ಲೇಖಕಿ, ನಿವೃತ್ತ ಆಕಾಶವಾಣಿ ನಿರ್ದೇಶಕಿ ಜ್ಯೋತ್ಸ್ನಾ ಕಾಮತ್‌ ಇನ್ನಿಲ್ಲ

ಕುಮಟಾ: ಸಂಶೋಧಕಿ ಹಾಗೂ ಲೇಖಕಿ ಜ್ಯೋತ್ಸ್ನಾ ಕಾಮತ್ (86) ಬೆಂಗಳೂರಿನಲ್ಲಿ ಬುಧವಾರ ನಿಧನರಾಗಿದ್ದಾರೆ.
ಮಲ್ಲೇಶ್ವರದ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.
ಮೃತರು ಮಗ ವಿಕಾಸ್ ಕಾಮತ್, ಸೊಸೆ ಕಿಮ್ ಕಾಮತ್ ಹಾಗೂ ಮೊಮ್ಮಗಳು ಮೀನಾ ಕಾಮತ್ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಜ್ಯೋತ್ಸ್ನಾ ಕಾಮತ್‌ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 1937ರಲ್ಲಿ ಜನಿಸಿದ್ದರು. ಜ್ಯೋತ್ಸ್ನಾ ಅವರ ತಂದೆ ಗಣೇಶ ರಾವ್‌ ಪೋಸ್ಟ್‌ ಮಾಸ್ತರರಾಗಿದ್ದರು. ಇಂಗ್ಲಿಷ್‌, ಕನ್ನಡ ಸಾಹಿತ್ಯ ಪ್ರಿಯರಾಗಿದ್ದರು. ಕುಮಟಾದ ಕೆನರಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಅವರು, ಧಾರವಾಡದ ವನಿತಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಎಂ.ಎ. ಪದವಿ ಪಡೆದ ನಂತರ 1964ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರ್ಪಡೆಯಾದರು. ಮೈಸೂರು, ಬೆಂಗಳೂರು ಕೋಲ್ಕತ್ತ, ಜೈಪುರ, ಮುಂಬೈ ನಗರಗಳಲ್ಲಿ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ 1994ರಲ್ಲಿ ನಿವೃತ್ತಿ ಹೊಂದಿದರು.

ಅಲೆಮಾರಿ ಸಾಹಿತಿ ಎಂದು ಪ್ರಸಿದ್ಧರಾಗಿದ್ದ ಹೊನ್ನಾವರ ಕೃಷ್ಣಾನಂದ ಕಾಮತರನ್ನು 1966ರಲ್ಲಿ ವಿವಾಹವಾದ ಜ್ಯೋತ್ಸ್ನಾ ಸಮಾನ ಆಸಕ್ತಿ, ಮನೋಭಾವ, ಧ್ಯೇಯಗಳಿಂದಾಗಿ ಆದರ್ಶ ಸಾಹಿತಿಗಳ ಜೋಡಿ ಎನಿಸಿಕೊಂಡರು.
‘ಸಂಸಾರದಲ್ಲಿ ಸ್ವಾರಸ್ಯ’, ‘ಕರ್ನಾಟಕ ಶಿಕ್ಷಣ ಪರಂಪರೆ’, ‘ಹೀಗಿದ್ದೇವೆ ನಾವು, ‘ನೆನಪಿನಲ್ಲಿ ನಿಂತವರು’, ‘ನಗೆ ಕೇದಿಗೆ’ ಹಾಗೂ ‘ನಗೆ ನವಿಲು’ ಅವರ ಪ್ರಮುಖ ಕೃತಿಗಳಾಗಿವೆ.
1991ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’, ಕೆ ಶಾಮರಾವ್ ಮತ್ತು ಡಾ ಟಿ ಎಂ ಎ ಪೈ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರ ‘ಕರ್ನಾಟಕ ಶಿಕ್ಷಣ ಪರಂಪರೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ, ಕನ್ನಡ ಸಾಹಿತ್ಯ ಸಂಶೋಧನೆಗಾಗಿ ‘ಕಿಟ್ಟೆಲ್ ಪುರಸ್ಕಾರ’ ದೊರೆತಿವೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement