ್ಣ ನೆಲಸಮಗೊಂಡು ಅದರಡಿ ಮಕ್ಕಳು ಸಿಲುಕಿದ್ದರು. ಮಕ್ಕಳ ಮೃತದೇಹವನ್ನು ರಕ್ಷಣಾ ತಂಡ ಹೊರ ತೆಗೆದಿದೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement