ಡೋಲೋ 650 ತಯಾರಕ, ಇತರ 5 ಫಾರ್ಮಾ ಕಂಪನಿಗಳಿಂದ ಉಚಿತ ಉಡುಗೊರೆ ಪಡೆದ ವೈದ್ಯರ ವಿವರ ನೀಡಿ: ಐಟಿ ಇಲಾಖೆಗೆ ಎನ್‌ಎಂಸಿ ಪತ್ರ

ನವದೆಹಲಿ: ಡೊಲೊ 650 ಮಾತ್ರೆ ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಸೇರಿದಂತೆ ಆರು ಫಾರ್ಮಾ ಕಂಪನಿಗಳಿಂದ ಉಚಿತ ಹಣ ಪಡೆದಿರುವ ವೈದ್ಯರ ವಿವರಗಳನ್ನು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಮಾಹಿತಿ ಕೇಳಿದೆ.
ವ್ಯಾಪಕವಾಗಿ ಬಳಸಲಾಗುವ ಡೋಲೊ-650 ಟ್ಯಾಬ್ಲೆಟ್‌ನ ತಯಾರಕರು ಅನೈತಿಕ ಮಾರ್ಗ ಅನುಸರಿಸುತ್ತಿದೆ ಮತ್ತು ಅದರ ಉತ್ಪನ್ನಗಳ ಪ್ರಚಾರಕ್ಕೆ ಬದಲಾಗಿ ವೈದ್ಯಕೀಯ ವೃತ್ತಿಪರರಿಗೆ ಸುಮಾರು 1,000 ಕೋಟಿ ರೂಪಾಯಿಗಳನ್ನು ಉಚಿತವಾಗಿ ವಿತರಿಸಿದ್ದಾರೆ ಎಂದು ಜುಲೈನಲ್ಲಿ ಐಟಿ ಇಲಾಖೆಯ ಆಡಳಿತ ಮಂಡಳಿಯಾದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಆರೋಪಿಸಿದೆ.
ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಜುಲೈ 6 ರಂದು ದಾಳಿ ನಡೆಸಿತ್ತು.

ಈಗ ಆಗಸ್ಟ್ 3 ರಂದು ಸಿಬಿಡಿಟಿ ಅಧ್ಯಕ್ಷ ನಿತಿನ್ ಗುಪ್ತಾ ಅವರಿಗೆ ಎನ್‌ಎಂಸಿ ಪತ್ರ ಬರೆದಿದ್ದು, ಔಷಧ ತಯಾರಕ ಸಂಸ್ಥೆಗಳಿಂದ ಉಡುಗೊರೆ ಪಡೆದಿರುವ ವೈದ್ಯರ ನೋಂದಣಿ ಸಂಖ್ಯೆ ಮತ್ತು ವಿಳಾಸದ ಸಹಿತ ಹೆಸರುಗಳನ್ನು ಒದಗಿಸಿದರೆ, ಆ ವಿವರಗಳನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ರಾಜ್ಯಗಳ ವೈದ್ಯಕೀಯ ಮಂಡಳಿಗಳಿಗೆ ರವಾನಿಸಲಾಗುವುದು ಎಂದು ಪತ್ರದಲ್ಲಿ ಹೇಳಿದೆ.
ಪತ್ರದಲ್ಲಿ ಎನ್‌ಎಂಸಿಯ ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಶನ್ ಬೋರ್ಡ್ (ಇಎಮ್‌ಆರ್‌ಬಿ) ಸದಸ್ಯ ಡಾ ಯೋಗೇಂದರ್ ಮಲಿಕ್ ಅವರು, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಭಾರತೀಯ ವೈದ್ಯಕೀಯ ಮಂಡಳಿಯ (ವೃತ್ತಿಪರ ನಡವಳಿಕೆ. ಶಿಷ್ಟಾಚಾರ ಮತ್ತು ನೈತಿಕತೆ) ನಿಯಮಗಳು, 2002ರ ಸೆಕ್ಷನ್‌ 6.8ರ ಬಗ್ಗೆ ಗಮನ ಸೆಳೆದಿದ್ದು, ಸೆಕ್ಷನ್‌ 6.8 ಔಷಧೀಯ ಮತ್ತು ಸಂಬಂಧಿತ ಆರೋಗ್ಯ ವಲಯದ ಉದ್ಯಮದೊಂದಿಗಿನ ಅವರ ಸಂಬಂಧದಲ್ಲಿ ವೈದ್ಯರಿಗೆ ನೀತಿ ಸಂಹಿತೆಯನ್ನು ಸೂಚಿಸುತ್ತದೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ನೋಂದಾಯಿತ ವೈದ್ಯರಿಂದ ಆಗುವ ವೃತ್ತಿಪರ ದುಷ್ಕೃತ್ಯದ ಯಾವುದೇ ದೂರಿನ ಬಗ್ಗೆ ಸಂಬಂಧಿಸಿದ ರಾಜ್ಯ ವೈದ್ಯಕೀಯ ಮಂಡಳಿಯು ವ್ಯವಹರಿಸುತ್ತದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ನೈತಿಕತೆ- ವೈದ್ಯಕೀಯ ನೋಂದಣಿ ಮಂಡಳಿ(ಇಎಂಆರ್‌ಬಿ), ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ನೋಂದಾಯಿತ ವೈದ್ಯರ ನಡವಳಿಕೆಯಲ್ಲಿ ನೈತಿಕತೆಯನ್ನು ರೂಢಿಸಲು ಬದ್ಧವಾಗಿದೆ ಮತ್ತು ಯಾವುದೇ ದುರ್ನಡತೆಯನ್ನು ಸಹಿಸುವುದಿಲ್ಲ ಎಂದು ಎಂದು ಡಾ ಮಲಿಕ್ ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement