
ಮಂಡ್ಯ: ಗ್ಯಾಂಗ್ರೀನ್ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ್ದ ರೋಗಿಯ ಕಾಲನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಕೊಟ್ಟ ಘಟನೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ.
ತಾಲೂಕಿನ ಕೀಲಾರ ಗ್ರಾಮದ ಭಾಗ್ಯಮ್ಮ ಎಂಬವರ ಪತಿ ಪ್ರಕಾಶ ಅವರ ಕಾಲಿಗೆ ಗ್ಯಾಂಗ್ರೀನ್ ಆಗಿದ್ದ ಕಾರಣ ಅವರನ್ನು ಮಂಗಳವಾರ ಮಿಮ್ಸ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆತನ ಕಾಲನ್ನು ಕತ್ತರಿಸಿ ಕವರ್ನಲ್ಲಿ ಸುತ್ತಿ ಎಲ್ಲಾದರೂ ಮಣ್ಣು ಮಾಡುವಂತೆ ಪತ್ನಿಯ ಕೈಗೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದರಿಂದ ದಿಗ್ಬಮ್ರೆಗೊಂಡ ಪತ್ನಿ ದಿಕ್ಕು ತೋಚದ ಅಳುತ್ತಾ ನಿಂತಿದ್ದರು. ಇದನ್ನು ಕಂಡ ಸಾರ್ವಜನಿಕರು ಮಿಮ್ಸ್ ಅಧಿಕಾರಿಗಳು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದ ಬಗ್ಗೆಯೂ ವರದಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಸಾರ್ವಜನಿಕರ ಆಕ್ರೋಶವೂ ಹೆಚ್ಚಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಕತ್ತರಿಸಿದ ಕಾಲನ್ನು ವಾಪಸ್ ಪಡೆದಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಬಿ.ಜೆ.ಮಹೇಂದ್ರ, ರೋಗಿಯ ಮೊಣಕಾಲಿನ ಕೆಳ ಭಾಗವನ್ನು ತೆಗೆಯಲಾಗಿತ್ತು. ಅದನ್ನು ರೂಲ್ಸ್ ಪ್ರಕಾರ ಕೊಡಬಾರದು. ಅದನ್ನು ಡಿಸ್ಪೋಸಲ್ ಅಗ್ರಿಮೆಂಟ್ ಮಾಡಿಕೊಂಡಿರುವವರ ಮೂಲಕ ಡಿಸ್ಪೋಸ್ ಮಾಡಿಸಬೇಕು. ದುರಾದೃಷ್ಟಾವಶಾತ್ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಸಿಬ್ಬಂದಿ ಕೊಟ್ಟಿದ್ದಾರೆ. ನನ್ನ ಗಮನಕ್ಕೆ ಬಂದ ತಕ್ಷಣ ವಾಪಸ್ ಪಡೆಯಲಾಗಿದೆ. ನಿಮಯಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಘಟನೆ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಆಸ್ಪತ್ರೆಯ ತ್ಯಾಜ್ಯವನ್ನು ರೂಲ್ಸ್ ಪ್ರಕಾರವೇ ವಿಲೇವಾರಿ ಮಾಡಲು ಸುತ್ತೋಲೆ ಹೊರಡಿಸಿದ್ದೇನೆ. ಕಾನೂನು ಬಾಹಿರ ವಿಲೇವಾರಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ