ಬೆಳಗಾವಿ ನಗರದ ಮಧ್ಯೆ ಚಿರತೆ ದಾಳಿ: ಕಟ್ಟಡ ಕಾರ್ಮಿಕನಿಗೆ ಗಾಯ

ಬೆಳಗಾವಿ: ಬೆಳಗಾವಿಯ ಜಾಧವ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ನಗರದ ಮಧ್ಯ ಭಾಗದಲ್ಲಿಯೇ ಚಿರತೆ ದಾಳಿ ಮಾಡಿರುವುದರಿಂದ ಜನರು ಆತಂಕ್ಕೀಡಾಗಿದ್ದಾರೆ.
ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಎಂಬವರು ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ವೇಳೆ ಚಿರತೆ ಈ ವ್ಯಕ್ತಿ ಮೇಲೆ ದಾಳಿ ಮಾಡಿ ಭುಜಕ್ಕೆ ಪರಚಿದೆ.
ಇದನ್ನು ನೋಡಿ ಜನರು ಬೊಬ್ಬೆ ಹೊಡೆದ ನಂತರ ಪೊದೆಯಲ್ಲಿ ಅವಿತುಕೊಂಡಿದೆ.

ಇದೇ ಜಾಗದಲ್ಲಿರುವ ಯಶೋಧನ ಜಾಧವ ಎನ್ನುವವರ ಮನೆ ಪಕ್ಕದಲ್ಲೇ ಚಿರತೆ ಓಡಾಡಿದೆ ಎಂದು ಹೇಳಲಾಗಿದೆ. ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ. ಜಾಧವ ನಗರದ ಮನೆಯೊಂದರ ಮುಂದೆ ಹಾಕಿದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿದ್ದು ಕಂಡಿದೆ.
ಬೆಳಗಾವಿಯ ಜಾಧವ ನಗರದ ಪೊದೆಯಲ್ಲಿ ಅವಿತುಕೊಂಡ ಚಿರತೆ ಸೆರೆ ಹಿಡಿಯಲು ಗದಗದಿಂದ ತಂಡವೊಂದನ್ನು ಕರೆಸಲಾಗುತ್ತಿದೆ.
ಸ್ಥಳದಲ್ಲೇ ಬೀಡು ಬಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆ ಮೇಲೆ ನಿಗಾ ವಹಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ಚಿರತೆಯ ಚಲನ ವಲನದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಜನರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದು, ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement