ಭಟ್ಕಳ: ಮೊಮ್ಮಗನನ್ನೇ ಅಪಹರಣ ಮಾಡಿಸಿದ್ದ ಅಜ್ಜ, ಗೋವಾದಲ್ಲಿ ಬಾಲಕನ ರಕ್ಷಿಸಿದ ಪೊಲೀಸರು

ಕಾರವಾರ: ಭಟ್ಕಳದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ ಸ್ಥಳೀಯ ನಿವಾಸಿ ಬಾಲಕನನ್ನು ಪೊಲೀಸರು ಗೋವಾದ ಕಲಂಗುಟ್ ಕಡಲತೀರದಲ್ಲಿ ಸೋಮವಾರ ಬೆಳಿಗ್ಗೆ ರಕ್ಷಿಸಿದ್ದು, ಹಣಕಾಸಿನ ವ್ಯವಹಾರದ ಸಂಬಂಧ ಬಾಲಕನ ಅಜ್ಜನೇ (ತಾಯಿಯ ಮಾವ) ಅಪಹರಣ ಮಾಡಿಸಿದ್ದಾನೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಭಟ್ಕಳದ ಆಜಾದ್‌ ನಗರದ ಎಂಟು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಇಂದು ಗೋವಾದ ಕಲ್ಲಂಗುಟ್ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದಾನೆ. ಬಾಲಕನ ಜೊತೆಗಿದ್ದ ಓರ್ವ ಆರೋಪಿಯನ್ನು ಬಂಧನ ಮಾಡಲಾಗಿದೆ. ಭಟ್ಕಳದ ಬದ್ರಿಯಾ ನಿವಾಸಿ ಅನೀಸ್ ಬಾಷಾ (29) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಚಾಕು ಮತ್ತು ವಾಹನವನ್ನು ಜಪ್ತಿ ಮಾಡಲಾಗಿದೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಒಟ್ಟು ನಾಲ್ವರು ಅಪಹರಣ ಮಾಡಿದ್ದರು. ಉಳಿದವರ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದುಹೇಳಿದರು.

ಕಾರವಾರದಲ್ಲಿ ಸೋಮವಾರ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರು, ಆಗಸ್ಟ್‌ 20ರಂದು ರಾತ್ರಿ 8ರ ಸುಮಾರಿಗೆ ಬಾಲಕ ಮನೆಯ ಸಮೀಪದ ಅಂಗಡಿಯಲ್ಲಿ ಬ್ರೆಡ್ ಖರೀದಿಸಿ ವಾಪಸ್‌ ಆಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಆತನನ್ನು ಅಪಹರಿಸಿದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಸಂಬಂಧ ಭಟ್ಕಳ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಐದು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ದಾಖಲೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಅಪಹರಣವಾಗಿದ್ದ ಬಾಲಕನ ತಂದೆ ಹಾಗೂ ಅವರ ಪತ್ನಿಯ ಮಾವ, ಪ್ರಮುಖ ಆರೋಪಿ ಇನಾಯತ್ ಉಲ್ಲಾ ನಡುವೆ ಹಣಕಾಸಿನ ವ್ಯವಹಾರವಿತ್ತು. ಇನಾಯತ್‌ ಉಲ್ಲಾ ದುಬೈನಲ್ಲಿದ್ದು ಅಲ್ಲಿಂದಲೇ ಅಪಹರಣ ಮಾಡಿಸಿದ್ದಾನೆ. ಹಣ ನೀಡುವಂತೆ ಮಾಡಲು ಒತ್ತಡ ಹೇರುವ ಸಲುವಾಗಿ ಈತ ಬಾಲಕನನ್ನು ಅಪಹರಣ ಮಾಡಿಸಿದ್ದ. ಸೆರೆ ಸಿಕ್ಕಿರುವ ಆರೋಪಿ ಅನೀಸ್ ಎಂಬಾತ ಇನಾಯತ್‌ ಅವರ ಕೋಳಿ ಅಂಗಡಿ ನಡೆಸುತ್ತಿದ್ದ. ಇನಾಯತ್ ಅವರ ಸೂಚನೆಯ ಮೇರೆಗೆ ಅಪಹರಣ ಮಾಡಲಾಗಿದೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದರು.
ಈ ಪ್ರಕರಣದ ನಂತರ ಭಟ್ಕಳದಲ್ಲಿ ಮಕ್ಕಳನ್ನು ಹೊರಗೆ ಕಳುಹಿಸಲು ಪಾಲಕರು ಭಯ ಪಡುತ್ತಿರುವ ಮಾಹಿತಿಯಿದೆ. ಆದರೆ, ಇದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹವಾಗಿದೆ. ಹಾಗಾಗಿ ಪಾಲಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬಾಲಕನನ್ನು ರಕ್ಷಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement